ಇಬ್ಬರ ಬಂಧನ: ₹6.20 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳ ವಶ

KannadaprabhaNewsNetwork | Published : Sep 4, 2024 1:49 AM

ಸಾರಾಂಶ

ಜುಲೈ, ಆಗಸ್ಟ್‌ನಲ್ಲಿ ನ್ಯಾಮತಿ, ಸುರಹೊನ್ನೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ 8 ಮನೆಗಳಲ್ಲಿ ಸರಣಿ ಕಳವು ಕೃತ್ಯ ನಡೆಸಿದ್ದ ಕಳ್ಳರನ್ನು ನ್ಯಾಮತಿ ಠಾಣೆ ಪೊಲೀಸರು ಬಂಧಿಸಿ, ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

- 8 ಮನೆಗಳಲ್ಲಿ ಸರಣಿ ಕಳವು ನಡೆಸಿದ್ದ ನಾಲ್ವರು ಆರೋಪಿಗಳು

- ಚನ್ನಗಿರಿ ತಾಲೂಕಿನ ರಾಮು, ಸಂತೋಷ ಬಂಧನ, ಇನ್ನಿಬ್ಬರು ನಾಪತ್ತೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಜುಲೈ, ಆಗಸ್ಟ್‌ನಲ್ಲಿ ನ್ಯಾಮತಿ, ಸುರಹೊನ್ನೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ 8 ಮನೆಗಳಲ್ಲಿ ಸರಣಿ ಕಳವು ಕೃತ್ಯ ನಡೆಸಿದ್ದ ಕಳ್ಳರನ್ನು ನ್ಯಾಮತಿ ಠಾಣೆ ಪೊಲೀಸರು ಬಂಧಿಸಿ, ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಚನ್ನಗಿರಿ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದ ರಾಮ (40) ಹಾಗೂ ಮಾವಿನಕಟ್ಟೆ ಗ್ರಾಮದ ಸಂತೋಷ (48) ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 80 ಗ್ರಾಂ ಚಿನ್ನ, 810 ಗ್ರಾಂ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು ₹6.20 ಲಕ್ಷ ಎಂದು ಅಂದಾಜಿಸಲಾಗಿದೆ.

ನಾಲ್ವರ ತಂಡದಿಂದ ಕಳವು ಕೃತ್ಯ:

ಕಳವು ಪ್ರಕರಣ ನಡೆದಿದ್ದ ಹಿನ್ನೆಲೆ ಡಿವೈಎಸ್ಪಿ ರುದ್ರಪ್ಪ ಉಜ್ಜನಕೊಪ್ಪ, ನ್ಯಾಮತಿ ಸಿಪಿಐ ರವಿ, ಪಿಎಸ್‌ಐ ಜಯಪ್ಪ ನಾಯ್ಕ ಹಾಗೂ ಇನ್ನಿತರೆ ಪೊಲೀಸ್‌ ಸಿಬ್ಬಂದಿಯ ತಂಡ ರಚಿಸಿ, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿತ್ತು. ಸೆ.1ರಂದು ಕೂಲಿ ಕೆಲಸ ಮಾಡುತ್ತಿದ್ದ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಹೋಬಳಿಯ ಚಿಕ್ಕಬೆನ್ನೂರು ಗ್ರಾಮದ ರಾಮ, ಮಾವಿನಕಟ್ಟೆಯ ಸಂತೋಷನನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆಗ ಈ ಇಬ್ಬರು ಧನಂಜಯ ಮತ್ತು ಮುಖೇಶ್ ಎಂಬಿಬ್ಬರ ಜತೆ ಸೇರಿ ನಾಲ್ವರ ತಂಡ ಮಾಡಿಕೊಂಡು, ಮನೆಗಳಲ್ಲಿ ಕಳವು ನಡೆಸಲು ಶುರುಮಾಡಿದ್ದರು.

ಇನ್ನಿಬ್ಬರ ಬಂಧನಕ್ಕೂ ಕ್ರಮ:

ಜುಲೈ, ಆಗಸ್ಟ್ ತಿಂಗಳಲ್ಲಿ ನ್ಯಾಮತಿ ತಾಲೂಕಿನ ನ್ಯಾಮತಿ ಟೌನ್, ಸುರಹೊನ್ನೆ, ಗಂಜಿನಹಳ್ಳಿ, ಚಟ್ನಹಳ್ಳಿ ಗ್ರಾಮಗಳ ವ್ಯಾಪ್ತಿಯ ಸುಮಾರು 8 ಮನೆಗಳಲ್ಲಿ ಸರಣಿ ಕಳವು ಕೃತ್ಯ ನಡೆಸಿದರು. ಈ ಬಗ್ಗೆ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ನ್ಯಾಮತಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳಾದ ರಾಮ ಮತ್ತು ಸಂತೋಷನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ನಾಪತ್ತೆಯಾಗಿರುವ ಇನ್ನಿಬ್ಬರ ಪತ್ತೆಗೆ ಕಾರ್ಯಾಚರಣೆ ಚಾರಿಯಲ್ಲಿದೆ.

ಎಸ್‌ಪಿ ಶ್ಲಾಘನೆ:

ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಹೆಚ್ಚುವರಿ ಎಸ್‌ಪಿ ವಿಜಯಕುಮಾರ ಎಂ.ಸಂತೋಷ, ಮಂಜುನಾಥ ಕೆಎಸ್‌ಪಿಎಸ್‌ ಡಿವೈಎಸ್ಪಿ ರುದ್ರಪ್ಪ ಉಜ್ಜನಕೊಪ್ಪ, ನ್ಯಾಮತಿ ಪೊಲೀಸ್ ತಂಡದ ಸಿಪಿಐ ರವಿ, ಪಿಎಸ್ಐ ಜಯಪ್ಪ ನಾಯ್ಕ ಸಿಬ್ಬಂದಿ ಉಮೇಶ್‌, ಮಂಜಪ್ಪ, ಚನ್ನೇಶ್, ಮಹೇಶ್ ನಾಯ್ಕ, ಅನಂದ, ಪ್ರವೀಣ್ ಕುಮಾರ, ದೇವರಾಜ್, ಡಿ.ಎನ್, ಪ್ರಶಾಂತ ಇ.ಎಸ್. ಅವರನ್ನು ಒಳಗೊಂಡ ಪೊಲೀಸ್ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದು ಎಂದು ನ್ಯಾಮತಿ ಪೊಲೀಸರು ತಿಳಿಸಿದ್ದಾರೆ.

- - -

Share this article