ಬೀದರ್ ನಗರದ ಪ್ರಸಾದ ನಿಲಯದಲ್ಲಿ ಶ್ರಾವಣ ಮಾಸದ ಬಸವ ದರ್ಶನ ಪ್ರವಚನ ಸಮಾರೋಪದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬೀದರ್
ಶ್ರಾವಣ ಮಾಸವು ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಶ್ರೇಷ್ಠವಾದದ್ದು. ಸತ್ಸಂಗ, ಸದ್ವಿಚಾರಗಳನ್ನು ಆಲಿಸುವುದರಿಂದ ಮನಸ್ಸಿಗೆ ಶಾಂತಿ ಹಾಗೂ ಜೀವನಕ್ಕೆ ಹೊಸ ಚೈತನ್ಯ ನೀಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ನುಡಿದರು.
ನಗರದ ಪ್ರಸಾದ ನಿಲಯದಲ್ಲಿ ಶ್ರಾವಣ ಮಾಸದ ಬಸವ ದರ್ಶನ ಪ್ರವಚನ ಸಮಾರೋಪದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ಸರ್ವ ಸಮಾನತೆಗಾಗಿ ವೈಚಾರಿಕ ಕ್ರಾಂತಿ ಮಾಡಿದ್ದರು ಎಂದು ತಿಳಿಸಿದರು.
ಸಮಾಜದಲ್ಲಿನ ಅಂಕು ಡೊಂಕು, ಜಾತಿ, ಅಸಮಾನತೆಯ ನಿರ್ಮೂಲನೆಗಾಗಿ, ಕಾಯಕ-ದಾಸೋಹ ಸಿದ್ಧಾಂತ ನೀಡಿದ್ದಾರೆ. ವಚನ ಸಾಹಿತ್ಯವು ಜಗತ್ತಿಗೆ ಶ್ರೇಷ್ಠ ಮಾರ್ಗದರ್ಶನ ಕೊಡುವುದಾಗಿದೆ. ಆಧುನಿಕತೆಯ ಕರಿನೆರಳಿನಲ್ಲಿ ಮಾನವ ದುರಾಸೆಯಿಂದ ವಾಮಮಾರ್ಗ ಸಾಗಿಸುವುದರಿಂದ ಸಮಾಜ ಜನರಲ್ಲಿ ಅಶಾಂತಿ ಹರಡಿಕೊಂಡಿದೆ ಎಂದರು.
ಬಸವದರ್ಶನ ಪ್ರವಚನದಿಂದ ಮನದ ಮೈಲಿಗೆ ಹೋಗಿ ಪರಿಶುದ್ಧ ಜೀವನವಾಗುತ್ತದೆ. ವ್ಯಕ್ತಿ ಆರೋಗ್ಯವಂತನಾಗಿ ಸಮಾಜವನ್ನು ಸದೃಢವನ್ನಾಗಿ ಮಾಡಲು ಯುವ ಜನಾಂಗದವರ ಬಹುದೊಡ್ಡ ಹೊಣೆಗಾರಿಕೆಯಿದೆ ಮತ್ತು ಆರೋಗ್ಯ ರಕ್ಷಣೆಯಲ್ಲಿ ಪ್ರತಿಯೊಬ್ಬ ಪ್ರಜೆ ಸಸಿ ನಡೆಸಿ ಪರಿಸರ ಉಳಿಸಿ, ಹಸಿರೇ ಉಸಿರು ಎಂದು ಸಚಿವರು ನುಡಿದರು.
ಬಸವ ಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ಡಾ.ಬಸವಲಿಂಗ ಪಟ್ಟದ್ದೆವರು ಸಾನ್ನಿಧ್ಯ ವಹಿಸಿ
ಆಶೀರ್ವಚನ ನೀಡಿ, ಕಾಯಕ-ದಾಸೋಹ-ಅನುಭಾವ ತತ್ವವು ವ್ಯಕ್ತಿಯಲ್ಲಿ ಆತ್ಮಬಲ ಶಕ್ತಿ ನೀಡುತ್ತದೆ.
ವ್ಯಕ್ತಿಯು ದುರಾಶೆಗೊಳಗಾಗದೆ, ಸತ್ಯ ಶುದ್ಧ ಕಾಯಕ ಮಾಡಿ, ದಾಸೋಹಿಗಳಾಗಿ, ಇಷ್ಟಲಿಂಗ ಶಿವಯೋಗವನ್ನು ಪ್ರತಿಯೋಬ್ಬರು ಮಾಡುವುದರಿಂದ ವ್ಯಕ್ತಿ ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯವಂತನಾಗಿ, ಆಧ್ಯಾತ್ಮಿಕ ಶಕ್ತಿಯ ಚೈತನ್ಯವನ್ನು ಸಾಕಾರಗೊಳ್ಳಬಹುದು ಎಂದು ಹೇಳಿದರು.
ಪ್ರವಚಕಾರರಾದ ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು ಮಾತನಾಡಿ, ಬಸವ ದರ್ಶನ ಪ್ರವಚನ ಆಲಿಸುವುದರಿಂದ ಶರಣ ಬಂಧುಗಳು ಮಕ್ಕಳನ್ನು ಮತ್ತು ಕುಟುಂಬವನ್ನು ಉತ್ತಮ ಸಂಸ್ಕೃತಿ ಸಂಸ್ಕಾರವನ್ನಾಗಿ ಮಾಡಬಹುದು ಎಂದು ತಿಳಿಸಿದರು.
ಶಕುಂತಲಾ ಬೆಲ್ದಾಳೆ ಹಾಗೂ ಜೈರಾಜ ಖಂಡ್ರೆ ಮಾತನಾಡಿದರು. ದಾಸೋಹಿಗಳಾದ ಶಾಂತಾ ಜಯರಾಜ ಖಂಡ್ರೆ ಅವರು ಗುರು ಬಸವ ಪೂಜೆ ನೆರವೇರಿಸಿದರು. ಪ್ರವಚನ ಸೇವಾ ಸಮಿತಿಯ ಅಧ್ಯಕ್ಷ ಉಮಾಕಾಂತ ಮೀಸೆ ಅಧ್ಯಕ್ಷತೆ ವಹಿಸಿದರು.
ಪ್ರಸಾದ ನಿಲಯದ ಕಾರ್ಯದರ್ಶಿ ಎಸ್.ಬಿ.ಬಿರಾದಾರ, ಜಿಲ್ಲಾ ರಾಷ್ಟ್ರೀಯ ಬಸವದಳ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿ ಸುರೇಶಕುಮಾರ ಸ್ವಾಮಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವಚನ ಶ್ರೀ ಚನ್ನಬಸಪ್ಪ ನೌಬಾದೆ ವಚನ ಗಾಯನ ನಡೆಸಿಕೊಟ್ಟರು, ಮೀನಾಕ್ಷಿ ಪಾಟೀಲ ಸ್ವಾಗತಿಸಿದರೆ ವಿಜಯಲಕ್ಷ್ಮೀ ಹುಗ್ಗೆಳ್ಳಿ ನಿರೂಪಿಸಿದರು, ಲಕ್ಷ್ಮೀ ಬಿರಾದಾರ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.