ಗೋಣಿಕೊಪ್ಪ: ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮರೆಯುತ್ತಿದ್ದೇವೆ ಎಂಬ ಆತಂಕದ ನಡುವೆಯೂ ಗಣೇಶೋತ್ಸವ ಸಮಿತಿಗಳು ನಮ್ಮ ನೆಲದ ಸಂಸ್ಕೃತಿ, ಪರಂಪರೆ ಹಾಗೂ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ವಿರಾಜಪೇಟೆ ಉಪ ಪೊಲೀಸ್ ಅಧೀಕ್ಷಕ ಮಹೇಶ್‌ಕುಮಾರ್ ಹೇಳಿದರು.ಗೋಣಿಕೊಪ್ಪದ ಒಂದನೇ ವಿಭಾಗದ ಉಮಾಮಹೇಶ್ವರಿ ಬಡಾವಣೆಯ ಪ್ರಸನ್ನ ಗಣಪತಿ ಸೇವಾ ಸಂಘದ ವತಿಯಿಂದ ನಡೆಯುತ್ತಿರುವ 15ನೇ ವರ್ಷದ ಗೌರಿ–ಗಣೇಶೋತ್ಸವದ ನಾಲ್ಕನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸ್ಥಳೀಯ ಸಾಧಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಮಹೇಶ್‌ಕುಮಾರ್, ತಮ್ಮದೇ ಊರಿನಲ್ಲಿ, ತಮ್ಮ ಜನರ ಮಧ್ಯೆ ಸಾಧಕರನ್ನು ಗುರುತಿಸಿ ಗೌರವಿಸುವುದು ಸಂತಸದ ವಿಚಾರ ಎಂದರು.ಠಾಣಾಧಿಕಾರಿ ಕಾಳೇಗೌಡ ಮಾತನಾಡಿ, ಸಂಘದ ಕಾರ್ಯವೈಖರಿ ಇತರ ಸಂಘಟನೆಗಳಿಗೂ ಮಾದರಿ ಎಂದರು.ಪೊನ್ನಂಪೇಟೆ ತಾಲೂಕು ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಬಿ.ಎನ್. ಪ್ರಕಾಶ್ ಮಾತನಾಡಿ, ಉತ್ತಮ ಚಿಂತನೆ ಇದ್ದರೆ ಯಾವುದೇ ಕಾರ್ಯವೂ ಸಕಾರಾತ್ಮಕವಾಗಿ ರೂಪುಗೊಳ್ಳುತ್ತದೆ ಎಂದರು.ಹಿರಿಯ ಶಿಕ್ಷಕಿಯರಾದ ಗಿರಿಜಾ, ರಾಘವೇಂದ್ರ, ಲಕ್ಷ್ಮಿ, ಲೀನಾ ರಾಘವೇಂದ್ರ ಹಾಗೂ ಉಮಾ ಅವರನ್ನು ಸನ್ಮಾನಿಸಲಾಯಿತು. ದೈವಾರಾಧನೆಯಲ್ಲಿ ತೊಡಗಿಸಿಕೊಂಡಿರುವ ಭರತ್, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಂಜನಾರೈ ಹಾಗೂ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ಚರಣ್ ಸಂಗಪ್ಪ ಅವರನ್ನು ಗೌರವಿಸಲಾಯಿತು.ಪ್ರಸನ್ನ ಯುವಕ ಸಂಘದ ಮಾಜಿ ಅಧ್ಯಕ್ಷ ಮಂಜುನಾಥ್, ಉದ್ಯಮಿಗಳಾದ ಚೆನ್ನರೆಡ್ಡಿ ಮತ್ತು ಶಿವಾರೆಡ್ಡಿ, ವೇದಿಕೆ ಸಮಿತಿ ಸಂಚಾಲಕ ಪ್ರಮೋದ್, ಪೂಜಾ ಸಮಿತಿ ಸಂಚಾಲಕ ಮುರಳೀಶ್, ಸಮಿತಿ ಸಂಚಾಲಕಿ ಸೌಜನ್ಯ, ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಕೋಶಾಧಿಕಾರಿ ಅನ್ವಿತಾ, ಉಪಾಧ್ಯಕ್ಷರಾದ ಅನಿಲ್ ಮತ್ತು ದಿಲೀಪ್, ಸದಸ್ಯರಾದ ಕೌಶಿಕ್, ಆಶಾ, ಚಂದ್ರಕಲಾ, ಪ್ರಜ್ವಲ್, ಪುನೀತ್, ಅಜಿತಾ ಮತ್ತಿತರರಿದ್ದರು.