ಗೋಮಾಳ ಜಮೀನು ಖಾಸಗಿ ವ್ಯಕ್ತಿ ಹೆಸರಿಗೆ ಖಾತೆ: ಇಂಡುವಾಳು ಪಿಡಿಒ ಯೋಗೇಶ್‌ರಿಂದ ತೆರಿಗೆ ಹಣ ಗುಳುಂ, ಖಾಲಿ ಚೆಕ್‌ಗಳಿಗೆ ಸಹಿ

KannadaprabhaNewsNetwork |  
Published : May 31, 2025, 01:15 AM IST
೩೦ಕೆಎಂಎನ್‌ಡಿ-೨ಮಂಡ್ಯ ತಾಲೂಕು ಇಂಡುವಾಳು ಗ್ರಾಪಂಗೆ ಉಪ ಲೋಕಾಯುಕ್ತ ಬಿ.ವೀರಪ್ಪ ತೆರಳಿ ದಾಖಲಾತಿಗಳ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಕಿರಗಂದೂರು ಗ್ರಾಮದ ಸರ್ವೇ ನಂ.೨೬ರ ೧೭ ಗುಂಟೆ ಗೋಮಾಳ ಜಮೀನಿನಲ್ಲಿ ಯಾವುದೇ ಮಂಜೂರಾತಿ ಇಲ್ಲದೆ ಅನ್ಯಕ್ರಾಂತವಾಗದ ಸರ್ಕಾರಿ ಜಮೀನನ್ನು ಒಟ್ಟು ೧೨ ನಿವೇಶನಗಳಿಗೆ ವಿಜಯ್‌ಕುಮಾರ್ ಬಿನ್ ಚೆನ್ನಪ್ಪರವರ ಹೆಸರಿನಲ್ಲಿ ಖಾತೆ ಮಾಡಿ ನಮೂನೆ-೯ ಮತ್ತು ೧೧ ಎ ನಮೂನೆಗಳನ್ನು ವಿತರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಗೋಮಾಳ ಜಮೀನು ಖಾಸಗಿ ವ್ಯಕ್ತಿಗೆ ಅಕ್ರಮ ಖಾತೆ, ಒಂದು ವರ್ಷದಿಂದ ಇ- ಸ್ವತ್ತು ಅರ್ಜಿಗಳು ವಿಲೇವಾರಿಯಾಗಿಲ್ಲ, ಖಾಲಿ ಚೆಕ್‌ಗಳಿಗೆ ಪಿಡಿಒ ಮೊದಲೇ ಸಹಿ, ಸರ್ಕಾರದ ಹಣ ಪಿಡಿಒ ವೈಯಕ್ತಿಕ ಖಾತೆಗೆ, ಗ್ರಾಪಂ ಬ್ಯಾಂಕ್ ಖಾತೆಗೆ ಜಮೆಯಾಗದ ತೆರಿಗೆ ಹಣ, ನಾನು ದುಶ್ಚಟಗಳಿಗೆ ದಾಸನಾಗಿದ್ದೆ, ಒಮ್ಮೆ ಕ್ಷಮಿಸಿಬಿಡಿ. ಉಪ ಲೋಕಾಯುಕ್ತರೆದುರು ಪಿಡಿಒ ತಪ್ಪೊಪ್ಪಿಗೆ.

- ಇವು ಇಂಡುವಾಳು ಗ್ರಾಪಂ ಪರಿಶೀಲನೆಗೆ ಉಪ ಲೋಕಾಯುಕ್ತ ಬಿ.ವೀರಪ್ಪ ತೆರಳಿದ ವೇಳೆ ಕಂಡುಬಂದ ಅವಾಂತರಗಳು.

ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮ ಪಂಚಾಯಿತಿಗೆ ಉಪ ಲೋಕಾಯುಕ್ತ ಬಿ.ಶಿವಪ್ಪ ಅವರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದಾಗ ಹಾಜರಾತಿ ವಹಿಯಲ್ಲಿ ಕಂಪ್ಯೂಟರ್ ಆಪರೇಟರ್ ಕೆ.ಎಂ.ಮಂಜು ಮೇ ೭ ಮತ್ತು ೯ರಂದು ಸಹಿ ಮಾಡಿಲ್ಲ. ದ್ವಿತೀಯ ದರ್ಜೆ ಸಹಾಯಕಿ ಎಚ್.ಆರ್.ರಾಣಿ ಮತ್ತು ವಾಟರ್‌ಮನ್ ಎಲ್.ಅವಿನಾಶ್ ಮೇ ೨೨, ೨೩, ೨೬ರಂದು ಸಹಿ ಮಾಡಿಲ್ಲ. ಬಿಲ್ ಕಲೆಕ್ಟರ್ ಬಿ.ಎನ್.ಎಸ್.ಬಾಬು ೨೩, ೨೬ರಂದು ಸಹಿ ಮಾಡಿಲ್ಲದಿರುವುದು ಕಂಡುಬಂದಿತು. ಇದರ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಸಿ.ಯೋಗೇಶ್ ಹಾಜರಾತಿ ವಹಿಯನ್ನು ಪರಿಶೀಲಿಸಿಲ್ಲ. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ವೀಣಾ ಕೂಡ ಲೋಪವನ್ನು ಗಮನಿಸದೆ ಪರಿಶೀಲಿಸಲಾಗಿದೆ ಎಂದು ಸಹಿ ಮಾಡಿದ್ದಾರೆ.

೧೭ ಗುಂಟೆ ಗೋಮಾಳ ಜಮೀನು ಅಕ್ರಮ ಖಾತೆ:

ಕಿರಗಂದೂರು ಗ್ರಾಮದ ಸರ್ವೇ ನಂ.೨೬ರ ೧೭ ಗುಂಟೆ ಗೋಮಾಳ ಜಮೀನಿನಲ್ಲಿ ಯಾವುದೇ ಮಂಜೂರಾತಿ ಇಲ್ಲದೆ ಅನ್ಯಕ್ರಾಂತವಾಗದ ಸರ್ಕಾರಿ ಜಮೀನನ್ನು ಒಟ್ಟು ೧೨ ನಿವೇಶನಗಳಿಗೆ ವಿಜಯ್‌ಕುಮಾರ್ ಬಿನ್ ಚೆನ್ನಪ್ಪರವರ ಹೆಸರಿನಲ್ಲಿ ಖಾತೆ ಮಾಡಿ ನಮೂನೆ-೯ ಮತ್ತು ೧೧ ಎ ನಮೂನೆಗಳನ್ನು ವಿತರಿಸಿದ್ದಾರೆ. ಒಂದೇ ತಿಂಗಳಲ್ಲಿ ಬೇರೆಯವರಿಗೆ ಖಾತೆ ವರ್ಗಾವಣೆ ಮಾಡಿದ್ದಾರೆ. ಈ ನ್ಯೂನತೆ ಬಗ್ಗೆ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಪಿಡಿಒ ಎಚ್.ಬಿ.ವಿಶಾಲಮೂರ್ತಿ ಕಾರಣರೆಂದು ತಿಳಿಸಿದ್ದು, ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಉಪ ಲೋಕಾಯುಕ್ತರು ಶಿಫಾರಸು ಮಾಡಿದ್ದಾರೆ. ನಂತರದ ವಸ್ತುಸ್ಥಿತಿ ತನಗೆ ಗೊತ್ತಿರುವುದಿಲ್ಲವೆಂದು ತಾಪಂ ಇಒ ವೀಣಾ ಅವರು ಬೇಜವಾಬ್ದಾರಿ ಹೇಳಿಕೆ ನೀಡಿರುವುದಾಗಿ ತಿಳಿಸಿದ್ದಾರೆ.

ಪಿಡಿಒಗಳಿಗೆ ಅಧಿಕಾರವಿಲ್ಲ:

ಗೋಮಾಳ ಜಮೀನಿಗೆ ಅನಧಿಕೃತವಾಗಿ ನಮೂನೆ-೯ ಮತ್ತು ೧೧ ಎ ವಿತರಿಸಲು ಪಿಡಿಒಗಳಿಗೆ ಅಧಿಕಾರವಿಲ್ಲದಿದ್ದರೂ ಸಹ ಅನಧಿಕೃತವಾಗಿ ಪಿಡಿಒ ಅವರು ಫಾರಂ ನಂ.೯ ಮತ್ತು ೧೧ನ್ನು ವಿತರಿಸುವ ಮೂಲಕ ಆರ್‌ಟಿಸಿ, ಸರ್ವೇ ನಂಬರ್‌ಗಳಿಗೆ ಖಾತೆಯನ್ನು ಮಾಡಿದ್ದು, ನ್ಯೂನತೆಯ ಬಗ್ಗೆ ತಹಸೀಲ್ದಾರ್ ಕೂಡ ಕ್ರಮ ವಹಿಸದೆ ಮೌನ ವಹಿಸುವ ಮೂಲಕ ಕರ್ತವ್ಯ ಲೋಪವೆಸಗಿದ್ದಾರೆ. ೨೦೨೪ನೇ ಸಾಲಿನಿಂದ ಇ-ಸ್ವತ್ತಿಗೆ ಬಂದಿರುವ ಅರ್ಜಿಗಳೆಲ್ಲಾ ವಿಲೇವಾರಿಯಾಗದೆ ಬಾಕಿ ಉಳಿದಿವೆ. ಸ್ವತ್ತು ಪ್ರಮಾಣ ಪತ್ರಗಳ ವಿತರಣೆಯಲ್ಲಿಯೂ ಭಾರೀ ಅವ್ಯವಹಾರ ಮಾಡಿರುವುದು ಕಂಡುಬಂದಿದೆ ಎಂದು ಉಪ ಲೋಕಾಯುಕ್ತರು ತಿಳಿಸಿದ್ದಾರೆ.

ಪಿಡಿಒ ವೈಯಕ್ತಿಕ ಖಾತೆಗೆ ಸರ್ಕಾರದ ಹಣ:

ಪಿಡಿಒ ಕೆ.ಸಿ.ಯೋಗೇಶ್‌ ಮಾಸಿಕ ೮೦ ಸಾವಿರ ರು. ಸಂಬಳ ಪಡೆಯುತ್ತಿದ್ದು, ಮೊಬೈಲ್ ಫೋನ್- ಪೇ ಪರಿಶೀಲಿಸಿದಾಗ ಸಂಬಳಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದ್ದಾರೆ. ಅಕೌಂಟ್ ಸ್ಟೇಟ್‌ಮೆಂಟ್ ಪರಿಶೀಲಿಸಿದಾಗ ಅನಧಿಕೃತವಾಗಿ ಇಂದುಮತಿ ಎಂಬುವರಿಗೆ ೫ ಲಕ್ಷ ರು., ಸರ್ಕಾರದ ಮೊತ್ತ ೮ ಲಕ್ಷ ರು.ಗಳನ್ನು ಗ್ರಾಪಂ ಬ್ಯಾಂಕ್ ಖಾತೆಗೆ ಬದಲು ಪಿಡಿಒ ವೈಯಕ್ತಿಕ ಖಾತೆಗೆ ಅನಧಿಕೃತವಾಗಿ ಜಮೆಯಾಗಿರುವುದು ಕಂಡುಬಂದಿತು.

ಖಾಲಿ ಚೆಕ್‌ಗಳಿಗೆ ಮೊದಲೇ ಸಹಿ:

ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಇಂಡುವಾಳು ಗ್ರಾಪಂನ ಹೆಸರಿನಲ್ಲಿ ಉಳಿತಾಯ ಖಾತೆ ನಂ.೧೨೩೦೫೧೦೦೦೦೧೮೧೭ ಇದ್ದು, ಬ್ಯಾಂಕ್‌ನ ಮೊತ್ತ ಹಾಗೂ ಹೆಸರುಗಳನ್ನು ನಮೂದಿಸದೆ ಖಾಲಿ ಚೆಕ್‌ಗಳಿಗೆ ಪಿಡಿಒ ಕಾನೂನು ಬಾಹೀರವಾಗಿ ಮೊದಲೇ ಸಹಿ ಮಾಡಿ ಇಟ್ಟುಕೊಂಡಿದ್ದಾರೆ. ಈ ಬಗ್ಗೆ ಇಒ ಅವರನ್ನು ವಿಚಾರಿಸಿದರೆ ಖಾಲಿ ಚೆಕ್‌ಗೆ ಸಹಿ ಮಾಡಿ ಇಟ್ಟಿರುವುದು ಕಾನೂನು ರೀತಿ ಅಪರಾಧವೆಂದು ತಿಳಿಸಿದ್ದು, ನ್ಯೂನತೆಯ ಬಗ್ಗೆ ಅವರು ಗಮನಹರಿಸಿಲ್ಲ.

ಸ್ಫೋರ್ಟ್ಸ್ ಕ್ಲಬ್‌ಗೆ ಲೈಸೆನ್ಸ್ ಇಲ್ಲ:

ಈ ಗ್ರಾಪಂ ವ್ಯಾಪ್ತಿಯೊಳಗೆ ಸಿ.ಎಲ್ -೭ ಬಾರ್ ಇರುವುದಿಲ್ಲವೆಂದು ತಿಳಿಸಿದ್ದರೂ ಸ್ಫೋರ್ಟ್ಸ್ ಕ್ಲಬ್ ನಡೆಯುತ್ತಿದೆ. ಈ ಕ್ಲಬ್‌ನವರು ಯಾವುದೇ ಲೈಸೆನ್ಸ್ ಪಡೆಯದಿದ್ದರೂ ಪಿಡಿಒ ಅವರು ಸ್ಫೋರ್ಟ್ಸ್ ಕ್ಲಬ್‌ಗೆ ನೋಟಿಸ್ ನೀಡದೆ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಉಪ ಲೋಕಾಯುಕ್ತರು ವರದಿಯಲ್ಲಿ ದಾಖಲಿಸಿದ್ದಾರೆ.

ತೆರಿಗೆ ಹಣ ದುರುಪಯೋಗ:

ಪ್ರಸ್ತುತ ಸಾಲಿನಲ್ಲಿ ೫೭,೬೫,೭೧೦ ರು.ಗಳನ್ನು ತೆರಿಗೆ ರೂಪದಲ್ಲಿ ಸ್ವೀಕರಿಸಿದ್ದು, ಅದರಲ್ಲಿ ೨೩,೬೦,೦೭೮ ರು.ಗಳನ್ನು ಆನ್‌ಲೈನ್, ೫,೫೨,೯೮೮ ರು.ಗಳನ್ನು ಡಿಡಿ ಮುಖಾಂತರ ಉಳಿಕೆ ೨೮,೫೨,೬೪೫ ರು.ಗಳನ್ನು ನಗದು ಮುಖಾಂತರ ಸ್ವೀಕರಿಸಿದ್ದಾರೆ. ಆದರೆ, ಈ ಹಣವನ್ನು ಸ್ವೀಕರಿಸಿದ ಬಗ್ಗೆ ಹಾಗೂ ಅದನ್ನು ಬ್ಯಾಂಕಿಗೆ ಜಮೆ ಮಾಡಿರುವ ಬಗ್ಗೆ ಯಾವುದೇ ದಾಖಲೆಗಳನ್ನು ಹಾಜರುಪಡಿಸಿಲ್ಲ. ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ.

ದುಶ್ಚಟಗಳಿಗೆ ದಾಸನಾಗಿದ್ದೆ:

ನಂತರದಲ್ಲಿ ಪಿಡಿಒ ಯೋಗೇಶ್ ತಾನು ದುಶ್ಚಟಗಳಿಗೆ ದಾಸನಾಗಿದ್ದು, ಕಳೆದ ಐದಾರು ತಿಂಗಳಿಂದ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇನ್ನು ಮುಂದೆ ನಿಷ್ಠೆಯಿಂದ ಕಾರ್ಯನಿರ್ವಹಿಸುವುದಾಗಿ ತಿಳಿಸಿದ್ದಾರೆ. ಇದನ್ನು ಗಮನಿಸಿದರೆ ಸರ್ಕಾರದ ಹಣವನ್ನು ಪಿಡಿಒ ತನ್ನ ದುಶ್ಚಟಗಳಿಗೆ ಬಳಸಿಕೊಂಡು ಕರ್ತವ್ಯ ಲೋಪವೆಸಗಿರುವುದು ಕಂಡು ಬಂದಿರುವುದರಿಂದ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವುದಾಗಿ ಉಪಲೋಕಾಯುಕ್ತರು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?