ಕಡಬ ತಾಲೂಕಿನ ಕೊಯಿಲ ಮತ್ತು ರಾಮಕುಂಜ ಗ್ರಾಪಂ ವ್ಯಾಪ್ತಿಯ ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕ ರಸ್ತೆಯುದ್ದಕ್ಕೂ ಉಂಟಾಗಿರುವ ಹೊಂಡಗಳಿಗೆ ಭಾನುವಾರ ಸ್ಥಳಿಯರು ಶ್ರಮ ಸೇವೆ ಮೂಲಕ ಮಣ್ಣು, ಜಲ್ಲಿಕಲ್ಲುಗಳನ್ನು ತುಂಬಿಸಿ ಸಂಚಾರಕ್ಕೆ ಅನುಕೂಲ ಮಾಡಿ ಮಾದರಿ ಕಾರ್ಯ ಮಾಡಿದ್ದಾರೆ.
ಉಪ್ಪಿನಂಗಡಿ: ಕಡಬ ತಾಲೂಕಿನ ಕೊಯಿಲ ಮತ್ತು ರಾಮಕುಂಜ ಗ್ರಾಪಂ ವ್ಯಾಪ್ತಿಯ ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕ ರಸ್ತೆಯುದ್ದಕ್ಕೂ ಉಂಟಾಗಿರುವ ಹೊಂಡಗಳಿಗೆ ಭಾನುವಾರ ಸ್ಥಳಿಯರು ಶ್ರಮ ಸೇವೆ ಮೂಲಕ ಮಣ್ಣು, ಜಲ್ಲಿಕಲ್ಲುಗಳನ್ನು ತುಂಬಿಸಿ ಸಂಚಾರಕ್ಕೆ ಅನುಕೂಲ ಮಾಡಿ ಮಾದರಿ ಕಾರ್ಯ ಮಾಡಿದ್ದಾರೆ.
ಈ ರಸ್ತೆಯ ಗೋಳಿತ್ತಡಿಯಿಂದ ತ್ರೀವೇಣಿ ಸರ್ಕಲ್ ತನಕದ ಸುಮಾರು ೨.೫ ಕಿಮೀ ದೂರದ ತನಕ ಹೆಚ್ಚು ಹೊಂಡಗಳು ನಿರ್ಮಾಣವಾಗಿ ವಾಹನ ಸಂಚಾರಕ್ಕೆ ಅಯೋಗ್ಯವಾಗಿತ್ತು. ಹೀಗಾಗಿ ಕೊಯಿಲ ಗ್ರಾಪಂ ಮಾಜಿ ಸದಸ್ಯ ಚಿದಾನಂದ ಪಾನ್ಯಾಲು ಮುಂದಾಳುತ್ವದಲ್ಲಿ ರಸ್ತೆ ದುರಸ್ತಿಗಾಗಿ ವಾಟ್ಸಾಪ್ ಗ್ರೂಪ್ ರಚಿಸಿ ಆರ್ಥಿಕ ಸಹಾಯ ನೀಡುವಂತೆ ಯಾಚಿಸಲಾಗಿತ್ತು. ಹಲವು ದಾನಿಗಳು ಹಣ ಸೇರಿದಂತೆ ಇನ್ನಿತರ ರೂಪದಲ್ಲಿ ಸಹಾಯ ಮಾಡಿದ್ದಾರೆ. ಕಳೆದ ಬುಧವಾರ ಯಂತ್ರದ ಮೂಲಕ ರಸ್ತೆ ಇಕ್ಕೆಲಗಳಲ್ಲಿದ್ದ ಪೊದರು, ಮರಗಳ ತೆರವು, ಚರಂಡಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಭಾನುವಾರದ ತನಕ ಮುಂದುವರಿದಿತ್ತು. ಜೊತೆಗೆ ಭಾನುವಾರ ಸ್ಥಳಿಯರು ಶ್ರಮದಾನ ಮೂಲಕ ಹೊಂಡ ಮುಚ್ಚುವ ಕಾರ್ಯ ನಡೆಸಿದರು. ೩೦ ವರ್ಷಗಳ ಹಿಂದೆ ಈ ರಸ್ತೆ ನಿರ್ಮಾಣವಾಗಿತ್ತು. ಎಂಟು ವರ್ಷಗಳ ಹಿಂದೆ ನಬಾರ್ಡ್ ಯೋಜನೆಯಡಿ ಸುಮಾರು ೩೪ ಲಕ್ಷ ರು. ವೆಚ್ಚದಲ್ಲಿ ಗೋಳಿತ್ತಡಿಯಿಂದ ನೆಲ್ಯೊಟ್ಟು ತನಕ ಮರು ಡಾಮರಿಕರಣಗೊಳಿಸಲಾಗಿತ್ತು. ಕೆಲವೇ ತಿಂಗಳಲ್ಲಿ ಹೊಂಡಮಯವಾಯಿತು. ಕಳಪೆ ಕಾಮಗಾರಿಯ ಅಸಮಾಧಾನದ ಬೆನ್ನಲ್ಲೇ ಮರು ಡಾಮರಿಕರಣ ಮಾಡಿದರೂ ಮತ್ತೆ ಮುಂದಿನ ವರ್ಷ ಹೊಂಡಮಯವಾಯಿತು. ಬಳಿಕ ಅಂದಿನ ಶಾಸಕ ಎಸ್. ಅಂಗಾರ ಅವರ ಶಿಪಾರಸಿನಂತೆ ಗೋಳಿತ್ತಡಿಯಿಂದ ತ್ರಿವೇಣಿ ಸರ್ಕಲ್ ತನಕ ೪.೫೦ ಲಕ್ಷ ರು. ವೆಚ್ಚದಲ್ಲಿ ತೇಪೆ ಕಾರ್ಯ ನಡೆಯಿತು. ಬಳಿಕ ಶಾಸಕಿ ಭಾಗೀರಥಿ ಮುರುಳ್ಯ ಶಿಪಾರಸಿನಂತೆ ಕಳೆದ ವರ್ಷ ೯.೧೩ ಲಕ್ಷ ರು. ವೆಚ್ಚದಲ್ಲಿ ತೇಪೆ ಹಾಕಲಾಗಿತ್ತಾದರೂ ಮತ್ತೆ ಹೊಂಡಮಯವಾಗಿತ್ತು.
ಅನುದಾನ ಬಿಡುಗೆಯಾದರೂ ಕೆಲಸ ಇಲ್ಲ: ಈ ರಸ್ತೆಯ ಗೋಳಿತ್ತಡಿಯಿಂದ ಸುಮಾರು ೮೦೦ ಮೀಟರ್‌ನಷ್ಟು ಉದ್ದಕ್ಕೆ ಡಾಮರೀಕರಣಕ್ಕೆ ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ದಿ ಯೋಜನೆಯಡಿ ಶಾಸಕಿ ಭಾಗೀರಥಿ ಮುರುಳ್ಯ ಶಿಪಾರಸಿನಂತೆ ಸುಮಾರು ೪೦ ಲಕ್ಷ ರು. ಅನುದಾನ ಬಿಡುಗಡೆಗೊಂಡಿದೆ. ಆದರೆ ಕೆಲಸ ಪ್ರಾರಂಭವಾಗಿಲ್ಲ. ಡಾಮರು ಕೊರತೆ: ಗೋಳಿತ್ತಡಿ-ಏಣಿತ್ತಡ್ಕ ರಸ್ತೆಗೆ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ದಿ ಯೋಜನೆಯಡಿ ಸುಮಾರು ೮೦೦ ಮೀಟರ್ ರಸ್ತೆ ಡಾಮರೀಕರಣಕ್ಕೆ ೪೦ ಲಕ್ಷ ರು. ಅನುದಾನ ಬಿಡುಗಡೆಯಾಗಿದೆ. ಕಾಮಗಾರಿ ಆರಂಭಿಸಲು ಮದ್ಯ ಪ್ರಾಚ್ಯದಲ್ಲಿ ದೇಶಗಳಲ್ಲಿನ ಯುದ್ದದ ಪರಿಣಾಮ ಆರಂಭದಲ್ಲಿ ಡಾಂಬರು ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಕಾರ್ಯ ನಡೆಸಲು ಅಸಾಧ್ಯವಾಗಿದೆ. ಇದೀಗ ಡಾಂಬರ್ ಲಭ್ಯವಿದ್ದರೂ ಮಳೆಗಾಲವಾದರಿಂದ ಕಾಮಗಾರಿ ನಡೆಸಲು ಸಾದ್ಯವಿಲ್ಲ. ಮಳೆ ಪ್ರಮಾಣ ಕಡಿಮೆಯಾದ ಬಳಿಕ ಡಾಂಬರ್ ಕಾರ್ಯ ನಡೆಸಲಾಗುವುದು ಎಂದು ಜಿಪಂ ಇಂಜಿನಿಯರ್ ಭರತ್ ಬಿ.ಎಂ. ತಿಳಿಸಿದ್ದಾರೆ. ನಾಗರಿಕರ ಸ್ಪಂದನ ಸ್ವಾಗತಾರ್ಹ: ರಸ್ತೆಗಳಲ್ಲಿ ಉಂಟಾದ ಹೊಂಡಗಳನ್ನು ಮಣ್ಣು , ಜಲ್ಲಿ ಹಾಕಿ ಮುಚ್ಚಿ ಮಳೆಗಾಲದಲ್ಲಿ ಸಂಚಾಯ ಯೋಗ್ಯ ಮಾಡಲು ಮತ್ತು ರಸ್ತೆ ಬದಿಯ ಪೊದರು, ಮರ ತೆರವು ಚರಂಡಿ ನಿರ್ಮಾಣ ಮಾಡಲು ಆರ್ಥಿಕ ಸಹಾಯ ಕೋರಲಾಗಿತ್ತು. ನಾಗರಿಕ ವಲಯದ ದಾನಿಗಳ ಸಕಾರತ್ಮಕ ಸ್ಪಂದನೆಯಿಂದ ಈ ಅನುಪಮ ಕಾರ್ಯ ನಡೆಸುವಂತಾಗಿದೆ ಎಂದು ಕೊಯಿಲ ಗ್ರಾಪಂ ಮಾಜಿ ಸದಸ್ಯ ಚಿದಾನಂದ ಪಾನ್ಯಾಲು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.