ಕನ್ನಡಪ್ರಭ ವಾರ್ತೆ ಮಂಗಳೂರು:
ನಿಗದಿತ ಸಮಯಕ್ಕೆ ಯಶವಂತಪುರದಿಂದ ಮಡ್ಗಾಂವ್ (ನಂ.26655) ಹಾಗೂ ಮಡ್ಗಾಂವ್‌ನಿಂದ ಯಶವಂತಪುರ (ನಂ.26656) ವಯಾ ಮಂಗಳೂರು ಜಂಕ್ಷನ್ ಮೂಲಕ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಿದೆ. ಅದೇ ರೀತಿ ಗೊಮಟೇಶ್ವರ ಎಕ್ಸ್‌ಪ್ರೆಸ್ ರೈಲು ಕೂಡ ನಿಗದಿತ ವೇಳಾಪಟ್ಟಿಯಂತೆ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸಿದೆ. ಬೆಂಗಳೂರಿನಿಂದ ಆಗಮಿಸಿದ ವಂದೇ ಭಾರತ್ ಮತ್ತು ಮಂಗಳೂರಿನಿಂದ ತೆರಳುತ್ತಿದ್ದ ವೀಕ್ಲಿ ಮಂಗಳೂರು-ಯಶವಂತಪುರ ಎಕ್ಸ್‌ಪ್ರೆಸ್ ರೈಲಿಗೆ ಘಾಟ್ ಪ್ರದೇಶದ ಕಡಗರವಳ್ಳಿಯಲ್ಲಿ ಕ್ರಾಸಿಂಗ್ ನೀಡಲಾಗಿದೆ. ಯಶವಂತಪುರ ಹಾಗೂ ಮಡ್ಗಾಂವ್‌ನಿಂದ ಹೊರಟ ಎರಡೂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ನಿಗದಿತ ವೇಳೆಯಲ್ಲೇ ಸಂಚಾರ ನಡೆಸಿರುವುದು ಗಮನಾರ್ಹ. ಕೆಲವು ನಿಲ್ದಾಣಗಳಲ್ಲಿ 5-10 ನಿಮಿಷ ವಿಳಂಬವಾದರೂ ಮುಂದಿನ ನಿಲ್ದಾಣಗಳಲ್ಲಿ ನಿಗದಿತ ಸಮಯ ಕಾಯ್ದುಕೊಂಡು ಸಂಚರಿಸಿರುವುದು ಗಮನಾರ್ಹ.
ಮಡ್ಗಾಂವ್‌ನಿಂದ ಯಶವಂತಪುರಕ್ಕೆ ಸಂಚರಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎಲ್ಲ ಸೀಟುಗಳು ಭರ್ತಿಯಾಗಿವೆ. ಯಶವಂತಪುರದಿಂದ ಮಡ್ಗಾಂವ್‌ಗೆ ಆಗಮಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್ ಬಹುತೇಕ ಭರ್ತಿಯಾಗಿದ್ದು, ಕೆಲವೇ ಸೀಟುಗಳು ಬಾಕಿ ಉಳಿದಿತ್ತು. ಮಡ್ಗಾಂವ್-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಮಿಸಿದಾಗ ಉಡುಪಿ ರೈಲು ನಿಲ್ದಾಣದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಅಲ್ಲಿನ ರೈಲ್ವೆ ಯಾತ್ರಿ ಸಮಿತಿಯವರು ಸಿಹಿ ಹಂಚಿ ಸಂಭ್ರಮಿಸಿದರು.ಯಶವಂತಪುರದಿಂದ ಸಂಚರಿಸುವ ಈ ರೈಲು ಮಡಗಾಂವ್ ತಲುಪುವ ಮಾರ್ಗದಲ್ಲಿ ಹಾಸನ, ಸಕಲೇಶಪುರ, ಮಂಗಳೂರು, ಉಡುಪಿ, ಮುರ್ಡೇಶ್ವರ, ಗೋಕರ್ಣ ಮತ್ತು ಕಾರವಾರ ಸೇರಿದಂತೆ ಪ್ರಮುಖ ನಗರಗಳು ಹಾಗೂ ಪ್ರವಾಸಿ ತಾಣಗಳನ್ನು ಸಂಪರ್ಕಿಸಲಿದೆ. ಸುಮಾರು 850 ಕಿ.ಮೀ. ದೂರವನ್ನು ಕ್ರಮಿಸಲಿದೆ. ಪ್ರಯಾಣಿಕರಿಗೆ ಪಶ್ಚಿಮ ಘಟ್ಟದ ತಪ್ಪಲು, ಕರಾವಳಿ ತೀರ ಹಾಗೂ ಬಯಲುಸೀಮೆಗಳ ಪ್ರಕೃತಿ ಸೌಂದರ್ಯದ ಆಹ್ಲಾದವನ್ನು ವಂದೇ ಭಾರತ್ ನೀಡಲಿದೆ.ಗೊಮಟೇಶ್ವರ ಎಕ್ಸ್‌ಪ್ರೆಸ್ ವೇಳಾಪಟ್ಟಿ ಸದ್ಯ ಬದಲಿಲ್ಲ: