ಗೋಕರ್ಣ ಹೋಬಳಿ ಮಟ್ಟದ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮ

KannadaprabhaNewsNetwork |  
Published : Sep 13, 2026, 02:45 AM IST
ಪ್ರಜಾ ಸೇವಾ ಕಾರ್ಯಕ್ರಮ ಉದ್ಘಾಟಿಸುತ್ತಿರುವುದು | Kannada Prabha

ಸಾರಾಂಶ

ಗೋಕರ್ಣ ಹೋಬಳಿ ಮಟ್ಟದ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮ ತೊರ್ಕೆಯ ನಾಡವರ ಸಂಘದ ರಾಮಕೃಷ್ಣ ಸಭಾವನದಲ್ಲಿ ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಶನಿವಾರ ನಡೆಯಿತು.

ಗೋಕರ್ಣ: ಇಲ್ಲಿನ ಹೋಬಳಿ ಮಟ್ಟದ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮ ತೊರ್ಕೆಯ ನಾಡವರ ಸಂಘದ ರಾಮಕೃಷ್ಣ ಸಭಾವನದಲ್ಲಿ ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಶನಿವಾರ ನಡೆಯಿತು.

ಹಳೆಯ ವಿದ್ಯುತ್ ತಂತಿಯ ಬದಲಾವಣೆ ಮಾಡದಿರುವುದರಿಂದ ತೊರ್ಕೆ ಗ್ರಾಪಂನ ಭಂಡಾರಿಕೇರಿಗೆ ವಿದ್ಯುತ್ ಸಮಸ್ಯೆ ಆಗುತ್ತಿರುವ ಬಗ್ಗೆ ಜನರು ದೂರು ನೀಡಿದ್ದರು, ಈ ಬಗ್ಗೆ ತ್ವರಿತ ಕ್ರಮಕ್ಕೆ ಸೂಚಿಸಲಾಯಿತು.

ದೇವಣದ ಬಳಿ ಗುಡ್ಡ ಕುಸಿತದಿಂದ ಹತ್ತಿರ ನಿವಾಸಿಗಳಿಗೆ ಮಣ್ಣು ಕಲ್ಲುಗಳು, ಮನೆ ಬಾಗಿಲಿಗೆ ಬಂದು ಬಿದ್ದಿರುವುದು ಹಾಗೂ ಮಳೆ ಬಂದರೆ ಮನೆಯೊಳಗೆ ಒಳಗೆ ನೀರು ಬರುತ್ತಿದ್ದು, ಇದಕ್ಕೆ ಪರಿಹಾರ ನೀಡುವಂತೆ ಅಲ್ಲಿನ ಮಹಿಳೆ ದೂರು ನೀಡಿದ್ದರು. ಇದಕ್ಕೆ ಉತ್ತರಿಸಿದ ಕುಮಟಾ ತಹಸೀಲ್ದಾರ್‌, ಈಗಾಗಲೇ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ ಎಂದಾಗ, ನಮಗೆ ತಡೆಗೋಡೆ ನಿರ್ಮಾಣ ಮಾಡಿಕೊಡಿ ಎಂದು ಬೇಡಿಕೆ ಇಟ್ಟರು. ಹೊಸ್ಕಟ್ಟಾ, ಸಾಣಿಕಟ್ಟಾದ ಬಳಿ ಗುಡ್ಡ ಕುಸಿತವಾದ ಹತ್ತಿರದ ನಿವಾಸಿಗಳು ತಡೆಗೋಡೆ ನಿರ್ಮಿಸುವಂತೆ ಮನವಿ ನೀಡಿದರು.

ಗೋಕರ್ಣ ಕಡಲತೀರದ ಹತ್ತಿರ ವಾಸಿಸುವ ಮೀನುಗಾರರಿಗೆ ಹಲವು ದಶಕದಿಂದ ವಾಸ ಮಾಡುತ್ತಿದ್ದ ಸ್ಥಳಕ್ಕೆ ಪಟ್ಟ ನೀಡದೆ ಇರುವುದರಿಂದ ಪಹಣಿ ಪತ್ರದಲ್ಲಿ ಮೀನುಗಾರರ ಹೆಸರು ಇಲ್ಲದೆ ಇರುವುದರಿಂದ ಸರ್ಕಾರಿ ಸೌಲಭ್ಯಗಳು ಸಿಗದೆ ತೊಂದರೆಯಾಗುತ್ತಿರುವುದು, ದೋಣಿ, ಬಲೆ ಖರೀದಿಗೆ ಸಾಲ ಮಾಡಲು ಆಗದಿರುವ ಬಗ್ಗೆ ಮನವಿ ನೀಡಿ ತ್ವರಿತ ಕ್ರಮಕ್ಕೆ ಬೇಡಿಕೆ ಇಟ್ಟರು. ಈ ಬಗ್ಗೆ ಪಂಚಾಯಿತಿಯಿಂದ ಬೇಕಾದ ಅಗತ್ಯ ದಾಖಲೆ ಸಂಬಂಧಿಸಿದ ಇಲಾಖೆಗೆ ತ್ವರಿತವಾಗಿ ನೀಡಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದ ಶಾಸಕರು, ಸಂಬಂಧಿಸಿದ ಇಲಾಖೆ ಕ್ರಮಕ್ಕೆ ಸೂಚಿಸಿದರು.

ಪ್ರವಾಸಿ ಬೋಟ್‌ಗೆ ಅನುಮತಿ ನೀಡಲು ಸತಾಯಿಸಲಾಗುತ್ತಿದೆ ಎಂದು ಸ್ಥಳೀಯ ಯುವಕರು ದೂರಿದರು. ಶಾಸಕರು ಸಚಿವರೊಂದಿಗೆ ಚರ್ಚಿಸುವ ಭರವಸೆ ನೀಡಿದರು.

೪೮ ಅರ್ಜಿಗಳ ವಿಲೇವಾರಿ: ಸಂಧ್ಯಾ ಸುರಕ್ಷಾ, ಪಿಂಚಣಿ, ವಿಕಲಚೇತನ ವೇತನ, ಪಿಎಂವೈಜಿ ಮನೆಯ ಮಂಜೂರು ಪತ್ರ ಸೇರಿದಂತೆ ವಿವಿಧ ಅರ್ಜಿ ನೀಡಿದ ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಮಂಜೂರಾತಿ ಪತ್ರವನ್ನು ಶಾಸಕರು ವಿತರಿಸಿದರು. ಭಾಗ್ಯಲಕ್ಷ್ಮಿ ಖಾತೆ ಪುಸ್ತಕ, ಮತ್ತಿತರ ಸರ್ಕಾರಿ ಯೋಜನೆಗಳಿಂದ ಬಂದ ದಾಖಲಾತಿಗಳನ್ನು ಫಲಾನುಭವಿಗಳಿಗೆ ನೀಡಲಾಯಿತು.

ಕುಮಟಾ ತಹಸೀಲ್ದಾರ್‌ ಶ್ರೀಕೃಷ್ಣ ಕಾಮಕರ, ತಾಪಂ ಕಾರ್ಯನಿರ್ವಹಣಾಧಿಕಾರಿ ಆರ್‌.ಎಲ್. ಭಟ್ ಉಪಸ್ಥಿತರಿದ್ದರು.

ತೊರ್ಕೆ ಗ್ರಾಪಂ ಮಾಜಿ ಅಧ್ಯಕ್ಷ ಆನಂದ ಕವರಿ, ಜಿಪಂ ಮಾಜಿ ಸದಸ್ಯ ಪ್ರದೀಪ ನಾಯಕ ದೇವರಭಾವಿ ಹಾಗೂ ಊರಿನವರು ಕಾರ್ಯಕ್ರಮಕ್ಕೆ ಸ್ಥಳಾವಕಾಶ ಹಾಗೂ ಅಚ್ಚುಕಟ್ಟಿನ ವ್ಯವಸ್ಥೆಗೆ ಸಹಕಾರ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿ ಶೀತ, ಉಷ್ಣ ನೀರು ಸೇವನೆ ಆರೋಗ್ಯಕ್ಕೆ ಹಾನಿಕರ: ರಾಘವೇಶ್ವರ ಭಾರತೀ ಮಹಾಸ್ವಾಮಿಗಳು
ಸರ್ಕಾರದ ಯೋಜನೆಗಳ ಬಡವರ ಬದುಕಿನಲ್ಲಿ ಬದಲಾವಣೆ ತರಲಿ: ಭೀಮಣ್ಣ ನಾಯ್ಕ