ಶಿವರಾತ್ರಿಯಲ್ಲಿ ಗಮನ ಸೆಳೆದ ಗೊಂಡರ ಡೆಕ್ಕೆ ಕುಣಿತ

KannadaprabhaNewsNetwork | Published : Mar 11, 2024 1:22 AM

ಸಾರಾಂಶ

ಗೊಂಡ ಸಮುದಾಯದವರು ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ತಮ್ಮ ಪೂರ್ವಜರು ಹಾಕಿಕೊಟ್ಟ ಸಂಪ್ರದಾಯ, ಪದ್ಧತಿಗಳನ್ನು ಇಂದಿಗೂ ಚಾಚೂ ತಪ್ಪದೇ ಮುಂದುವರಿಸಿಕೊಂಡು ಹೋಗುತ್ತಿರುವುದು ವಿಶೇಷ

ಭಟ್ಕಳ: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಎರಡು ದಿನಗಳ ಕಾಲ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಬುಡಕಟ್ಟು ಗೊಂಡ ಸಮುದಾಯದವರು ತಮ್ಮ ಪೂರ್ವಜರು ಆಚರಿಸಿಕೊಂಡು ಬಂದ ಸಂಪ್ರದಾಯದಂತೆ ಮನೆಮನೆಗೆ ತೆರಳಿ ನಡೆಸಿದ ಡೆಕ್ಕೆ ಕುಣಿತ ಗಮನ ಸೆಳೆಯಿತು.

ಗೊಂಡ ಸಮುದಾಯದವರು ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ತಮ್ಮ ಪೂರ್ವಜರು ಹಾಕಿಕೊಟ್ಟ ಸಂಪ್ರದಾಯ, ಪದ್ಧತಿಗಳನ್ನು ಇಂದಿಗೂ ಚಾಚೂ ತಪ್ಪದೇ ಮುಂದುವರಿಸಿಕೊಂಡು ಹೋಗುತ್ತಿರುವುದು ವಿಶೇಷ.

ವರ್ಷಂಪ್ರತಿ ಶಿವರಾತ್ರಿ ಹಬ್ಬದಿಂದ ಎರಡು ದಿನಗಳ ಕಾಲ ಭಟ್ಕಳದ ಹಾಡುವಳ್ಳಿ, ಮಾರೂಕೇರಿ, ಕೋಣಾರ, ಕೊಪ್ಪ, ಮುಟ್ಟಳ್ಳಿ ಮತ್ತಿತರ ಗ್ರಾಪಂ ವ್ಯಾಪ್ತಿಯಲ್ಲಿ ಗೊಂಡ ಸಮಾಜದವರು ರಾತ್ರಿ ಸಂದರ್ಭದಲ್ಲಿ ತಮ್ಮ ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮದ ಮನೆ ಮನೆಗಳಿಗೆ ತೆರಳಿ ಡೆಕ್ಕೆ ಕುಣಿತ ನಡೆಸುವ ಸಂಪ್ರದಾಯ ಹಿಂದಿನಂದಲೂ ನಡೆದುಕೊಂಡು ಬಂದಿದೆ. ತಲೆಗೆ ಕೆಂಪು ಹೂವು ಹಾಗೂ ಸೀರೆ, ಮಡಿ (ಕೇಸರಿ ವಸ್ತ್ರ) ಧರಿಸಿ ಶೃಂಗಾರ ಮಾಡಿಕೊಂಡು ಡೆಕ್ಕೆ ಬಡಿದು ಸಂಪ್ರದಾಯದಂತೆ ವಿಶಿಷ್ಟ ರೀತಿಯಲ್ಲಿ ಕುಣಿಯುತ್ತಾರೆ.ಇವರ ಕುಣಿತ ನೋಡುವುದೇ ಚೆಂದ. ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಗೊಂಡ ಸಮಾಜದ ಪ್ರತಿ ಮನೆಯ ಸದಸ್ಯರೂ ಸಹ ಡೆಕ್ಕೆ ಕುಣಿತದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುತ್ತಾರೆ.

ಮನೆಗಳಿಗೆ ತೆರಳುವ ಪೂರ್ವದಲ್ಲಿ ಸಂಪ್ರದಾಯದಂತೆ ಇವರು ಗ್ರಾಮದ ದೇವಸ್ಥಾನಕ್ಕೆ ಪೂಜೆ ಸಲ್ಲಿಸುತ್ತಾರೆ. ಡೆಕ್ಕೆ ಕುಣಿತ ಪದ್ಧತಿ ಗೊಂಡ ಸಮುದಾಯದಲ್ಲಿ ತಲೆ ತಲಾಂತರದಿಂದಲೂ ನಡೆದುಕೊಂಡು ಬಂದಿದ್ದು, ಇಂದಿನ ಆಧುನಿಕ ಯುಗದಲ್ಲೂ ಮುಂದುವರಿಸಿರುವುದರ ಮೂಲಕ ಬುಡಕಟ್ಟು,ಗ್ರಾಮೀಣ ಕಲೆ,ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ಗೊಂಡರು ಶಿವರಾತ್ರಿಯ ಎರಡು ದಿನ ಗ್ರಾಮದ ಎಲ್ಲ ಮನೆಗಳಿಗೂ ಸಹ ಇವರು ಹಿಂದಿನ ಪದ್ಧತಿಯಂತೆ ಡೆಕ್ಕೆ ಬಡಿಯುತ್ತಾ ಬರಿಗಾಲಲ್ಲೇ ತಿರುಗಾಡುತ್ತಾರೆ. ಡೆಕ್ಕೆ ಕುಣಿತದಲ್ಲಿ ಕಾಮನ ಅಂಗಿ ವೇಷವೂ ಸಹ ಆಕರ್ಷಣೀಯವಾಗಿದೆ. ಕಾಮನಂಗಿಯ ವೇಷ ಕಂಡರೆ ಮಕ್ಕಳು ಹೊರ ಬರಲು ಭಯಗೊಳ್ಳುತ್ತಾರೆ. ಡೆಕ್ಕೆ ಕುಣಿತವನ್ನು ಇವರು ಎರಡು ಮೂರು ರೀತಿಯಲ್ಲಿ ಮಾಡಿ ಗಮನ ಸೆಳೆಯುತ್ತಾರೆ. ಇವರಿಗೆ ಪ್ರತಿ ಮನೆಗಳಲ್ಲಿಯೂ ಕಾಯಿ, ಬಾಳೆ ಹಣ್ಣು, ಹಣ ನೀಡಿ ಸ್ಪಂದಿಸುತ್ತಾರೆ. ಗ್ರಾಮದ ಮನೆಗಳಲ್ಲಿ ಮದುವೆ, ಉಪನಯನದಂತಹ ಶುಭ ಕಾರ್ಯಗಳು ನಡೆದಿದ್ದಲ್ಲಿ ಡೆಕ್ಕೆ ಕುಣಿಯುವವರಿಗೆ ಮನೆಯವರು ಚಹಾ, ಸಿಹಿ ತಿಂಡಿ ನೀಡಿ ಹೊಸ ಮಡಿ ವಿತರಿಸಿ ಕುಣಿಸುವ ಪದ್ಧತಿಯೂ ಕೂಡ ವಿಶೇಷವಾಗಿದೆ.

ಶಿವರಾತ್ರಿ ಸಂದರ್ಭದಲ್ಲಿ ಎರಡು ಮೂರು ದಿನಗಳ ಕಾಲ ಮನೆ ಮನೆಗಳಲ್ಲಿ ಡೆಕ್ಕೆ ಕುಣಿತ ಮಾಡಿ ಸಂಗ್ರಹಿಸಿದ ಹಣವನ್ನು ಗೊಂಡರು ಅವಲಕ್ಕಿ ಪ್ರಸಾದ ಮಾಡಿ ಗ್ರಾಮದ ಪ್ರಮುಖರು ಮತ್ತು ಸಮುದಾಯದವರಿಗೆ ಹಂಚಿದ ಬಳಿಕ ಉಳಿದ ಹಣವನ್ನು ತಮ್ಮ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ, ಅನಾರೋಗ್ಯ ಪೀಡಿತರ ಚಿಕಿತ್ಸೆ ಹೀಗೆ ಸಮಾಜಮುಖಿ ಕಾರ್ಯಗಳಿಗೆ ಬಳಸಿಕೊಳ್ಳುತ್ತಾರೆ. ಡೆಕ್ಕೆ ಕುಣಿತ ಬುಡಕಟ್ಟು ಗೊಂಡ ಸಮುದಾಯದ ತಲೆತಲಾಂತರದಿಂದ ಬಂದ ಒಂದು ಜಾನಪದ ಕಲೆಯಾಗಿದ್ದು, ಇದು ತಾಲೂಕು,ಜಿಲ್ಲೆಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳು ಹಾಗೂ ಮೈಸೂರು ದಸರಾದಂತಹ ಕಾರ್ಯಕ್ರಮದಲ್ಲೂ ಪ್ರದರ್ಶಿಸುತ್ತಿರುವುದು ಗಮನಾರ್ಹ ಸಂಗತಿ.

ತಮ್ಮ ಪೂರ್ವಜರು ಯಾವ ರೀತಿಯಲ್ಲಿ ಜಾನಪದ ಕಲೆ ಪ್ರದರ್ಶಿಸುತ್ತಿದ್ದರೋ ಅದೇ ಮಾದರಿಯಲ್ಲಿ ಇಂದಿನ ಯುವ ಪೀಳಿಗೆಯವರೂ ಸಹ ಅದನ್ನು ಅಷ್ಟೇ ಆಸಕ್ತಿಯಿಂದ ಸಂಪ್ರದಾಯಬದ್ಧವಾಗಿ ಶೃದ್ಧಾ ಭಕ್ತಿ ಪೂರ್ವಕವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

Share this article