ಗೋ ಬ್ಯಾಕ್ ಪ್ರಾಯೋಜಿತ ಕಾರ್ಯಕ್ರಮ: ಶೋಭಾ ಕರಂದ್ಲಾಜೆ ಕೆಂಡಾಮಂಡಲ

KannadaprabhaNewsNetwork | Published : Feb 25, 2024 1:45 AM

ಸಾರಾಂಶ

ಗೋ ಬ್ಯಾಕ್ ಶೋಭಾ ಒಂದು ಸ್ಪಾನ್ಸರ್ಡ್‌ ಕಾರ್ಯಕ್ರಮ. ಒಬ್ಬರ ತೇಜೋವಧೆ, ಅವಮಾನ ಮಾಡಿ ಆಕಾಂಕ್ಷಿಗಳು ಟಿಕೆಟ್ ಕೇಳಬಾರದು ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಗೋ ಬ್ಯಾಕ್ ಶೋಭಾ ಒಂದು ಸ್ಪಾನ್ಸರ್ಡ್‌ ಕಾರ್ಯಕ್ರಮ. ಒಬ್ಬರ ತೇಜೋವಧೆ, ಅವಮಾನ ಮಾಡಿ ಆಕಾಂಕ್ಷಿಗಳು ಟಿಕೆಟ್ ಕೇಳಬಾರದು ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆಯಾಗಲಿ. ನಿಜವಾದ, ನಿಷ್ಟಾವಂತ ಕಾರ್ಯಕರ್ತರು ಗೋ ಬ್ಯಾಕ್‌ ಶೋಭಾ ಎಂದು ಹೇಳುವುದಿಲ್ಲ ಎಂದರು. ಅಧಿಕಾರಕ್ಕಾಗಿ ಬರುವವರು ಹೋಗುವವರು ಈ ರೀತಿಯಲ್ಲಿ ಮಾಡುತ್ತಾರೆ. ಆ ಪಾರ್ಟಿಯಲ್ಲಿ ಮಾಡಿರೋ ರೂಢಿ ಇರುತ್ತದೆ. ಒಬ್ಬ ವ್ಯಕ್ತಿ 10-20 ಕಾರ್ಡ್‌ಗಳನ್ನು ಕೈಯಲ್ಲಿ ಹಿಡಿದುಕೊಂಡಿರುವುದನ್ನು ನೋಡಿದ್ದೇವೆ. ಆತನನ್ನು ನೋಡಿದರೆ ಯಾರೋ ಸ್ಪೋನ್ಸೋರ್ಡ್‌ ಮಾಡಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು.

ವಿರೋಧ ಪಕ್ಷದವರು ಇರಬಹುದು, ನಮ್ಮ ಪಕ್ಷದವರು ಇರಬಹುದು. ಅಭಿವೃದ್ಧಿ ವಿಷಯದಲ್ಲಿ ಈ ಜಿಲ್ಲೆಯಲ್ಲಿ ಚರ್ಚೆ ಯಾಗ ಬೇಕು. ಬಿಜೆಪಿ, ಪ್ರಜಾಪ್ರಭುತ್ವ ರೀತಿಯಲ್ಲೇ ಚುನಾವಣೆ ಮಾಡುತ್ತಿದೆ. ಇದಕ್ಕೆ ಗೌರವ ಇದೆ. ಪ್ರಜಾಪ್ರಭುತ್ವದಲ್ಲಿ ಟಿಕೆಟ್ ಕೇಳಲು ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ಇದೆ. ಇಲ್ಲಿ ಸರ್ವಾಧಿಕಾರ ನಡೆಯೋದಿಲ್ಲ. ಟಿಕೆಟ್ ಕೇಳುವಾಗ ಇನ್ನೊಬ್ಬರ ತೇಜೋವಧೆ ಮಾಡಿ ಅಪಮಾನಿಸಿ ಅನವಶ್ಯಕ ಅಪಪ್ರಚಾರ ಮಾಡಿ ಟಿಕೆಟ್ ಕೇಳಬಾರದು ಎಂದು ಹೇಳಿದರು. ಒಂದು ರು.ಲಂಚ ತೆಗೆದುಕೊಳ್ಳದೆ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಮೋದಿಗೆ ಒಳ್ಳೆಯ ಹೆಸರು ಬರಬೇಕು ಆ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ನನ್ನ ವಿರುದ್ಧ ಏನೇ ಅಪಪ್ರಚಾರ ಮಾಡಿದರು, ಅಭಿಯಾನ ಮಾಡಿದರೂ ಯಾವುದೇ ಎಫೆಕ್ಟ್‌ ಆಗೋದಿಲ್ಲ. ಸಂಸದೆಯಾಗಿ ಸಚಿವೆಯಾಗಿ ಒಳ್ಳೆಯ ಕೆಲಸ ಮಾಡಿದ್ದೇನೆ. ಕಳೆದ ಚುನಾವಣೆಯಲ್ಲೂ ಇದೇ ರೀತಿ ಅಪಪ್ರಚಾರ ಮಾಡಿದ್ದರು ಎಂದರು. ಅಪಪ್ರಚಾರ, ತೇಜೋವಧೆಯನ್ನು ಜನರು ಮತ್ತು ಹೈ ಕಮಾಂಡ್ ಗಮನಿಸುತ್ತಿದ್ದು, ಇದಕ್ಕೆಲ್ಲ ಉತ್ತರ ಯಾರು ಕೊಡ ಬೇಕೋ ಅವರೇ ಕೊಡುತ್ತಾರೆ. ಗೋ ಬ್ಯಾಕ್ ಕಳೆದ ಬಾರಿಯೂ ನಡೆದಿತ್ತು. ರಾಜಕಾರಣದಲ್ಲಿ ಇದೆಲ್ಲಾ ಇರುವಂತದ್ದೆ. ರಾಜಕೀಯಕ್ಕೆ ಬಂದ ಮೇಲೆ ಫೆಸ್ ಮಾಡಬೇಕು ಎಂದ ಅವರು, ಗೋಡೆಗೆ ಬಾಲ್ ಹೊಡೆದಷ್ಟು ನಮ್ಮ ಕೈ ಗಟ್ಟಿಯಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪಕ್ಷದ ಚುನಾವಣಾ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಚುನಾವಣೆ ಟಿಕೆಟ್ ಪಕ್ಷ ನಿರ್ಧಾರ ಮಾಡುತ್ತಿದೆ. ರಸ್ತೆಯಲ್ಲಿ ನಿರ್ಧಾರ ಆಗೋದಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

Share this article