ಕನ್ನಡಪ್ರಭ ವಾರ್ತೆ ತುಮಕೂರು
ಪತ್ರಿ ಮನುಷ್ಯನ ಒಳ್ಳೆಯ ಮತ್ತು ಕೆಟ್ಟ ಕ್ಷಣಗಳಿಗೆ ಸಾಕ್ಷಿಯಾಗುವ ಛಾಯಾಗ್ರಾಹಕರು ಮತ್ತು ವಿಡಿಯೋ ಗ್ರಾಹಕರಿಗೂ ಜೀವನದಲ್ಲಿ ಒಳ್ಳೆಯ ದಿನಗಳು ಬರಲಿವೆ ಎಂಬ ಆಶಾಭಾವನೆಯನ್ನು ಜಿಲ್ಲಾಧಿಕಾರಿ ಶುಭಾಕಲ್ಯಾಣ್ ವ್ಯಕ್ತಪಡಿಸಿದ್ದಾರೆ.ನಗರದ ಸದಾಶಿವ ನಗರ ಕುಣಿಗಲ್ ರಸ್ತೆಯ ಎಚ್.ಎನ್.ಆರ್. ಅರ್ಕೇಡ್‌ನಲ್ಲಿ ತುಮಕೂರು ಜಿಲ್ಲಾ ಪೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘದ ವತಿಯಿಂದ ಆಯೋಜಿಸಿದ್ದ ಹಿಂದಿನ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಅಭಿನಂದನೆ ಹಾಗೂ ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕೊರೋನದಂತಹ ಸಂಧರ್ಭದಲ್ಲಿ ತಾವು ಅನುಭವಿಸಿದ ಸಂಕಷ್ಟಗಳ ಅರಿವಿದೆ. ಹಾಗಾಗಿ ಜಿಲ್ಲಾಡಳಿತ ನಿಮ್ಮಗಳ ಮನವಿಗೆ ಸ್ಪಂದಿಸಿ ಕೆಲಸ ಮಾಡಲಿದೆ ಎಂಬ ಭರವಸೆಯನ್ನು ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೆಪಿಸಿಸಿ ವಕ್ತಾರ ನಿಖೇತರಾಜ್ ಮೌರ್ಯ ಮಾತನಾಡಿ, ನೂರಾರು ವರ್ಷಗಳ ನೆನಪನ್ನು ಶಾಶ್ವತವಾಗಿಸುವ ಛಾಯಾಗ್ರಾಹಕರು, ತಂತ್ರಜ್ಞಾನ ಕ್ರಾಂತಿಯ ಫಲವಾಗಿ ಬಂದ ಮೊಬೈಲ್‌ನಿಂದಾಗಿ ದೊಡ್ಡ ಪೈಪೋಟಿ ಯನ್ನು ಎದುರಿಸುತ್ತಿದ್ದಾರೆ. ಮದುವೆ ಇನ್ನಿತರ ಶುಭ ಕಾರ್ಯಗಳಲ್ಲಿ ಪುರೋಹಿತರಿಗಿಂತ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದ್ದ ಪೋಟೋ, ವಿಡಿಯೋಗ್ರಾಫರ್‌ಗಳ ಸ್ಥಿತಿ ಇಂದು ಸಂಕಷ್ಟದಲ್ಲಿದೆ ಎಂದರು.ಕರ್ನಾಟಕ ಫೋಟೋಗ್ರಾಫರ್ಸ್ ಸಂಘದ ರಾಜ್ಯಾಧ್ಯಕ್ಷ ಎಚ್.ಎಸ್. ನಾಗೇಶ್ ಮಾತನಾಡಿ, ಸಂಘಟನೆಯಿಂದ ಮಾತ್ರ ಎನ್ನನ್ನಾದರೂ ಸಾಧಿಸಲು ಸಾಧ್ಯ. ಕೋವಿಡ್ ನಮಗೆ ಒಂದು ಎಚ್ಚರಿಕೆಯನ್ನು ನೀಡಿ ಹೋಗಿದೆ. ಹಾಗಾಗಿ ಹಗಲಿರುಳು ದುಡಿಮೆ ಮಾಡಿ, ಅದರಿಂದ ಬಂದ ಲಾಭವನ್ನು ಹೊಸ ಕ್ಯಾಮೆರಾಗಳಿಗೆ ಹಾಕಿ ಮತ್ತಷ್ಟು ಸಾಲಗಾರರಾಗುವ ಬದಲು ಒಂದಿಷ್ಟು ಉಳಿತಾಯ ಮಾಡಿ, ನಮ್ಮನ್ನು ನಂಬಿರುವ ಕುಟುಂಬಗಳಿಗೆ ಭದ್ರತೆ ಒದಗಿಸಬೇಕಾಗಿದೆ. ತಂತ್ರಜ್ಞಾನ ವೇಗವಾಗಿ ಬೆಳೆದಂತೆ ಮೂರು ತಿಂಗಳಿಗೊಂದು ಉನ್ನತ ಮಟ್ಟದ ಕ್ಯಾಮೆರಾ ಮಾರುಕಟ್ಟೆಗೆ ಬರುತ್ತಿದೆ. ಹಣ ಇದ್ದವರು ಕೊಂಡರೆ, ಇಲ್ಲದಿದ್ದವರು, ಸಾಲ ಮಾಡುವಂತಹ ಸ್ಥಿತಿ ಇದೆ. ಇಲ್ಲವೇ ಉಳ್ಳವರಲ್ಲಿ ಕೂಲಿಯಾಳುಗಳಂತೆ ದುಡಿಯಬೇಕಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ಜಿಲ್ಲಾ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಜಿಲ್ಲಾಧ್ಯಕ್ಷ ಟಿ.ಎಚ್. ಅನಿಲ್‌ಕುಮಾರ್ ಮಾತನಾಡಿ, ಸಂಘದ ಬೆಳೆವಣಿಗೆಗೆ ಹಿರಿಯರು ಶ್ರಮಿಸಿದ್ದಾರೆ. ಈ ಬಾರಿ ಸಂಘಕ್ಕೆ ಒಂದು ಸ್ವಂತ ನಿವೇಶನ ಕೊಂಡು ಅದರಲ್ಲಿ ಸಂಘದ ಕಟ್ಟಡ ಕಟ್ಟುವ ನಿಟ್ಟಿನಲ್ಲಿ ಪ್ರಯತ್ನ ಸಾಗಿವೆ. ನಿವೆಲ್ಲರೂ ಕೈಜೋಡಿಸಿದರೆ ಮುಂದಿನ ವರ್ಷಕ್ಕೆ ಉದ್ಘಾಟಿಸಬಹುದು. ಈಗಾಗಲೇ ಶಾಸಕರಾದ ಜೋತಿಗಣೇಶ್ ಅವರು ಒಂದು ವರ್ಷಕ್ಕೆ ೫ ಲಕ್ಷ ದಂತೆ ಎರಡು ವರ್ಷದಲ್ಲಿ ೧೦ಲಕ್ಷ ರು.ಗಳನ್ನು ಸಂಘದ ಕಟ್ಟಡ ನಿರ್ಮಾಣಕ್ಕೆ ನೀಡುವ ಭರವಸೆ ನೀಡಿದ್ದಾರೆ. ಇದೇ ರೀತಿ ಧಾನಿಗಳ ಜೊತೆಗೆ, ನಮ್ಮ ಸಂಘದ ಸದಸ್ಯರ ಸಹಕಾರದಿಂದ ಸ್ವಂತ ಕಟ್ಟಡದ ಕನಸನ್ನು ನನಸಾಗಿಸೋಣ ಎಂದರು.ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿದರು. ತುಮಕೂರು ಜಿಲ್ಲಾ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಕಾರ್ಯಾಧ್ಯಕ್ಷ ಎಸ್.ವಿ. ವೆಂಕಟೇಶ್ ಪ್ರಾಸ್ತಾವಿಕ ನುಡಿಗಳನ್ನು ನುಡಿದರು.
ಕಾರ್ಯಕ್ರಮಕ್ಕೂ ಮೊದಲು ಶಾಸಕ ಜಿ.ಬಿ. ಜೋತಿಗಣೇಶ್ ಭೇಟಿ ನೀಡಿ, ಶುಭ ಹಾರೈಸಿ, ಕಟ್ಟಡ ನಿರ್ಮಾಣಕ್ಕೆ 10 ಲಕ್ಷ ರು. ಗಳ ಧನಸಹಾಯ ನೀಡುವ ಭರವಸೆ ನೀಡಿದರು. ಇದೇ ವೇಳೆ ಹಿರಿಯ ಛಾಯಾಗ್ರಾಹಕರಾದ ಭಕ್ತವತ್ಸಲ, ಶಾಂತರಾಜು, ಫಾರೂಕ್ ಅಹಮದ್, ಸಿದ್ದರಾಜು, ಪ್ರಕಾಶ್, ಮಲ್ಲಿಕಾರ್ಜುನ ದುಂಡ ಅವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ. ಪುರುಷೋತ್ತಮ್, ತುಮಕೂರು ಜಿಲ್ಲಾ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಜಿಲ್ಲಾಧ್ಯಕ್ಷ ಟಿ.ಎಚ್. ಅನಿಲ್‌ಕುಮಾರ್, ಗೌರವಾಧ್ಯಕ್ಷ ಎಸ್.ವಿ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎನ್. ರಮೇಶ್, ಪದಾಧಿಕಾರಿಗಳಾದ ಪಾಂಡುರಂಗಯ್ಯ, ನವೀನ್‌ಕುಮಾರ್ ಆರ್., ವಿನಯ್‌ಕುಮಾರ್, ರವಿಕುಮಾರ್ ಸಿ.ಎನ್., ಸಿದ್ದೇಶ್, ಮಧುಸೂಧನ್, ಪ್ರದೀಪ್ ಟಿ.ಆರ್., ಸಾಧಿಕ್‌ಪಾಷ, ರಾಜೇಶ್, ವೀರಭದ್ರಯ್ಯ, ಸಿದ್ದರಾಜು ಡಿ.ಎನ್., ಸಂತೋಷ್ ಕುಮಾರ್, ರೇಣುಕಾಪ್ರಸಾದ್ ಮತ್ತಿತರರು ವೇದಿಕೆಯಲ್ಲಿದ್ದರು.