ಗುರಿಯತ್ತ ಒಲವು, ಪೋಷಕರ ಬಲವಿದ್ದರೆ ಸಾಧಕರಾಗಬಹುದು: ಶಾಸಕ ಪ್ರದೀಪ್ ಈಶ್ವರ್

KannadaprabhaNewsNetwork | Published : Nov 8, 2024 12:42 AM

ಸಾರಾಂಶ

ನಾನು ಶಾಸಕನಾಗಿ ಆಯ್ಕೆಯಾಗಿರಬಹುದು, ಇದು ಅಧಿಕಾರವನ್ನು ಸವಿಯಲು ಅಲ್ಲ. ಬದಲಿಗೆ ಜನರು ನನ್ನ ಮೇಲಿಟ್ಟಿರುವ ನಿರೀಕ್ಷೆಗಳು ಹುಸಿಯಾಗದಂತೆ ನಡೆದುಕೊಳ್ಳುವ ಭಾರ ಎಂದು ಭಾವಿಸಿದ್ದೇನೆ. ಮುಂದಿನ ವರ್ಷ ಇಲ್ಲಿ ಬಿಎಸ್‌ಸಿ ಪದವಿ ಪ್ರಾರಂಭಿಸಲು ಉನ್ನತ ಶಿಕ್ಷಣ ಸಚಿವರೊಂದಿಗೆ ಮಾತನಾಡಿದ್ದೇನೆ. 4 ಕೋಟಿ ರು. ವೆಚ್ಚದಲ್ಲಿ 10 ಕೊಠಡಿಗಳ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಶಾಲಾ ಕಾಲೇಜು ದಿನಗಳಲ್ಲಿಯೇ ನಿರ್ದಿಷ್ಟ ಗುರಿಯಿಟ್ಟುಕೊಂಡು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಜತೆಗೆ, ಸಾಧನೆಯ ಹಾದಿಗೆ ನೀರೆರೆಯಲು ಪೋಷಕರೂ ಕೂಡ ಬೆಂಬಲವಾಗಿ ನಿಂತಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೆ ವಿಫುಲ ಅವಕಾಶಗಳಿವೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ನಗರ ಹೊರವಲಯದ ಮಹಿಳಾ ಕಾಲೇಜಿನಲ್ಲಿ ನಡೆದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಅಂತರ ಕಾಲೇಜು ಮಹಿಳಾ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಮೌಂಟ್ ಎವರೆಸ್ಟ್ ಶಿಖರವನ್ನೇರಿದ ತೇನ್‌ಸಿಂಗ್ ಶೇರ್ಫಾ ತಾಯಿಯ ಮಾತುಗಳಿಂದ ಪ್ರೇರಣೆಗೊಂಡೇ ಶಿಖರಾರೋಹಣದ ಸಾಧನೆ ಮಾಡಿದ್ದು ಇಂದಿಗೆ ಇತಿಹಾಸ. ಹಾರ್‌ಮೋನಲ್ ಡಿಫಿಸಿಯೆನ್ಸಿ ಸಿಂಡ್ರೋಮ್ ಕಾಯಿಲೆಯಿಂದ ನರಳುತ್ತಿದ್ದರೂ ಎದೆಗುಂದದೆ ಕ್ರೀಡಾಪಟುವಾಗಲೇ ಬೇಕು ಎಂದು ಮುನ್ನುಗ್ಗಿದ್ದರಿಂದಲೇ ಲಿಯೋನೆಲ್ ಮೆಸ್ಸಿ ಅಪ್ರತಿಮ ಸಾಧನೆ ಮಾಡಲಾಯಿತು. ಇವರ ಬದುಕು ನಿಮಗೆ ಮಾದರಿಯಾಗಬೇಕಿದೆ ಎಂದರು.

ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವವರು ಅಂಕಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಎಸ್‌ಎಸ್‌ಎಲ್‌ಸಿ ಪಾಸಾಗಲು ಹೆಣಗಾಡಿದ ಸಚಿನ್ ತೆಂಡೂಲ್ಕರ್ ಇಂದು ಮಹಾರಾಷ್ಟ್ರ ಶಾಲಾ ಕಾಲೇಜು ಪಠ್ಯಕ್ರಮದ ವಸ್ತುವಾಗಿದ್ದಾರೆ. ಪ್ರತಿಯೊಬ್ಬ ಪೋಷಕರಿಗೂ ನಮ್ಮ ಮಕ್ಕಳು ಹೀಗೆ ಆಗಬಾರದೇ ಎಂದೆನಿಸುವುದು ಸಹಜ. ಆದರೆ ನಮ್ಮ ಪೋಷಕರು, ತಮ್ಮ ಮಕ್ಕಳು ಅವರಿಗೆ ತಿಳಿಸದೆ ಏಣಿಯ ನಾಲ್ಕು ಮೆಟ್ಟಿಲು ಹತ್ತಿದರೆ ಸಾಕು, ಮಗುವಿನ ಮೈಮೇಲೆ ಬಾಸುಂಡೆಗಳ ಚಿತ್ತಾರ ಬಿಡಿಸಿ, ಧೈರ್ಯದ ಬದಲಿಗೆ ಭಯ, ಭೀತಿ ಬಿತ್ತುತ್ತಾರೆ. ಹೀಗಾದರೆ ಕ್ರೀಡಾಸಕ್ತಿ ಹೇಗೆ ಮೂಡಲು ಸಾಧ್ಯ ಎಂದು ಪ್ರಶ್ನಿಸಿದರು.

ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ನಾವ್ಯಾರೂ ಶ್ರೀಮಂತ ಮನೆತನದಿಂದ ಬಂದವರಲ್ಲದಿದ್ದರೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರ ಮಾರ್ಗದರ್ಶನದಲ್ಲಿ ಕಬಡ್ಡಿ ಕ್ರೀಡೆಯಲ್ಲಿ ಸಾಧನೆ ಮಾಡಲು ತೊಡಗಿದ್ದೇವೆ ಎಂದು ಹೇಳುತ್ತಿರುವುದು ಸಂತೋಷ ತಂದಿದೆ. ಕ್ರೀಡೆಗಳಲ್ಲಿ ಸೋಲು- ಗೆಲವು ಸಹಜ. ಸೋತವರು ಕುಗ್ಗುವ ಅಗತ್ಯವಿಲ್ಲ. ಶೇ. 90ರಷ್ಟು ಅಂಕಗಳಿದ್ದವರು ವೈದ್ಯರಾಗಬಹುದು, ಇಂಜನಿಯರ್ ಗಳಾಗಬಹುದು. ಕೇವಲ ಪಾಸಾದವರು ಸ್ವಾಮೀಜಿಗಳಾಗಿ ಎಲ್ಲರನ್ನೂ ಕಾಲಿಗೆ ಬೀಳಿಸಿಕೊಳ್ಳಬಹುದು. ಆದರೆ ಶೇ.60 ಅಂಕಗಳಿಸಿದವರು ರಾಜಕಾರಣಿಗಳಾಗಿ ಇವರೆಲ್ಲರನ್ನೂ ಆಳಬಹುದು ಎಂದು ಹೇಳುವ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣೆ ಮಾಡುವ ಉದ್ದೇಶದಿಂದ ನವೆಂಬರ್ 4 ರಿಂದ ಡಿಸೆಂಬರ್ ಕೊನೆಯವರೆಗೆ ಪ್ರತಿದಿನ 48 ಸರಣಿ ಪರೀಕ್ಷೆಗಳನ್ನು ಪರಿಚಯಿಸಿದ್ದೇನೆ. ಕಾರಣ, ಸರ್ಕಾರಿ ಶಾಲಾ ಕಾಲೇಜು, ಆಸ್ಪತ್ರೆಗಳು ನನ್ನ ಪಾಲಿಗೆ ದೇವಾಲಯಗಳು. ಇಲ್ಲಿ ಸುಧಾರಣೆ ಆದರೆ ಬಡವರ ಬದುಕು ಸುಧಾರಣೆ ಕಾಣಲಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜೀವನದ ಮುಖ್ಯಘಟ್ಟವಾದ್ದರಿಂದ ಇತ್ತ ಹೆಚ್ಚಿನ ಗಮನ ಹರಿಸಲಾಗಿದೆ ಎಂದರು.

ನಾನು ಶಾಸಕನಾಗಿ ಆಯ್ಕೆಯಾಗಿರಬಹುದು, ಇದು ಅಧಿಕಾರವನ್ನು ಸವಿಯಲು ಅಲ್ಲ. ಬದಲಿಗೆ ಜನರು ನನ್ನ ಮೇಲಿಟ್ಟಿರುವ ನಿರೀಕ್ಷೆಗಳು ಹುಸಿಯಾಗದಂತೆ ನಡೆದುಕೊಳ್ಳುವ ಭಾರ ಎಂದು ಭಾವಿಸಿದ್ದೇನೆ. ಮುಂದಿನ ವರ್ಷ ಇಲ್ಲಿ ಬಿಎಸ್‌ಸಿ ಪದವಿ ಪ್ರಾರಂಭಿಸಲು ಉನ್ನತ ಶಿಕ್ಷಣ ಸಚಿವರೊಂದಿಗೆ ಮಾತನಾಡಿದ್ದೇನೆ. 4 ಕೋಟಿ ರು. ವೆಚ್ಚದಲ್ಲಿ 10 ಕೊಠಡಿಗಳ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರನ್ನು ಕಾಲೇಜಿನ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ರಾಷ್ಟ್ರೀಯ ಕ್ರೀಡಾಪಟು ಎಂ.ಆರ್.ಪೂಜಿತ, ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ,ಪ್ರಾಧ್ಯಾಪಕರಾದ ಹರೀಶ್, ಅಶ್ವತ್ಥ ನಾರಾಯಣ, ದೈಹಿಕ ಶಿಕ್ಷಣ ನಿರ್ದೇಶಕ ಪ್ರಸನ್ನ ಕುಮಾರ್, ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರು, ಮಹಿಳಾ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.

Share this article