ಸ್ಪರ್ಧಾತ್ಮಕ ಜಗತ್ತಿಗೆ ಅಣಿಯಾಗಲು ಉತ್ತಮ ಶಿಕ್ಷಣ ಅಗತ್ಯ: ನಾಗಭೂಷಣ್ ಪೈ

KannadaprabhaNewsNetwork | Published : Dec 9, 2024 12:47 AM

ಸಾರಾಂಶ

ಧರ್ಮಸ್ಥಳ ಸಂಸ್ಥೆ ಕೇವಲ ಸಂಘ ಹಣಕಾಸಿನ ವ್ಯವಹಾರಕ್ಕೆ ಸೀಮಿತವಾಗದೆ ಸಮಾಜಮುಖಿ ಕೆಲಸಗಳಲ್ಲಿ ನಿರತವಾಗಿದೆ. ಸಂಸ್ಥೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಟ್ಯೂಷನ್‌ ತರಗತಿ ಪ್ರಾರಂಭಿಸಿ ನೆರವಾಗುತ್ತಿದೆ .

ಕನ್ನಡಪ್ರಭ ವಾರ್ತೆ ರಾಮನಗರ

ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳು ಅಣಿಗೊಳ್ಳಲು ಉತ್ತಮ ಶಿಕ್ಷಣ ಪಡೆಯಬೇಕಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆಂಗಲ್‌ ಯೋಜನಾಧಿಕಾರಿ ನಾಗಭೂಷಣ್ ಪೈ ತಿಳಿಸಿದರು.

ತಾಲೂಕಿನ ಅವ್ವೇರಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನ ವಿಕಾಸ ಕಾರ್ಯಕ್ರಮದಡಿ ಸಂಸ್ಥೆ ವತಿಯಿಂದ ಟ್ಯೂಷನ್‌ ತರಗತಿ ಪ್ರಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯೆ ಕದಿಯಲಾರದ ಸಂಪತ್ತು. ಇದನ್ನು ನಾವು ಚಿಕ್ಕ ವಯಸ್ಸಿನಲ್ಲಿಯೇ ಪಡೆಯಬೇಕು. ಇಂದು ಎಲ್ಲಾ ರಂಗದಲ್ಲೂ ಇರುವ ಪೈಪೋಟಿ ಎದುರಿಸಲು ಎಲ್ಲರು ಉನ್ನತ ಶಿಕ್ಷಣ ಪಡೆಯಬೇಕು ಎಂದರು.

ಅಕ್ಷರ ಎಂಬ ಸಂಪತ್ತನ್ನು ನಮ್ಮಲ್ಲಿ ಅರಗಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು. ಇದಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತಷ್ಟು ಜ್ಞಾನಾರ್ಜನೆ ನೀಡುವ ನಿಟ್ಟಿನಲ್ಲಿ ಶಾಲೆ ಬಿಡುವಿನ ವೇಳೆಯಲ್ಲಿ ಟ್ಯೂಷನ್‌ ತರಗತಿ ನೀಡುತ್ತದೆ ಎಂದು ಹೇಳಿದರು.

ಟ್ಯೂಷನ್‌ ತರಗತಿ ನಡೆಸಲು ಸಂಸ್ಥೆಯೇ ಶಿಕ್ಷಕರನ್ನು ನೇಮಿಸಿದೆ. ಮೂರು ತಿಂಗಳು ಪರೀಕ್ಷೆ ಮುಗಿಯುವವರೆಗೂ ಟ್ಯೂಷನ್‌ ತರಗತಿ ಉಚಿತವಾಗಿ ನಡೆಯುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ತಮ್ಮಣ್ಣ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಕೇವಲ ಸಂಘ ಹಣಕಾಸಿನ ವ್ಯವಹಾರಕ್ಕೆ ಸೀಮಿತವಾಗದೆ ಸಮಾಜಮುಖಿ ಕೆಲಸಗಳಲ್ಲಿ ನಿರತವಾಗಿದೆ. ಸಂಸ್ಥೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಟ್ಯೂಷನ್‌ ತರಗತಿ ಪ್ರಾರಂಭಿಸಿ ನೆರವಾಗುತ್ತಿದೆ ಎಂದರು.

ವಿದ್ಯಾರ್ಥಿಗಳು ಶಾಲೆಯಲ್ಲಿ ಹೇಳಿಕೊಟ್ಟ ಪಾಠದ ಜೊತೆಗೆ ಸಂಸ್ಥೆ ನಡೆಸುವ ತರಗತಿಯಲ್ಲಿ ಹಾಜರಾಗಿ ಮತ್ತಷ್ಟು ಶಿಕ್ಷಣ ಪಡೆದು ಪರೀಕ್ಷೆಗೆ ಉತ್ತಮವಾಗಿ ರೂಪುಗೊಳ್ಳಬಹುದು. ಸಂಸ್ಥೆಯ ಜನಪರ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಂಡು ಉನ್ನತ ವ್ಯಾಸಂಗ ಪಡೆಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಕನ್ನಿಕಾ, ವಲಯ ಮೇಲ್ವೀಚಾರಕಿ ಚಿನ್ನಮ್ಮ ಶಿಕ್ಷಕರಾದ ಗೀತಾ, ಚೈತ್ರ, ಕವಿತ, ಕುಸುಮ ಸೇವಾ ಪ್ರತಿನಿಧಿರೇಣುಕಾ, ಒಕ್ಕೂಟ ಅಧ್ಯಕ್ಷೆ ಜಯಲಕ್ಷ್ಮಮ್ಮ ಇದ್ದರು.

Share this article