-ಬಾಲೇನಹಳ್ಳಿ ಗ್ರಾಮದಲ್ಲೊಂದು ವಿಶಿಷ್ಟ ಸಂಪ್ರದಾಯ
-----ರಮೇಶ್ ಬಿದರಕೆರೆ
ಕನ್ನಡಪ್ರಭ ವಾರ್ತೆ ಹಿರಿಯೂರು ಗ್ರಾಮದ ಸೊಸೆಯಂದಿರು ಕುಣಿವ ವಿಶಿಷ್ಟ ಸಂಪ್ರದಾಯದ ಜಾತ್ರೆ ಬಾಲೇನಹಳ್ಳಿ ಗ್ರಾಮದಲ್ಲಿ ನಡೆಯಿತು. ಕಾಡುಗೊಲ್ಲರ ಆರಾಧ್ಯ ದೇವತೆ ಗೊಲ್ಲಹಳಮ್ಮನ ಭಂಡಾರೋತ್ಸವ ಸಂಭ್ರಮದಿಂದ ಜರುಗಿತು. ಈ ಭಂಡಾರೋತ್ಸವದಲ್ಲಿ ಗ್ರಾಮದ ಸೊಸೆಯಂದಿರು ಕುಣಿಯುವುದು ವಾಡಿಕೆ.ವಿಜಯದಶಮಿ ಅಂಬಿನೋತ್ಸವದೊಂದಿಗೆ ಆರಂಭವಾಗುವ ಈ ಜಾತ್ರೆ ಏಕಾದಶಿ ವಿಶೇಷ ಪೂಜೆ, ದ್ವಾದಶಿ, ಹರಿಸೇವೆ, ಕುರಿ ಕರೆಯುವ ಉತ್ಸವ, ಪಲ್ಲಕ್ಕಿ ಉತ್ಸವ, ಆರತಿ, ಸಿಡಿ ಮದ್ದಿನ ಉತ್ಸವ, ಮರುದಿನ ಭoಡಾರೋತ್ಸವ ಕಾರ್ಯಕ್ರಮದೊಂದಿಗೆ ವಿಜೃಂಭಣೆಯಿಂದ ಕೊನೆಗೊಳ್ಳುತ್ತದೆ.
ಹಬ್ಬದ ಕೊನೆಯ ದಿನ ಸೊಸೆಯಂದಿರು ಸೀರೆಯುಟ್ಟು, ಕೈಯಲ್ಲಿ ಬೇವಿನ ಸೊಪ್ಪು ಹಿಡಿದು ದೇವಿಯ ಭoಡಾರ ಹಣೆಗೆ ಇಟ್ಟುಕೊಂಡು ಸ್ವಯಂ ಪ್ರೇರಿತರಾಗಿ ವಾಲಗ ಹಾಗೂ ತಮಟೆಯ ಸದ್ದಿಗೆ ಹೆಜ್ಜೆ ಹಾಕುವ ಮೂಲಕ ಹರಕೆ ತೀರಿಸುತ್ತಾರೆ.ಚಿತ್ತಮುತ್ತಿ ಕುಲದ ಕರಡಿ ಕುಳ್ಳಪ್ಪನ ವಂಶಸ್ಥರಾದ ಕರಡಿಗೊಲ್ಲರು ಈ ಶ್ರೀದೇವಿ ಗೊಲ್ಲಳ್ಳಮ್ಮ, ಶ್ರೀ ಚಿತ್ರಲಿಂಗೇಶ್ವರ ಸ್ವಾಮಿ ಹಾಗೂ ತಿಮ್ಮಪ್ಪ ಸ್ವಾಮಿಯನ್ನು ಆರಾಧಿಸುತ್ತಾರೆ. ಗ್ರಾಮದಲ್ಲಿ ಬಹುತೇಕ ಕರಡಿಗೊಲ್ಲರ ಬೆಡಗಿನ ಮನೆಗಳಿವೆ. ಈ ಕುಟುಂಬಗಳಿಗೆ ಸೊಸೆಯಾಗಿ ಬಂದವರು ಪ್ರತಿಯೊಬ್ಬರು ಈ ಭoಡಾರ ಉತ್ಸವದಲ್ಲಿ ಭಾಗಿಯಾಗಿ ಕುಣಿಯುವ ಸಂಪ್ರದಾಯ ವಿಶಿಷ್ಟ.
ಗ್ರಾಮಕ್ಕೆ ಮದುವೆಯಾಗಿ ಬಂದ ಸೊಸೆಯಂದಿರು ಕುಣಿಯದಿದ್ದರೆ ಗ್ರಾಮದೇವತೆ ಗೊಲ್ಲಳಮ್ಮ ಕುಣಿಯುತ್ತಾಳೆ. ಹೀಗಾಗಿ ಅಮ್ಮನ ಅಪ್ಪಣೆಯಂತೆ ಅನಾದಿಕಾಲದಿಂದಲೂ ಸೊಸೆಯಂದಿರು ಈ ಉತ್ಸವದಲ್ಲಿ ಕುಣಿಯುವುದು ವಾಡಿಕೆ.ಹಬ್ಬದ ಕೊನೆಯ ಭಂಡಾರೋತ್ಸವದ ದಿನದಂದು ಗ್ರಾಮದಲ್ಲಿ ಶಾಂತಿ, ಸಮೃದ್ಧಿಗಾಗಿ ದೇವರು ಮನೆ ಮನೆಗೆ ಭೇಟಿ ನೀಡುತ್ತದೆ. ಬಳಿಕ
ಸೊಸೆಯಂದಿರು ಗ್ರಾಮದ ಹನುಮಂತರಾಯ ದೇವಸ್ಥಾನದಿಂದ ಕುಣಿತ ಆರಂಭಿಸುತ್ತಾರೆ. ಇದಾದ ಬಳಿಕ ಮಣೇವು ಕಾರ್ಯಕ್ರಮದೊಂದಿಗೆ ದಸರಾ ಹಬ್ಬ ಕೊನೆಗೊಳ್ಳುತ್ತದೆ......ಬಾಕ್ಸ್ .......
ನಮ್ಮೂರಿನ ದೇವಿಗೆ ಕುಣಿಯುವುದು ಎಂದರೆ ಅದು ಭಕ್ತಿಯ ಸಂಕೇತ. ಹಾಗಾಗಿ, ನಾವು ದೇವಿಯನ್ನು ಸಂತೃಪ್ತಿಗೊಳಿಸಲು ಕುಣಿಯುತ್ತೇವೆ. ಮಕ್ಕಳ ಜೊತೆ ಕುಣಿಸಿಕೊಳ್ಳುವುದು ದೇವಿಗೆ ಇಷ್ಟವಿಲ್ಲ. ಹಾಗಾಗಿ, ವಿಶೇಷವಾಗಿ ಸೊಸೆಯಂದಿರು ಕುಣಿದಾಗ ದೇವಿ ಸಂತೃಪ್ತಿಯಾಗುತ್ತಾಳೆ. ಗ್ರಾಮದಲ್ಲಿ ಉತ್ತಮ ಮಳೆಯಾಗಲಿ, ಯಾವುದೇ ರೋಗ ರುಜಿನ ಬಾರದಿರಲಿ, ಊರು ಅಭಿವೃದ್ಧಿಯಾಗಲಿ, ಶಾಂತಿ ನೆಮ್ಮದಿ ದೊರಕಲಿ ಎಂಬುದು ಕುಣಿತದ ಸಂಕೇತವಾಗಿದೆ ಎನ್ನುತ್ತಾರೆ ದೇವಿಯ ಸೊಸೆಯಂದಿರು.----
ಚಿತ್ರ 1,2 ತಾಲೂಕಿನ ಬಾಲೇನಹಳ್ಳಿಯ ಗೊಲ್ಲಹಳ್ಳಮ್ಮ ಭಂಡಾರೋತ್ಸವದಲ್ಲಿ ಗ್ರಾಮದ ಸೊಸೆಯಂದಿರು ಕುಣಿಯುತ್ತಿರುವುದು.