ಮುಂದಿನ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ 25 ಕ್ಕೂ ಹೆಚ್ಚು ಪಂಚಮಸಾಲಿ ಶಾಸಕರು ಆಯ್ಕೆಯಾಗುವಂತೆ ಮಾಡುವುದು ನಮ್ಮ ಮುಖ್ಯಗುರಿಯಾಗಿದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಹೇಳಿದರು.
ಕೊಟ್ಟೂರು: ಮುಂದಿನ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ 25 ಕ್ಕೂ ಹೆಚ್ಚು ಪಂಚಮಸಾಲಿ ಶಾಸಕರು ಆಯ್ಕೆಯಾಗುವಂತೆ ಮಾಡುವುದು ನಮ್ಮ ಮುಖ್ಯಗುರಿಯಾಗಿದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಹೇಳಿದರು.ಪಟ್ಟಣದಲ್ಲಿ ಭಾನುವಾರ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಮತ್ತು ಪಂಚಮಸಾಲಿ ವಧು ವರಾನ್ವೇಷಣ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಪಂಚಮಸಾಲಿ ಸಮಾಜದ ಅನೇಕ ಬೇಡಿಕೆಗಳು ಸರ್ಕಾರದ ಮಟ್ಟದಲ್ಲಿ ಈಡೇರದೇ ಹಾಗೆ ಉಳಿದಿವೆ. ಅವುಗಳ ಈಡೇರಿಕೆಗೆ ವಿಧಾನಸಭೆಯಲ್ಲಿ ಚರ್ಚಿಸಲು ಶಾಸಕರ ಬಲ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ೨೫ಕ್ಕೂ ಅಧಿಕ ಪಂಚಮಸಾಲಿ ಸಮಾಜದ ಶಾಸಕರು ಆಯ್ಕೆಯಾಗುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಇಂದಿನಿಂದಲೇ ನಾವೆಲ್ಲ ಆ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದರು.ಪಂಚಮಸಾಲಿ ಸಂಘಟನೆ ರಾಜ್ಯದಲ್ಲಿ ಉತ್ತಮವಾಗಿದೆ. ಆದರೂ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸಿ ವಿಸ್ತರಿಸುವುದೂ ಅವಶ್ಯವಾಗಿದೆ. ಶೀಘ್ರದಲ್ಲಿ ರಾಜ್ಯದೆಲ್ಲೆಡೆ ಸಂಚರಿಸಿ ಸಮಾಜದ ಪ್ರಮುಖರನ್ನು ಒಗ್ಗೂಡಿಸಿ ಸಂಘಟನೆ ಮತ್ತಷ್ಟು ಬಲಗೊಳಿಸಲಾಗುವುದು. ವೀರಶೈವ ಲಿಂಗಾಯತ ಪಂಚಮಸಾಲಿ ರಾಜ್ಯಮಟ್ಟದ ಬೃಹತ್ ಸಮಾವೇಶವನ್ನು ಜನವರಿಯಲ್ಲಿ ಚಿತ್ರದುರ್ಗ ನಗರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ರಾಜ್ಯದ ಎಲ್ಲ ಮುಖಂಡರು ಭಾಗವಹಿಸುವ ಸಮಾವೇಶದಲ್ಲಿ ನಮ್ಮ ಸಮಾಜಕ್ಕೆ ಸಂಬಂಧಿಸಿದ ಮೂರು ಮಹತ್ತರವಾದ ನಿರ್ಧಾರಗಳನ್ನು ಕೈಗೊಳ್ಳಲಾಗುವುದು. ಎಲ್ಲ ತಾಲೂಕುಗಳಲ್ಲಿರುವ ಸಂಘಟನೆಯ ಘಟಕಗಳ ಪದಾಧಿಕಾರಿಗಳು ಸಂಘಟನೆಯಿಂದ ಹಿಂದೆ ಸರಿಯದೇ ಸದಾ ಕ್ರಿಯಾತ್ಮಕವಾಗಿ ಮುಂದುವರಿಯಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಚಿತ್ರ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲೂಕು ಅಧ್ಯಕ್ಷ ಚಾಪಿ ಚಂದ್ರಪ್ಪ ಮಾತನಾಡಿ, ಬಹಳ ವರ್ಷಗಳ ಬೇಡಿಕೆಯಾಗಿದ್ದ ಕಿತ್ತೂರು ಚೆನ್ನಮ್ಮ ವೃತ್ತ ಸ್ಥಾಪನೆ ಇದೀಗ ಈಡೇರಿದೆ. ವೃತ್ತ ಸ್ಥಾಪನೆಗೆ ಸಮಾಜದ ಹಾಗೂ ಪಪಂ ಜನಪ್ರತಿನಿಧಿಗಳು, ಅಧಿಕಾರಿಗಳ ನೀಡಿರುವ ಸಹಕಾರ ಸ್ಮರಣೀಯ. ಸಮಾಜವನ್ನು ಒಗ್ಗೂಡಿಸುವುದು ನಮ್ಮ ಕರ್ತವ್ಯವಾಗಿದೆ. ಸಮಾಜದ ಒಳಿತಿಗಾಗಿ ನಾವೆಲ್ಲರೂ ಶ್ರಮಿಸೋಣ ಎಂದು ಹೇಳಿದರು.
ಪಂಚಮಸಾಲಿ ಜಿಲ್ಲಾಧ್ಯಕ್ಷ ಪ್ರಕಾಶ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಬದ್ದಿ ಮರಿಸ್ವಾಮಿ, ವೀರಶೈವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ. ವಿವೇಕಾನಂದ, ಉಪಾಧ್ಯಕ್ಷೆ ಗಾಯತ್ರಿ ಅಶೋಕ, ಪಪಂ ಸದಸ್ಯೆ ಕೆ.ಎಸ್. ವೀಣಾ ವಿವೇಕಾನಂದಗೌಡ ಮಾತನಾಡಿದರು.
ಪಪಂ ಅಧ್ಯಕ್ಷೆ ಬದ್ದಿ ರೇಖಾ ರಮೇಶ, ಉಪಾಧ್ಯಕ್ಷ ಜಿ. ಸಿದ್ದಯ್ಯ, ಸದಸ್ಯರಾದ ತೋಟದ ರಾಮಣ್ಣ, ಕೆಂಗರಾಜ, ವಿದ್ಯಾಶ್ರೀ ಮೇಘರಾಜ, ಭಾರತಿ ಸುಧಾಕರ ಗೌಡ ಪಾಟೀಲ್, ಸಮಾಜದ ಮುಖಂಡರಾದ ಬಿ. ಪಂಪಾಪತಿ, ಶೆಟ್ಟಿ ತಿಂದಪ್ಪ, ಚಿರಿಬಿ ಪ್ರಕಾಶ ಇತರರು ಇದ್ದರು. ಹಳ್ಳಿ ಆನಂದ, ಈಶ್ವರಪ್ಪ ತುರಕಾಣಿ ಕಾರ್ಯಕ್ರಮ ನಿರ್ವಹಿಸಿದರು.