ಅಲೆಮಾರಿ ಜನಾಂಗದವರಿದ್ದಲ್ಲಿಯೇ ಹೋಗಿ ಸೌಲಭ್ಯದ ಅರಿವು ನೀಡಿ: ಪಲ್ಲವಿ

KannadaprabhaNewsNetwork | Published : Feb 12, 2025 12:36 AM

ಸಾರಾಂಶ

ಗಂಜಿಗುಂಟೆ ಗ್ರಾಪಂನ ಹಕ್ಕಿಪಿಕ್ಕಿ ಕಾಲೋನಿಗೆ ಭೇಟಿ ನೀಡಿದ ಜಿ.ಪಲ್ಲವಿ ಅವರಿಗೆ ಅಲ್ಲಿನ ವಾಸಿಗಳು ತಮ್ಮ ಹೆಸರಲ್ಲಿ ಜಮೀನಿನ ಪಹಣಿ ಇದೆ. ಆದರೆ ಬ್ಯಾಂಕ್ ನಿಂದ ಸಾಲ ಇನ್ನಿತರೆ ಸವಲತ್ತುಗಳನ್ನು ಪಡೆದುಕೊಳ್ಳಲು ಹೋದಾಗ ಅಲ್ಲಿ ಪಹಣಿಯಲ್ಲಿ ಸಡಿಞಂರದ್ದು ಎಂದು ಬರುತ್ತಿದೆ. ಇದರಿಂದ ನಾವು ಯಾವುದೆ ಸವಲತ್ತುಗಳನ್ನು ಪಡೆದುಕೊಳ್ಳಲು ಆಗುತ್ತಿಲ್ಲ ಎಂದು ಸಮಸ್ಯೆಯನ್ನು ಹೇಳಿಕೊಂಡರು.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಬದುಕಿಗಾಗಿ ಒಂದು ಕಡೆ ನಿಲ್ಲದೆ ಮತ್ತೊಂದು ಕಡೆ ಅಲೆಯುವವರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಅರಿವಿಲ್ಲ. ಇವರಿದ್ದಲ್ಲೇ ವಿಶೇಷ ಕ್ಯಾಂಪ್ ಮಾಡಿ ಇವರಿಗೆ ಅರಿವು ಮೂಡಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಪರಿಶಿಷ್ಟ ಜಾತಿ, ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಎಚ್.ಕ್ರಾಸ್ ಹೊರವಲಯದಲ್ಲಿ ನೆಲೆಸಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಜನಾಂಗದವರನ್ನು ಅಧಿಕಾರಿಗಳೊಂದಿಗೆ ಭೇಟಿ ಮಾಡಿ ಅವರೊಂದಿಗೆ ಚರ್ಚಿಸಿದರು.

ಸ್ವಂತ ಮನೆ, ನಿವೇಶನ ಇಲ್ಲ. ಇವೆಲ್ಲ ಸವಲತ್ತುಗಳನ್ನು ಪಡೆಯಲು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇನ್ನಿತರೆ ದಾಖಲೆಗಳು ಇಲ್ಲ. ಇದರಿಂದ ಸಾಲ ಸಿಗಲ್ಲ, ಸರ್ಕಾರದ ಸವಲತ್ತುಗಳೂ ಸಿಗುತ್ತಿಲ್ಲ ಎಂದು ಸಮಸ್ಯೆಗಳನ್ನು ಹೇಳಿಕೊಂಡರು.

ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದೇವೆ. ಅಲ್ಲೂ ಸೂಕ್ತ ದಾಖಲೆಗಳನ್ನು ಒದಗಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಅವಲತ್ತುಕೊಂಡರು.

ಬದುಕಿಗಾಗಿ ಮಾಡುವ ಕೆಲಸ, ಕಾರ್ಯ, ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ, ಸರ್ಕಾರದಿಂದ ಸಿಗುತ್ತಿರುವ ಸವಲತ್ತುಗಳ ಬಗ್ಗೆ ಅವರೊಂದಿಗೆ ಚರ್ಚಿಸಿ ಮಾಹಿತಿ ಹಂಚಿಕೊಂಡರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಅಲೆಮಾರಿ ಸಮುದಾಯದ ಮಕ್ಕಳಿಗೆ ಯಾವುದೇ ವಸತಿ ಶಾಲೆಯಲ್ಲಾಗಲಿ ಪ್ರವೇಶ ಪರೀಕ್ಷೆ ಇಲ್ಲದೆ ಶೇ. ೧೦ರಷ್ಟು ನೇರ ಪ್ರವೇಶ ನೀಡಲಾಗುವುದು. ಅಲ್ಲಿ ಉಚಿತ ಹಾಗೂ ಉತ್ತಮ ಊಟ, ವಸತಿ, ಶಿಕ್ಷಣ ಇನ್ನಿತರೆ ಸವಲತ್ತುಗಳು ಸಿಗಲಿವೆ. ಅಲ್ಲಿಗೆ ತಮ್ಮ ಮಕ್ಕಳನ್ನು ಸೇರಿಸಿ ಎಂದ ಅಧ್ಯಕ್ಷೆ ಜಿ.ಪಲ್ಲವಿ ಅವರು, ಅನೇಕ ಪೋಷಕರು ತಮ್ಮ ಮಕ್ಕಳನ್ನು ಇಂತಹ ವಸತಿ ಶಾಲೆಗಳಿಗೆ ಸೇರಿಸಲು ಹಿಂದೇಟು ಹಾಕುತ್ತಾರೆ ಮತ್ತು ಸೇರಿಸಲು ಅವರಿಗೆ ಒಂದೊಮ್ಮೆ ಇಚ್ಛೆ ಇದ್ದರೂ ಅದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಹಾಗಾಗಿ ಇಲ್ಲಿನ ಪೋಷಕರನ್ನು ವಸತಿ ಶಾಲೆಗಳಿಗೆ ಕರೆದೊಯ್ದು ವಸತಿ ಶಾಲೆಗಳ ವಾತಾವರಣ, ಅಲ್ಲಿ ಸಿಗುವ ಸವಲತ್ತುಗಳು, ಅಲ್ಲಿ ಮಕ್ಕಳ ಕಲಿಕೆಯನ್ನು ತೋರಿಸಿ. ಆಗ ಇವರಿಗೆ ತಮ್ಮ ಮಕ್ಕಳನ್ನು ವಸತಿ ಶಾಲೆಗೆ ಸೇರಿಸಬೇಕೆಂಬ ಬಯಕೆ ಹೆಚ್ಚುತ್ತದೆ ಮತ್ತು ಪ್ರವೇಶ ಮಾಡಿಸಲು ಅಗತ್ಯ ಮಾರ್ಗದರ್ಶನ, ಸಲಹೆ, ಸೂಚನೆ ನೀಡಿ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಹಾಗೆಯೇ ಸಾಕಷ್ಟು ಮಂದಿಗೆ ಆಧಾರ್ ಕಾರ್ಡ್ ಇನ್ನಿತರೆ ದಾಖಲೆಗಳು ಇಲ್ಲವಾಗಿದ್ದು, ಇಲ್ಲಿಯೇ ಕ್ಯಾಂಪ್ ಮಾಡಿ ಅವರಿಗೆ ಅಗತ್ಯ ಮತ್ತು ಸಾಧ್ಯವಾಗುವ ದಾಖಲೆಗಳನ್ನು ನೀಡುವ ಕೆಲಸ ಮಾಡಿ ಎಂದು ಗ್ರೇಡ್-೨ ತಹಸೀಲ್ದಾರ್ ಗೆ ಸೂಚಿಸಿದರು.

ಹಕ್ಕಿ ಪಿಕ್ಕಿ ಕಾಲೋನಿ:

ಗಂಜಿಗುಂಟೆ ಗ್ರಾಪಂನ ಹಕ್ಕಿಪಿಕ್ಕಿ ಕಾಲೋನಿಗೆ ಭೇಟಿ ನೀಡಿದ ಜಿ.ಪಲ್ಲವಿ ಅವರಿಗೆ ಅಲ್ಲಿನ ವಾಸಿಗಳು ತಮ್ಮ ಹೆಸರಲ್ಲಿ ಜಮೀನಿನ ಪಹಣಿ ಇದೆ. ಆದರೆ ಬ್ಯಾಂಕ್ ನಿಂದ ಸಾಲ ಇನ್ನಿತರೆ ಸವಲತ್ತುಗಳನ್ನು ಪಡೆದುಕೊಳ್ಳಲು ಹೋದಾಗ ಅಲ್ಲಿ ಪಹಣಿಯಲ್ಲಿ ಸಡಿಞಂರದ್ದು ಎಂದು ಬರುತ್ತಿದೆ. ಇದರಿಂದ ನಾವು ಯಾವುದೆ ಸವಲತ್ತುಗಳನ್ನು ಪಡೆದುಕೊಳ್ಳಲು ಆಗುತ್ತಿಲ್ಲ ಎಂದು ಸಮಸ್ಯೆಯನ್ನು ಹೇಳಿಕೊಂಡರು.

ಈ ಬಗ್ಗೆ ಕ್ರಮವಹಿಸಿ ಸಮಸ್ಯೆ ಬಗೆಹರಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಸಮಾಜ ಕಲ್ಯಾಣ ಉಪ ನಿರ್ದೇಶಕ ತೇಜಾನಂದ ರೆಡ್ಡಿ, ಗ್ರೇಡ್ 2 ತಹಸೀಲ್ದಾರ್ ಪೂರ್ಣಿಮಾ, ತಾಪಂ ಇಒ ಹೇಮಾವತಿ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಜಗದೀಶ್, ನರೇಗಾ ಚಂದ್ರಪ್ಪ ಐಎನ್ ಟಿಯುಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರ ಹಾಜರಿದ್ದರು.

Share this article