ಸಂಭ್ರಮದಿಂದ ಶ್ರಾವಣದ ಎರಡನೇ ಶುಕ್ರವಾರ ಆಚರಿಸಲ್ಪಡುವ ವರ ಮಹಾಲಕ್ಷ್ಮಿ ಹಬ್ಬ ಆಚರಣೆ

KannadaprabhaNewsNetwork |  
Published : Aug 17, 2024, 01:57 AM ISTUpdated : Aug 17, 2024, 05:46 AM IST
Shree Prasanna Mahalakshmi Sannidhi Mahalakshmi Layout 5 | Kannada Prabha

ಸಾರಾಂಶ

ಶ್ರಾವಣದ ಎರಡನೇ ಶುಕ್ರವಾರ ಆಚರಿಸಲ್ಪಡುವ ವರಮಹಾಲಕ್ಷ್ಮಿ ಹಬ್ಬವನ್ನು ನಗರದಲ್ಲಿ ಭಕ್ತಿಭಾವ, ಸಂಭ್ರಮದಿಂದ ಆಚರಿಸಲಾಯಿತು. ವಿಶೇಷವಾಗಿ ಮಹಿಳೆಯರು ಲಕ್ಷ್ಮೀದೇವಿಯನ್ನು ಮನೆಗಳಲ್ಲಿ ಪೂಜಿಸಿ ಬಳಿಕ ನೆರೆಹೊರೆಯವರಿಗೆ ಬಾಗಿನ ಕೊಟ್ಟರು.

 ಬೆಂಗಳೂರು :  ಶ್ರಾವಣದ ಎರಡನೇ ಶುಕ್ರವಾರ ಆಚರಿಸಲ್ಪಡುವ ವರಮಹಾಲಕ್ಷ್ಮಿ ಹಬ್ಬವನ್ನು ನಗರದಲ್ಲಿ ಭಕ್ತಿಭಾವ, ಸಂಭ್ರಮದಿಂದ ಆಚರಿಸಲಾಯಿತು. ವಿಶೇಷವಾಗಿ ಮಹಿಳೆಯರು ಲಕ್ಷ್ಮೀದೇವಿಯನ್ನು ಮನೆಗಳಲ್ಲಿ ಪೂಜಿಸಿ ಬಳಿಕ ನೆರೆಹೊರೆಯವರಿಗೆ ಬಾಗಿನ ಕೊಟ್ಟರು.

ಬೆಳಗ್ಗೆ ನಗರದ ಲಕ್ಷ್ಮಿ ದೇವಸ್ಥಾನಗಳಲ್ಲಿ ಹಬ್ಬದ ಪೂಜೆಗಳು ನೆರವೇರಿದವು. ಜನತೆ ಸಂಜೆ ಮನೆಗಳಲ್ಲಿ ದೇವತೆ ವರಮಹಾಲಕ್ಷ್ಮೀಯನ್ನು ವಿಶೇಷವಾಗಿ ಅಲಂಕರಿಸಿ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪೂಜಿಸಿ ಸಂಪತ್ತು, ಅಭಿವೃದ್ಧಿಗಾಗಿ ಪ್ರಾರ್ಥಿಸಿದರು.

ಬನಶಂಕರಿ ದೇವಿಗೆ ಹಣದಿಂದಲೇ ಅಲಂಕಾರ ಮಾಡಿದ್ದು ವಿಶೇಷವಾಗಿತ್ತು. ಅಮ್ಮನವರಿಗೆ ₹10, ₹20 ಮತ್ತು ₹50 ನೋಟು ಬಳಸಿಕೊಂಡು ಮಾಡಿರುವ ಅಲಂಕಾರ ಭಕ್ತರ ಗಮನ ಸೆಳೆಯಿತು. ಅದೇ ರೀತಿ ವಿಲ್ಸನ್‌ ಗಾರ್ಡನ್‌ನ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ದೇವಿಯನ್ನು ₹500 ಸೇರಿ ಎಲ್ಲ ನೋಟುಗಳಿಂದ ಅಲಂಕಾರ ಮಾಡಲಾಗಿತ್ತು.

ಇಸ್ಕಾನ್‌ನ ಲಕ್ಷ್ಮೀನರಸಿಂಹ ದೇವಸ್ಥಾನ, ಶೇಷಾದ್ರಿಪುರ, ದೊಮ್ಮಲೂರು, ಕೋರಮಂಗಲ, ಲಗ್ಗೆರೆಯ ಎಂಇಐ ಕಾಲೋನಿ, ಕೋಣನಕುಂಟೆ, ಜೆ.ಪಿ.ನಗರ, ತ್ಯಾಗರಾಜನಗರ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್‌ನ ಮಹಾಲಕ್ಷ್ಮಿ ಸನ್ನಿಧಿ ಸೇರಿ ಹಲವೆಡೆ ಲಕ್ಷ್ಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ದೇವಿಗೆ ಬೆಳಗ್ಗೆ ಪಂಚಾಮೃತ ಅಭಿಷೇಕ, ಮಹಾಲಕ್ಷ್ಮಿ ಹೋಮ, ಶಾಂತಿ ಹೋಮ ನೆರವೇರಿಸಿ, ಚಿನ್ನಾಭರಣಗಳಿಂದ ವಿಶೇಷ ಅಲಂಕಾರಗೊಳಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ವೈಯಾಲಿಕಾವಲ್‌ನ ಲಕ್ಷ್ಮಿ ದೇಗುಲದಲ್ಲಿ ದರ್ಶನಕ್ಕಾಗಿ ಭಕ್ತರು ಸಾಲುಗಟ್ಟಿ ನಿಂತಿದ್ದು ಕಂಡುಬಂತು. ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಇನ್ನು ಮನೆಗಳಲ್ಲಿ ಲಕ್ಷ್ಮಿಗೆ ಪ್ರಿಯವಾದ ತಿನಿಸುಗಳಾದ ಕಡಲೇಬೇಳೆಯ ಹಯಗ್ರೀವ, ಪಾಯಸ, ಹೋಳಿಗೆ ಇತ್ಯಾದಿಗಳನ್ನೆಲ್ಲ ತಯಾರಿಸಿ ನೈವೇದ್ಯಕ್ಕೆ ಇಟ್ಟು ಪೂಜಿಸಿದರು. ಪೂಜೆಗೂ ಮುನ್ನ ವಿಘ್ನನಿವಾರಕ ಗಣಪತಿಯನ್ನು ಪ್ರಾರ್ಥಿಸಿ ವರಲಕ್ಷ್ಮಿ ವ್ರತವನ್ನು ಆರಂಭಿಸುವುದು ವಾಡಿಕೆ. ಅಕ್ಕಪಕ್ಕದ ಮನೆ ಹಾಗೂ ಆಪ್ತ ಮುತ್ತೈದೆಯರನ್ನು ಕರೆಸಿ ಅವರಿಗೆ ಅರಿಶಿನ ಕುಂಕುಮದ ಜೊತೆಗೆ ಬಾಗಿನ ಕೊಡುವುದು ಸಂಪ್ರದಾಯ ಆಚರಿಸಿದರು.

ಹೊಸದಾಗಿ ಮದುವೆಯಾದವರು ಮೊದಲ ವರ್ಷದಿಂದ ಐದು ವರ್ಷ ಅಥವಾ ಒಂಭತ್ತು ವರ್ಷಗಳ ಕಾಲ ಈ ವ್ರತದಲ್ಲಿ ಭಾಗಿಯಾಗುವುದು ಒಳ್ಳೆಯದು ಎಂಬ ನಂಬಿಕೆ ಹಿನ್ನೆಲೆಯಲ್ಲಿ ನವವಿವಾಹಿತರು ಹೆಚ್ಚಾಗಿ ಲಕ್ಷ್ಮೀವ್ರತ ಆಚರಿಸಿದರು. ಅರಿಶಿನ, ಕುಂಕುಮ, ಬಳೆಯ ಬಾಗಿನವನ್ನು ವಿತರಿಸಿದರು.

ಇನ್ನು, ಶುಕ್ರವಾರ ಬೆಳಗ್ಗೆ ಕೆ.ಆರ್. ಮಾರ್ಕೆಟ್‌ನಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಗ್ರಾಹಕರ ಖರೀದಿ ಜೋರಾಗಿತ್ತು. ಹೂವು, ಹಣ್ಣು ಸೇರಿದಂತೆ ದೇವಿ ಅಲಂಕಾರಕ್ಕೆ ಬೇಕಾದ ವಸ್ತುಗಳನ್ನು ಕೊಳ್ಳಲು ಮಹಿಳೆಯರು ಮುಗಿಬಿದ್ದಿದ್ದರು.

PREV

Recommended Stories

ಛಾಯಾಗ್ರಾಹಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ
ಹಿಂದೂ ಸಮಾಜ ಸಂಘಟನೆಗೆ ಆರ್‌ಎಸ್ಎಸ್‌ ಪಾತ್ರ ಅಗಾಧ