ರಾಜ್ಯ ಸರ್ಕಾರದಿಂದಲೇ ಗೋ ಹಂತಕರಿಗೆ ಕುಮ್ಮಕ್ಕು

KannadaprabhaNewsNetwork | Published : Jan 16, 2025 12:46 AM

ಸಾರಾಂಶ

ಶಿವಮೊಗ್ಗ: ರಾಜ್ಯ ಸರ್ಕಾರ ಗೋ ಹಂತಕರಿಗೆ ಬೆಂಬಲ ನೀಡುತ್ತಿದ್ದು, ಗೋಮಾತೆ ಕೆಚ್ಚಲು ಕೊಯ್ದದ್ದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಗೋ ಮಾತೆಯ ಶಾಪಕ್ಕೆ ಬಲಿಯಾಗಲಿದೆ ಎಂದು ಮಾಜಿ ಡಿಸಿಎಂ, ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ: ರಾಜ್ಯ ಸರ್ಕಾರ ಗೋ ಹಂತಕರಿಗೆ ಬೆಂಬಲ ನೀಡುತ್ತಿದ್ದು, ಗೋಮಾತೆ ಕೆಚ್ಚಲು ಕೊಯ್ದದ್ದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಗೋ ಮಾತೆಯ ಶಾಪಕ್ಕೆ ಬಲಿಯಾಗಲಿದೆ ಎಂದು ಮಾಜಿ ಡಿಸಿಎಂ, ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಘಟನೆ ವಿರೋಧಿಸಿ ಜ.16ರಂದು ಬೆಳಗ್ಗೆ 10.30ಕ್ಕೆ ರಾಷ್ಟ್ರ ಭಕ್ತರ ಬಳಗದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರ ಈ ಘಟನೆಯ ಹಿಂದೆ ಇರುವ ಶಕ್ತಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಲಾಗುವುದು ಎಂದು ತಿಳಿಸಿದರು. ಇತ್ತೀಚೆಗೆ ನಡೆದ ಗೋಹತ್ಯೆ, ಕೆಚ್ಚಲು ಕೊಯ್ದ ಪ್ರಕರಣ ಇಡೀ ಹಿಂದೂಗಳ ಮನಸ್ಸನ್ನು ನೋಯಿಸಿದೆ. ಆಕ್ರೋಶ ಬರುವಂತೆ ಮಾಡಿದೆ. ಸರ್ಕಾರ ಗೋಮಾತೆಯ ಶಾಪಕ್ಕೆ ಬಲಿಯಾಗಲಿದೆ. ರಾಜ್ಯ ಸರ್ಕಾರ ಹಿಂದೂಗಳಿಗೆ ಅಲಕ್ಷ್ಯದ ಜೊತೆಗೆ ಗೋ ಹಂತಕರಿಗೆ ಬೆಂಬಲಿಸುತ್ತಿದೆ ಎಂದು ದೂರಿದರು.

ನಸ್ರು ಕುಡುಕ, ಹುಚ್ಚ ಆಗಿದ್ರೆ ಕರ್ಣ ಮನೆಗೆ ಹೋಗಿ ಮೂರು ಆಕಳ ಕೆಚ್ಚಲು ಕೊಯ್ದಿದ್ದರ ಹಿಂದೆ ರಾಷ್ಟ್ರದ್ರೋಹಿತನವಿದೆ. ಈ ಪಾಪಕ್ಕೆ ರಾಜ್ಯ ಸರ್ಕಾರ ಉಳಿಯೋದು ಕಷ್ಟ. ಪೊಲೀಸ್ ಅಧಿಕಾರಿಗಳು ಸುಳ್ಳು ಹೇಳಿಕೆಗಳನ್ನು ನೀಡಿರೋದು ಹೇಯ ಕೃತ್ಯ ಎಂದು ಕಿಡಿಕಾರಿದರು.ಬಿಜೆಪಿ ಸರ್ಕಾರ ಇದ್ದಾಗ ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ಆರಂಭಿಸಲು ನಿರ್ಧರಿಸಿ ಅದರಂತೆ 14 ಜಿಲ್ಲೆಗಳಲ್ಲಿ ಗೋಶಾಲೆ ಆರಂಭಿಸಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಆರಂಭಿಸಬೇಕಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂತು. ಈಗ ಆ ಸರ್ಕಾರ ಯಾವ ಜಿಲ್ಲೆಗಳಲ್ಲೂ ಗೋಶಾಲೆಗಳನ್ನು ಆರಂಭಿಸುವುದಿಲ್ಲ ಎಂದು ತಿಳಿಸಿದೆ. ಇದರಿಂದ ಗೋಹಂತಕರಿಗೆ ಕುಮ್ಮಕ್ಕು ಸಿಕ್ಕಂತಾಗಿದೆ ಎಂದರು.

ಗೋ ಕೆಚ್ಚಲು ಕೊಯ್ದ ನಸ್ರು ಎಂಬಾತನನ್ನು ಬಂಧಿಸಲಾಗಿದ್ದರೂ ಕೂಡ ಈತ ಕುಡುಕ, ಹುಚ್ಚ ಎಂದು ಸರ್ಕಾರ ಕಟ್ಟು ಕತೆ ಹೇಳುತ್ತಿದೆ. ಸರ್ಕಾರದ ತಾಳಕ್ಕೆ ಪೊಲೀಸ್ ಇಲಾಖೆ ತಲೆ ಬಾಗಿದೆ. ಇದರ ಹಿಂದೆ ಯಾರಿದ್ದಾರೆ. ಆತನೊಬ್ಬನೇ ಹೇಗೆ ಈ ಕೃತ್ಯ ಮಾಡಲು ಸಾಧ್ಯ? ಮುಂಜಾನೆ ನಾಲ್ಕೂವರೆಗೆ ಕುಡಿದಿದ್ದ ಎಂದು ಹೇಳುತ್ತಾರೆ. ಅಷ್ಟು ಹೊತ್ತಿನಲ್ಲಿ ಯಾವ ಬಾರ್‌ಗಳು ತೆರೆದಿದವು. ಸರ್ಕಾರ ಏನೋ ಹೇಳಬೇಕೆಂದು ಹೇಳುತ್ತಿದೆ ಎಂದು ದೂರಿದರು.ಆಕಸ್ಮಾತ್ ಮುಸ್ಲಿಮರಿಗೆ ತೊಂದರೆಯಾಗುವಂತಹ ಅಥವಾ ನೋವಾಗುವಂತಹ ಘಟನೆಗಳು ನಡೆದಿದ್ದರೆ ಕಾಂಗ್ರೆಸ್ ನವರು ಇಷ್ಟು ಹೊತ್ತು ತಾಳ್ಮೆಯಿಂದ ಹೀಗೆ ಕೂರುತ್ತಿದ್ದರಾ ? ಇಡೀ ರಾಜ್ಯದಲ್ಲಿ ಬೆಂಕಿ ಹಚ್ಚಿಬಿಡುತ್ತಿದ್ದರು. ಹಿಂದೂಗಳ ಬಗ್ಗೆ ಇವರಿಗೆ ನಿರ್ಲಕ್ಷ್ಯ ಏಕೆ ಎಂದು ಪ್ರಶ್ನಿಸಿದರು. ಶಿವಮೊಗ್ಗದ ಓಲ್ಡ್ ಬಾರ್ ಲೈನ್ ರಸ್ತೆಯಲ್ಲಿ ಅನ್ವರ್ ಅಂಡ್ ಕೋ ಹೆಸರಿನಲ್ಲಿ ಶೆಡ್ ನಿರ್ಮಿಸಿ ದನ, ಕುರಿ, ಇತರೆ ಪ್ರಾಣಿಗಳ ಚರ್ಮದ ಮಂಡಿಯ ವ್ಯವಹಾರ ನಡೆಸಲಾಗುತ್ತಿದೆ. ಇದರಿಂದ ಆ ಭಾಗದ ಜನರಿಗೆ ಓಡಾಡಲು ಕಷ್ಟವಾಗುತ್ತಿದೆ. ದುರ್ವಾಸನೆ ಹೆಚ್ಚಾಗಿದ್ದು, ಆರೋಗ್ಯ ಸಮಸ್ಯೆ ಕೂಡ ಇದೆ. ಹತ್ತಿರದಲ್ಲೇ ಬಾಲಕಿಯರ ವಿದ್ಯಾರ್ಥಿನಿಲಯವಿದೆ ಎಂದು ದೂರಿದರು.

ಆ ಚರ್ಮದ ಮಂಡಿಯ ಅಂಗಡಿಯಿಂದ ಲೋಡ್ ಮತ್ತು ಅನ್ ಲೋಡ್ ಮಾಡುವಾಗ ರಕ್ತದ ದುರ್ವಾಸನೆಯಿಂದ ಹೆಣ್ಣುಮಕ್ಕಳು ಓಡಾಡುವುದೇ ಕಷ್ಟವಾಗುತ್ತಿದೆ. ಇದನ್ನು ತೆರವುಗೊಳಿಸುವಂತೆ ಮುಸ್ಲಿಂ ವ್ಯಕ್ತಿಗಳೇ ದೂರು ಕೊಟ್ಟಿದ್ದಾರೆ. ಆದರೂ ಪಾಲಿಕೆ ಅಧಿಕಾರಿಗಳು ಇದುವರೆಗೂ ತೆರವುಗೊಳಿಸಿಲ್ಲ. ಕೂಡಲೇ ತೆರವುಗೊಳಿಸಬೇಕು. ಇಲ್ಲದಿದ್ದರೆ ರಾಷ್ಟ್ರಭಕ್ತರ ಬಳಗದಿಂದಲೇ ತೆರವುಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಮಹಾಲಿಂಗಶಾಸ್ತ್ರಿ, ಇ.ವಿಶ್ವಾಸ್, ಬಾಲು, ಜಾಧವ್, ಶಿವಾಜಿ, ಮಣಿ, ಚಂದ್ರಾನಾಯ್ಕ್, ರಾಜು ಇತರರು ಇದ್ದರು.

ಡಿಕೆಶಿ ಹಿಂದೂಗಳ ಪರ

ಮಾತನಾಡುತ್ತಿರುವುದುನ್ನು ಸ್ವಾಗತಿಸುವೆ

ಶಿವಮೊಗ್ಗ: ಪಾಪ ಡಿ.ಕೆ.ಶಿವಕುಮಾರ್ ಅವರು ಶೃಂಗೇರಿಗೆ ಹೋಗಿ ತಮ್ಮ ಭಕ್ತಿ ಪ್ರದರ್ಶನ ಮಾಡಿದ್ದಾರೆ. ಅವರು ಇತ್ತೀಚೆಗೆ ಪೂಜೆ, ಹೋಮ, ಹವನ ಮಾಡುತ್ತಿದ್ದಾರೆ. ಹಿಂದೂಗಳ ಪರ ಮಾತನಾಡುತ್ತಿದ್ದಾರೆ. ಇದನ್ನು ಸ್ವಾಗತಿಸುವೆ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ಸಾಧು-ಸಂತರು, ಸ್ವಾಮೀಜಿಗಳ ಬಗ್ಗೆ ಹೀಗೆ ಕೇವಲ ಮಾತನಾಡಿದರೆ ಸಾಲದು, ಬಜೆಟ್‍ನಲ್ಲಿ ಹಿಂದೂಗಳ ಮಠಕ್ಕೆ ಬಿಜೆಪಿ ಸರ್ಕಾರವಿದ್ದಾಗ ಅನುದಾನ ಕೊಟ್ಟಂತೆ ಈಗಲೂ ಮಠಗಳಿಗೆ ಅನುದಾನ ಕೊಡಿಸಲಿ ಎಂದು ಒತ್ತಾಯಿಸಿದರು.

ನಾನು ಹಿಂದು ಎಂದು ಹೇಳಿಕೊಳ್ಳುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ಹಿಂದು ಪದ ಅಪಮಾನ ಎನ್ನುವ ಭಗವಾನ್ ಅಯೋಗ್ಯ. ಇಂತಹವರು ಇರುವುದೇ ನಾಲಾಯಕ್ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Share this article