ಮಂಗಳೂರು: ರೈಲಿನಲ್ಲಿ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಸುಮಾರು ₹ 50 ಸಾವಿರ ಮೌಲ್ಯದ ಚಿನ್ನದ ಬ್ರಾಸ್ಲೆಟ್ ಅನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆ ಮೆರೆದಿದ್ದಾರೆ.
ಈ ಬಗ್ಗೆ ಯಾವುದೇ ದೂರು ದಾಖಲಾಗಿದೆಯೇ ಎಂದು ಪರಿಶೀಲಿಸಿದ ಆರ್‌ಪಿಎಫ್ ಇನ್ಸ್‌ಪೆಕ್ಟರ್, ಸಂಬಂಧಪಟ್ಟ ರೈಲ್ವೆ ವಿಭಾಗಗಳು ಹಾಗೂ ಸರ್ಕಾರಿ ರೈಲ್ವೆ ಪೊಲೀಸರನ್ನು ಸಂಪರ್ಕಿಸಿದ್ದರು. ಬಳಿಕ ರೈಲಿನ ಕಾಯ್ದಿರಿಸುವಿಕೆ ಪಟ್ಟಿಯನ್ನು ಪರಿಶೀಲಿಸಿ, ಐಆರ್‌ಸಿಟಿಸಿ ಮೂಲಕ ಪ್ರಯಾಣಿಕರ ಸಂಪರ್ಕ ವಿವರಗಳನ್ನು ಪಡೆದು ತನಿಖೆ ನಡೆಸಿದರು.
ಈ ವೇಳೆ ಎರ್ನಾಕುಲಂನಿಂದ ಮಂಗಳೂರು ಸೆಂಟ್ರಲ್‌ವರೆಗೆ ಪ್ರಯಾಣಿಸಿದ್ದ ರಜನಿ ಮನೋಹರ್ ನಾಯ್ಕ ಅವರನ್ನು ಸಂಪರ್ಕಿಸಿದಾಗ, ಪ್ರಯಾಣದ ವೇಳೆ ತಮ್ಮ ಚಿನ್ನದ ಬಳೆ ಕಳೆದುಕೊಂಡಿರುವುದನ್ನು ಅವರು ದೃಢಪಡಿಸಿದರು. ಆದರೆ, ಎಲ್ಲಿ ಕಳೆದುಕೊಂಡಿದ್ದರು ಎಂಬುದು ತಿಳಿಯದ ಕಾರಣ ದೂರು ದಾಖಲಿಸಿರಲಿಲ್ಲ.ಮಂಗಳವಾರ ಮಂಗಳೂರು ಸೆಂಟ್ರಲ್ ಆರ್‌ಪಿಎಫ್ ಠಾಣೆಗೆ ಆಗಮಿಸಿದ ರಜನಿ ಅವರಿಗೆ ಸೂಕ್ತ ಪರಿಶೀಲನೆ ನಡೆಸಿದ ಬಳಿಕ ಪತ್ತೆಯಾದ ಚಿನ್ನದ ಬ್ರಾಸ್ಲೆಟ್ ಅನ್ನು ಅಗತ್ಯ ಸ್ವೀಕೃತಿ ದಾಖಲೆಯೊಂದಿಗೆ ಹಸ್ತಾಂತರಿಸಲಾಯಿತು.