ಕ್ಷಯರೋಗ ಪೀಡಿತ, ಗರ್ಭಿಣಿ ಸ್ತ್ರೀಯರಿಗೆ ಆಹಾರ ಕಿಟ್, ಮೊಟ್ಟೆ ವಿತರಣೆ
ಸಾರ್ವಜನಿಕರು ಉತ್ತಮವಾಗಿರುವಂತ ಪೌಷ್ಟಿಕ ಆಹಾರ ಬಳಸಬೇಕು. ತಮ್ಮ ತಮ್ಮ ಮನೆಯ ಊಟವನ್ನೇ ಮಾಡುವುದರ ಮೂಲಕ ನಿತ್ಯ ಜೀವನದಲ್ಲಿ ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಸ್ವಾಮಿಗೌಡ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಲೂಕು ರೋಟರಿ ಕ್ಲಬ್ ವತಿಯಿಂದ ಶನಿವಾರ ಹಮ್ಮಿಕೊಂಡ ಅಪೌಷ್ಟಿಕ ಕ್ಷಯರೋಗ ಪೀಡಿತ ಹಾಗೂ ಗರ್ಭಿಣಿ ಸ್ತ್ರೀಯರಿಗೆ ಆಹಾರ ಕಿಟ್‌ಗಳನ್ನು ಹಾಗೂ ಮೊಟ್ಟೆ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಅಪೌಷ್ಟಿಕತೆ ಸಾಕಷ್ಟು ಜನರಲ್ಲಿ ಕಂಡು ಬರುತ್ತಿದೆ. ಜನರು ಹೊರಗಡೆ ಸಿಗುವಂತಹ ಗೋಬಿ ಮಂಚೂರಿ, ಪಾನಿಪುರಿ, ನೂಡಲ್ಸ್, ಎಗ್‌ರೈಸ್ ಮುಂತಾದ ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ತಿನ್ನಬಾರದು. ಅಪೌಷ್ಟಿಕತೆಯನ್ನು ಹೋಗಲಾಡಿಸಲು ಮೊಳಕೆ ಒಡೆದ ಕಾಳು, ತರಕಾರಿ, ಸೊಪ್ಪು ನೈಸರ್ಗಿಕವಾಗಿ ಸಿಗುವಂತಹ ತರಕಾರಿಗಳನ್ನು ಮನೆಗಳಲ್ಲಿ ಬಳಸಬೇಕು ಹಾಗೂ ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಡೆಂಘೀ ನಂತಹ ಕಾಯಿಲೆಯನ್ನು ಸಹ ನಿಯಂತ್ರಿಸಬಹುದು. ಪ್ರತಿಯೊಬ್ಬರು ಸಮಾಜದಲ್ಲಿ ಶಾಂತಿ, ನೆಮ್ಮದಿ, ಆರೋಗ್ಯದಿಂದ ವಾಸಿಸಬಹುದು ಎಂದು ಹೇಳಿದರು.
ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಆಪ್ತ ಸಮಾಲೋಚಕ ಪರಶುರಾಮ್ ಶಿರೂರ, ಗರ್ಭಿಣಿ ಸ್ತ್ರೀಯರಲ್ಲಿಯೂ ಸಹ ಅಪೌಷ್ಟಿಕತೆ ಎದ್ದು ಕಾಣುತ್ತಿದ್ದು ಸರ್ಕಾರ ಅಂಗನವಾಡಿಯಲ್ಲಿ ನೀಡುತ್ತಿರುವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗರ್ಭಿಣಿ ಸ್ತ್ರೀಯರು ಅಪೌಷ್ಟಿಕತೆ, ರಕ್ತ ಹೀನತೆಯಿಂದ ಬಳಲುತ್ತಿರುವುದು ನಿತ್ಯ ಆಸ್ಪತ್ರೆಯಲ್ಲಿ ಕಂಡು ಬರುತ್ತಿದ್ದು, ಸರಿಯಾದ ಔಷಧೋಪಚಾರ ಹಾಗೂ ತರಕಾರಿ ಸೊಪ್ಪು, ಹಣ್ಣು-ಹಂಪಲು, ರಾಗಿ ಮುದ್ದೆ ಮುಂತಾದ ಪೌಷ್ಟಿಕ ಆಹಾರ ಪದಾರ್ಥಗಳನ್ನು ಊಟದ ವಿಧಾನಗಳನ್ನು ಅಳವಡಿಸಿಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡರೆ ಮಾತ್ರ ಉತ್ತಮವಾಗಿರುವಂತ ಮಗುವನ್ನು ಪಡೆಯಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 20 ಜನ ಕ್ಷಯ ರೋಗಿಗಳು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಗರ್ಭಿಣಿ ಸ್ತ್ರೀಯರಿಗೆ ಮೊಟ್ಟೆಗಳನ್ನು ವಿತರಿಸಲಾಯಿತು.