ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಗೋಕಾಕ ಬಂದ್‌

KannadaprabhaNewsNetwork |  
Published : Dec 04, 2025, 03:00 AM IST
ಜಿಲ್ಲಾ ಹೋರಟ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಗೋಕಾಕ ಬೆಳಗಾವಿ ಜಿಲ್ಲೆಯನ್ನು ವಿಂಗಡಿಸಿ ನೂತನ ಗೋಕಾಕನ್ನು ಜಿಲ್ಲಾ ಕೇಂದ್ರವಾಗಿ ರಚಿಸುವಂತೆ ಆಗ್ರಹಿಸಿ ನಿಯೋಜಿತ ಗೋಕಾಕ ಜಿಲ್ಲಾ ರಚನಾ ಹೋರಾಟ ಚಾಲನಾ ಸಮಿತಿ ಬುಧವಾರ ಕರೆ ನೀಡಿದ್ದ ಗೋಕಾಕ ಬಂದ್ ಯಶಸ್ವಿಯಾಗಿದೆ. ಬೆಳಗ್ಗೆಯೇ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಾಯಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೋಕಾಕ ಬಂದ್‌ಗೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಬೆಳಗಾವಿ ಜಿಲ್ಲೆಯನ್ನು ವಿಂಗಡಿಸಿ ನೂತನ ಗೋಕಾಕನ್ನು ಜಿಲ್ಲಾ ಕೇಂದ್ರವಾಗಿ ರಚಿಸುವಂತೆ ಆಗ್ರಹಿಸಿ ನಿಯೋಜಿತ ಗೋಕಾಕ ಜಿಲ್ಲಾ ರಚನಾ ಹೋರಾಟ ಚಾಲನಾ ಸಮಿತಿ ಬುಧವಾರ ಕರೆ ನೀಡಿದ್ದ ಗೋಕಾಕ ಬಂದ್ ಯಶಸ್ವಿಯಾಗಿದೆ. ಬೆಳಗ್ಗೆಯೇ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಾಯಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೋಕಾಕ ಬಂದ್‌ಗೆ ಚಾಲನೆ ನೀಡಿದರು.

ಸಂಗೊಳ್ಳಿ ರಾಯಣ್ಣ ವೃತ್ತದಿಂದ ಅಪ್ಸರಾ ಕೂಟ, ಬಾಜಿ ಮಾರ್ಕೆಟ್‌, ತಂಬಾಕ ಕೂಟ, ಬಾಫನಾ ಚೌಕ, ಅಜಂತಾ ಕೂಟ, ಆನಂದ ಚಿತ್ರಮಂದಿರ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ವರ್ತಕರು ತಮ್ಮ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಗೋಕಾಕ ಬಂದ್‌ಗೆ ತಮ್ಮ ಬೆಂಬಲ ನೀಡಿದರು. ನ್ಯಾಯವಾದಿಗಳ ಸಂಘವು ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ಜಿಲ್ಲಾ ಹೋರಾಟದಲ್ಲಿ ಪಾಲ್ಗೊಂಡರು.ಜಿಲ್ಲಾ ರಚನಾ ಹೋರಾಟ ಚಾಲನಾ ಸಮಿತಿ ಪ್ರಮುಖರು ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಮುಖಂಡರಾದ ಅಶೋಕ ಪೂಜೇರಿ, ಬಸಗೌಡ ಪಾಟೀಲ, ಡಾ.ರಾಜೇಂದ್ರ ಸಣ್ಣಕ್ಕಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಜಿ.ಬಿರಾದಾರ ಪಾಟೀಲ, ಗಣಪತಿ ಇಳಿಗೇರ, ಶಶಿಧರ ದೇಮಶೆಟ್ಟಿ ಮುಂತಾದವರು ಮಾತನಾಡಿ, ಗೋಕಾಕ ಜಿಲ್ಲೆಯಾಗಲು ಎಲ್ಲ ರೀತಿಯಿಂದಲೂ ಯೋಗ್ಯವಿದೆ. ದೊಡ್ಡದಾದ ಬೆಳಗಾವಿ ಜಿಲ್ಲೆಯನ್ನು ಕೂಡಲೇ ವಿಂಗಡಿಸಬೇಕು. ಗೋಕಾಕನ್ನು ಹೊಸ ಜಿಲ್ಲೆಯನ್ನಾಗಿ ಘೋಷಣೆ ಮಾಡುವ ಮೂಲಕ ಸುಮಾರು 40 ವರ್ಷಗಳ ಹೋರಾಟಕ್ಕೆ ಪ್ರತಿಫಲ ನೀಡಬೇಕು. ಬೆಳಗಾವಿಯಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಗೋಕಾಕನ್ನು ಜಿಲ್ಲೆಯನ್ನಾಗಿ ಮಾಡಿ, ಮುಂದಿನ ಬಜೆಟ್ ಸಮಯದಲ್ಲಿ ಸರ್ಕಾರದ ಗೆಜೆಟ್‌ ಹೊರಡಿಸುವಂತೆ ಸರ್ಕಾರವನ್ನು ಒಕ್ಕೂರಲಿನಿಂದ ಆಗ್ರಹಿಸಿದರು.

ಜಾರಕಿಹೊಳಿ ಸಹೋದರರು ಮನಸ್ಸು ಮಾಡಿದರೆ ಗೋಕಾಕ ಜಿಲ್ಲೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಂದು ಸರ್ಕಾರವನ್ನು ಕೆಡವಿ ಇನ್ನೊಂದು ಸರ್ಕಾರವನ್ನು ರಚಿಸುವ ತಾಕತ್ತು ನಮ್ಮ ಸಹೋದರರಿಗೆ ಇದೆ. ಅವರಿಗೆ ಜಿಲ್ಲಾ ವಿಷಯವೇನೂ ದೊಡ್ಡದೇನಲ್ಲ. ನಾಲ್ಕು ದಶಕಗಳಿಂದ ನಡೆಯುತ್ತಿರುವ ಜಿಲ್ಲಾ ಹೋರಾಟಕ್ಕೆ ಸಮಸ್ತ ಸಾರ್ವಜನಿಕರು ಬೆಂಬಲ ನೀಡುತ್ತಿದ್ದಾರೆ. ಇದಕ್ಕೆ ಜಾರಕಿಹೊಳಿ ಸಹೋದರರು ಸಹ ತಮ್ಮ ಅಚಲ ನಿಷ್ಠೆಯನ್ನು ನೀಡುತ್ತ ನಮ್ಮ ಹೋರಾಟಕ್ಕೆ ಶಕ್ತಿ ತುಂಬುತ್ತಿದ್ದಾರೆ. ಆದರೆ, ಸರ್ಕಾರ ಯಾಕೆ ಮನಸ್ಸು ಮಾಡುತ್ತಿಲ್ಲ ಎಂಬುದು ತಿಳಿಯುತ್ತಿಲ್ಲ. ಈಗ ಹೊಸ ಜಿಲ್ಲೆಗಳನ್ನು ರಚಿಸುವ ಸಂದರ್ಭ ಬಂದಿದ್ದು, ನಮ್ಮ ಗೋಕಾಕಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು. ಜಿಲ್ಲೆಯಲ್ಲಿಯೇ ಗೋಕಾಕ ನಗರವು ಅತಿ ಹೆಚ್ಚಿನ ಜನಸಂಖ್ಯೆ ಹೊಂದಿದ್ದು, ಜಿಲ್ಲಾ ಕೇಂದ್ರಕ್ಕೆ ಯೋಗ್ಯವಿದೆ. ಹಿಂದಿನ ಎಲ್ಲ ಆಯೋಗಗಳು ಗೋಕಾಕ ಪರವಾಗಿ ಸರ್ಕಾರಕ್ಕೆ ತಮ್ಮ ವರದಿಗಳನ್ನು ಸಲ್ಲಿಸಿವೆ. ಅಧಿವೇಶನದ ಸಂದರ್ಭದಲ್ಲಿ ಗೋಕಾಕ ಜನತೆಗೆ ನ್ಯಾಯ ದೊರಕಿಸಿಕೊಡಬೇಕು. ಶಾಂತಿ, ಸಹನೆಯಿಂದ ಹೋರಾಟ ಮಾಡಿಕೊಂಡು ಬರುತ್ತಿರುವ ನಾವುಗಳು ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಪ್ರತಿಭಟನೆಗಳನ್ನು ಮಾಡಬೇಕಾಗುತ್ತದೆ. ಸಾರ್ವಜನಿಕರ ಆಸ್ತಿ-ಪಾಸ್ತಿಗಳು ಹಾನಿಯಾದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ನಿರಂತರ ಧರಣಿ ಸತ್ಯಾಗ್ರಹದ ಎಚ್ಚರಿಕೆ: ಹೋರಾಟ ಸಮಿತಿಯ ನೇತೃತ್ವ ವಹಿಸಿದ್ದ ಶೂನ್ಯ ಸಂಪಾದನ ಮಠದ ಪೀಠಾಧೀಪತಿ ಮುರುಘ ರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಗೋಕಾಕ ಜಿಲ್ಲೆ ಸಂಬಂಧ ನಾಲ್ಕು ದಿನದಲ್ಲಿ ಜಿಲ್ಲಾ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿ ಕರೆದೊಯ್ಯಲಾಗುವುದು. ಸಮಕ್ಷಮವಾಗಿ ಮುಖ್ಯಮಂತ್ರಿಗಳನ್ನು ಕಂಡು ನಾವೆಲ್ಲರೂ ಮನವಿ ಮಾಡಿಕೊಳ್ಳೋಣ. ಅವರಿಗೆ ನಾಲ್ಕು ದಿನ ಗಡುವು ನೀಡೋಣ. ಒಂದು ವೇಳೆ ನಮ್ಮ ಕೂಗಿಗೆ ಮುಖ್ಯಮಂತ್ರಿಗಳು ಸ್ಪಂದಿಸದಿದ್ದಲ್ಲಿ ಮುಂದಿನ ಹೋರಾಟವನ್ನು ಸಿದ್ಧ ಮಾಡೋಣ. ಬಸವೇಶ್ವರ ವೃತ್ತ ಇಲ್ಲವೇ ತಹಸೀಲ್ದಾರ ಕಚೇರಿ ಎದುರು ನಿರಂತರ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಗುವುದು ಎಂದು ಎಚ್ಚರಿಸಿದರು.

ಮುರುಘ ರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೈಲಹೊಂಗಲ ಉಪ- ವಿಭಾಗಾಧಿಕಾರಿಗಳಿಗೆ ಗೋಕಾಕ ಜಿಲ್ಲೆ ಸಂಬಂಧ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮಠಾಧೀಶರು, ವಕೀಲರು, ವೈದ್ಯರು, ವಿವಿಧ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ವರ್ತಕರು, ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಸಹಕಾರಿ ಧುರೀಣರು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹಾಲಿ ಮಾಜಿ ಸದಸ್ಯರು, ಹಲವು ಸಂಸ್ಥೆಗಳ ಪ್ರತಿನಿಧಿಗಳು ಗೋಕಾಕ ಬಂದ್‌ನಲ್ಲಿ ಭಾಗವಹಿಸಿದ್ದರು.

ಕೋಟ್

ಡಿಸೆಂಬರ್ ತಿಂಗಳೊಳಗೆ ಗೋಕಾಕ ಜಿಲ್ಲೆಯಾಗಲಿದೆ. ಈ ಸಂಬಂಧ ಒತ್ತಾಯಿಸಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದ್ದಾರೆ. ನಮ್ಮ ಕುಟುಂಬವು ಇಷ್ಟರಲ್ಲೇ ಗೋಕಾಕ ಮಹಾ ಜನತೆಯ ಕನಸುಗಳನ್ನು ಸಾಕಾರ ಮಾಡಲಿದೆ. ಕಳೆದ ನಾಲ್ಕು ದಶಕಗಳಿಂದ ನಡೆಯುತ್ತಿರುವ ಗೋಕಾಕ ಜಿಲ್ಲಾ ಹೋರಾಟಕ್ಕೆ ಜಾರಕಿಹೊಳಿ ಕುಟುಂಬ ಬೆಂಬಲವ ನೀಡುತ್ತ ಬರುತ್ತಿದೆ. ಗೋಕಾಕ ಜಿಲ್ಲಾ ಕೇಂದ್ರವಾದರೆ ಆಡಳಿತಾತ್ಮಕವಾಗಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

-ಸರ್ವೋತ್ತಮ ಜಾರಕಿಹೊಳಿ, ಯುವ ಮುಖಂಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟಿ.ಎಂ. ಶಹೀದ್ ಗೆ ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪುರಸ್ಕಾರ
ಸರ್ಕಾರಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಕೊಡುಗೆ