ಹಾವೇರಿ: ಜಿಲ್ಲೆಯಲ್ಲಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ದುಡಿಯೋಣ ಬಾ, ನರೇಗಾ ಮತ್ತು ಸ್ತ್ರೀಚೇತನ ಮೊದಲಾದ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರುಚಿ ಬಿಂದಲ್ ತಿಳಿಸಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವರ್ಷ ಮಹಿಳೆಯರನ್ನು ಜಿಲ್ಲೆಯ ವಿವಿಧ ಉದ್ಯೋಗಗಳಲ್ಲಿ ಭಾಗವಹಿಸುವಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಪ್ರತಿಶತ 50ರಿಂದ 60ರಷ್ಟು ಮಹಿಳೆಯರಿಗೆ ಉದ್ಯೋಗವಕಾಶ ನೀಡುವ ಗುರಿ ಹೊಂದಲಾಗಿದೆ. ಹಾಗೆಯೇ ಸಕ್ರಿಯ ಮಹಿಳಾ ಒಕ್ಕೂಟಗಳ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸುಮಾರು 175 ಗ್ರಾಮ ಪಂಚಾಯಿತಿಗಳಲ್ಲಿ ಎನ್‌ಆರ್‌ಎಲ್‌ಎಂ ಶೆಡ್ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಇದರಿಂದ ಸಾರ್ವಜನಿಕರು ತ್ವರಿತಗತಿಯಲ್ಲಿ ಸರ್ಕಾರದ ಪ್ರಯೋಜನೆಗಳನ್ನು ಪಡೆದುಕೊಳ್ಳಲು ಸಹಾಯಕಾರಿಯಾಗಲಿದೆ ಎಂದರು.ಜಿಲ್ಲೆಯಲ್ಲಿ 2024- 25ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 46 ಲಕ್ಷ ಮಾನವ ದಿನಗಳ ಸೃಜನೆಯ ಗುರಿಗೆ 42.43 ಲಕ್ಷ ಮಾನವ ದಿನಗಳ ಸೃಜನೆ ಮಾಡಿದೆ. ಕೂಲಿಕಾರರಿಗೆ ಇನ್ನೂ ₹13 ಕೋಟಿ ವೇತನ ಬಾಕಿಯಿದ್ದು, ಶೀಘ್ರದಲ್ಲಿ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ 162 ಗ್ರಾಮ ಪಂಚಾಯಿತಿಗಳಲ್ಲಿ ಕೂಸಿನ ಮನೆ(ಶಿಶು ಪಾಲನಾ ಕೇಂದ್ರ)ಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ ಒಟ್ಟು 3010 ಮಕ್ಕಳು ಪ್ರಯೋಜನ ಪಡೆದಿರುತ್ತಾರೆ ಎಂದರು. ವೈಯಕ್ತಿಕ ಶೌಚಾಲಯ ನಿರ್ಮಾಣ: ಕಳೆದ ಸಾಲಿನಲ್ಲಿ 17,957 ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿತ್ತು. ಅದರಲ್ಲಿ 12,048 ಫಲಾನುಭವಿಗಳು ವೈಯಕ್ತಿಕ ಶೌಚಾಲಯವನ್ನು ನಿರ್ಮಿಸಿಕೊಂಡಿದ್ದಾರೆ. ಬೇಡಿಕೆ ಅನುಸಾರವಾಗಿ ಇನ್ನೂ ಹೆಚ್ಚಿನ ಶೌಚಾಲಯಗಳನ್ನು ನಿರ್ಮಾಣ ಮಾಡಲು ಪ್ರಯತ್ನಿಸಲಾಗುವುದು. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಸಹಭಾಗಿತ್ವದೊಂದಿಗೆ ಬೂದು ನೀರು ನಿರ್ವಹಣಾ ಘಟಕಗಳನ್ನು ಆಯಾ ಗ್ರಾಮಗಳ ಪರಿಸ್ಥಿತಿಗೆ ಅನುಗುಣವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯ 223 ಗ್ರಾಮ ಪಂಚಾಯಿತಿಗಳಿಂದ 688 ಗ್ರಾಮಗಳಲ್ಲಿ 303 ಬೂದು ನಿರ್ವಹಣಾ ಘಟಕಗಳು ಮುಕ್ತಾಯಗೊಳಿಸಿದ್ದು, ಎಲ್ಲ ಬೂದುಗಳು ಕಾರ್ಯನಿರ್ವಹಿಸುತ್ತಿವೆ. ಬಾಕಿ ಉಳಿದ ಗ್ರಾಮಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಎಲ್ಲ ರೀತಿಯ ಕ್ರಮ ವಹಿಸಲಾಗಿದೆ ಎಂದರು. ಜಿಲ್ಲೆಯ ಗ್ರಾಮೀಣ ಪ್ರದೇಶಗಳನ್ನು ಸ್ವಚ್ಛ, ಸುಂದರ ಮಾಡುವ ನಿಟ್ಟಿನಲ್ಲಿ 223 ಗ್ರಾಮ ಪಂಚಾಯಿತಿಗಳಿಗೆ ಕಸ ಸಂಗ್ರಹಣೆಗಾಗಿ ಸ್ವಚ್ಛ ವಾಹಿನಿಯನ್ನು ಒದಗಿಸಲಾಗಿದೆ. ಪ್ರತಿ ಗ್ರಾಮದಲ್ಲಿಯೂ ಮನೆ ಮನೆಗೆ ತೆರಳಿ ಕಸ ಸಂಗ್ರಹಣೆ ಮಾಡಲಾಗುತ್ತದೆ ಮತ್ತು ಮನೆಯಲ್ಲಿನ ಕಸವನ್ನು ಬೀದಿಗೆ ಎಸೆಯದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಸ್ವಚ್ಛ ವಾಹಿನಿ ವಾಹನ ಚಾಲನೆಗೆ ಸ್ವ ಸಹಾಯ ಸಂಘದ ಮಹಿಳಾ ವಾಹನ ಚಾಲಕರನ್ನು ನೇಮಿಸಿಕೊಳ್ಳಲಾಗಿದೆ. ಈವರೆಗೂ 198 ಮಹಿಳೆಯರಿಗೆ ವಾಹನ ಚಾಲನಾ ತರಬೇತಿ ನೀಡಲಾಗಿದೆ ಎಂದರು. 2024- 25ನೇ ಸಾಲಿನ ಸಮುದಾಯ ಬಂಡವಾಳ ನಿಧಿ ₹35 ಕೋಟಿ ಮೊತ್ತವನ್ನು 2334 ಸ್ವ- ಸಹಾಯ ಗುಂಪುಗಳಿಗೆ ಬಿಡುಗಡೆ ಮಾಡಲಾಗಿದೆ. ವಿವಿಧ ಜೀವನೋಪಾಯ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು 5850 ಸಂಜೀವಿನಿ ಸ್ವ- ಸಹಾಯ ಸಂಘಗಳಿಗೆ ಸಮುದಾಯ ಬಂಡವಾಳ ನಿಧಿ ಒಟ್ಟು ₹87.71 ಲಕ್ಷ ನೀಡಲಾಗಿದೆ. ಹಾಗೆಯೇ ಜಿಲ್ಲೆಯಲ್ಲಿ 325 ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಔಪಚಾರೀಕರಣ ಯೋಜನೆಯಡಿಯಲ್ಲಿ ತಲಾ ₹40 ಸಾವಿರಗಳಂತೆ ಒಟ್ಟು ₹13 ಕೋಟಿ ನೀಡಲಾಗಿದೆ ಎಂದರು.ವಸತಿ ಯೋಜನೆ: ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಆವಾಸ ಯೋಜಯಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಸತಿ ಹಾಗೂ ನಿವೇಶನರಹಿತರಿಗೆ ವಸತಿ ಸೌಲಭ್ಯ ಒದಗಿಸುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಹಂತದಲ್ಲಿ ವ್ಯಾಪಕವಾಗಿ ಪ್ರಚಾರ ನಡೆಸಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲು ಪ್ರತಿ ಗ್ರಾಮ ಪಂಚಾಯಿತಿಗೆ ಮೂರು ಜನ ಸಮೀಕ್ಷೆದಾರರನ್ನು ನೇಮಕ ಮಾಡಲಾಗಿದೆ ಎಂದರು.ಜಿಲ್ಲೆಯು 2024- 25 ನೇ ಸಾಲಿನಲ್ಲಿ ತೆರಿಗೆ ವಸೂಲಾತಿಯ ಪ್ರಸ್ತುತ ಬೇಡಿಕೆ ₹37.49 ಕೋಟಿ ಇದ್ದು, ಮಾರ್ಚ್ 2025ರ ಅಂತ್ಯಕ್ಕೆ ₹32.22 ಕೋಟಿ ತೆರಿಗೆ ವಸೂಲಾತಿ ಆಗಿದ್ದು, ಶೇ. 85.93ರಷ್ಟು ಪ್ರಗತಿ ಸಾಧಿಸಲಾಗಿದೆ. ಮುಂದಿನ ದಿನಗಳಲ್ಲಿ ತೆರಿಗೆ ವಸೂಲಾತಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು.