- ನಿಕಟಪೂರ್ವ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅವರಿಗೆ ಬೀಳ್ಕೊಡುಗೆ । ಜಿಲ್ಲಾಡಳಿತ ಭವನದಲ್ಲಿ ಕಾರ್ಯಕ್ರಮ
ಕಳೆದೊಂದು ವರ್ಷದಿಂದ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದ ಡಾ. ಎಂ.ವಿ. ವೆಂಕಟೇಶ್ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಮತ್ತು ನೂತನ ಜಿಲ್ಲಾಧಿಕಾರಿಯಾಗಿ ಆಗಮಿಸಿರುವ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಸ್ವಾಗತ ಕೋರಲಾಯಿತು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಬುಧವಾರ ಸಂಜೆ ಬೀಳ್ಕೊಡುಗೆ ಹಾಗೂ ಸ್ವಾಗತ ಕಾರ್ಯಕ್ರಮವನ್ನು ವಿವಿಧ ಇಲಾಖೆ, ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿತ್ತು.ಈ ವೇಳೆ ಮಾತನಾಡಿದ ನಿಕಟಪೂರ್ವ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ಅಧಿಕಾರಿಗಳೊಂದಿಗೆ ತಂಡದ ರೀತಿಯಲ್ಲಿ ಕೆಲಸ ಮಾಡಿದ್ದರಿಂದ ಅನೇಕ ವರ್ಷಗಳಿಂದ ಬಗೆಹರಿಯದೇ ಇದ್ದ ಮತ್ತು ಜಟಿಲವಾದ ಸಮಸ್ಯೆಗಳನ್ನು ಇತ್ಯರ್ಥ ಮಾಡಲಾಗಿದೆ. ಇದಕ್ಕೆ ಬೇಕಾದ ಎಲ್ಲ ಸಹಕಾರ ಜನಪ್ರತಿನಿಧಿಗಳಿಂದ ಸಿಕ್ಕಿದ್ದರಿಂದ ಅಲ್ಪ ಅವಧಿಯಲ್ಲಿ ಗುರುತರವಾದ ಕೆಲಸ ಮಾಡಲು ಸಾಧ್ಯವಾಗಿತು ಎಂದರು.
ಎಲ್ಲಾ ಇಲಾಖೆ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದರಿಂದ ದಾವಣಗೆರೆ ಜಿಲ್ಲೆ ಹಲವು ಪ್ರಗತಿಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಅದು ಲ್ಯಾಂಡ್ ಬೀಟ್, ಪಹಣಿಗೆ ಆಧಾರ್ ಜೋಡಣೆ ಸೇರಿದಂತೆ ರಾಜ್ಯದಲ್ಲಿ ಗುರುತಿಸಿಕೊಂಡ ಜಿಲ್ಲೆಯಾಗಿದೆ ಎಂದರು.
ನೂತನ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರ ಸಹಕಾರ, ಎಲ್ಲರೊಟ್ಟಿಗೆ ಸೇರಿ ಜಿಲ್ಲೆಯ ಅಭಿವೃದ್ಧಿ ಮಾಡೋಣ, ಸಮಸ್ಯೆ ಬರುತ್ತವೆ. ಬಂದ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿಯೇ ಅಧಿಕಾರಿ ವರ್ಗ ಇರುವುದು. ತಂಡವಾಗಿ ಕೆಲಸ ಮಾಡೋಣ ಎಂದರು.
ಈ ಸಂದರ್ಭ ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ನ್ಯಾಯಮೂರ್ತಿಗಳಾದ ಸುಭಾಷ್ ಬಿ. ಆಡಿ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ ಎಂ.ಸಂತೋಷ್, ಪಾಲಿಕೆ ಆಯುಕ್ತರಾದ ರೇಣುಕಾ, ಉಪವಿಭಾಗಾಧಿಕಾರಿ ದುರ್ಗಾಶ್ರೀ, ವಿ. ಅಭಿಷೇಕ್, ನಿಕಟ ಪೂರ್ವ ಹಾಗೂ ನೂತನ ಜಿಲ್ಲಾಧಿಕಾರಿ ಅವರ ಶ್ರೀಮತಿಯವರು, ಕುಟುಂಬ ವರ್ಗ ಹಾಗೂ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ದಾವಣಗೆರೆಯಲ್ಲಿ ಬುಧವಾರ ನಿಟಕಪೂರ್ವ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅವರಿಗೆ ಬೀಳ್ಕೊಡುಗೆ ಮತ್ತು ನೂತನ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು.