ಉಡುಪಿ ಜಿಲ್ಲಾದ್ಯಂತ ಉಪವಾಸ, ಧ್ಯಾನ, ಪ್ರಾರ್ಥನೆಯೊಂದಿಗೆ ಗುಡ್ ಫ್ರೈಡೆ ಆಚರಣೆ

KannadaprabhaNewsNetwork | Published : Mar 30, 2024 12:48 AM

ಸಾರಾಂಶ

ಜಿಲ್ಲೆಯ ಎಲ್ಲ ಚರ್ಚುಗಳಲ್ಲಿ ಬೆಳಗ್ಗೆಯಿಂದಲೇ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ನಡೆಯಿತು. ಕ್ರೈಸ್ತ ಭಾಂದವರು ದಿನವಿಡೀ ಉಪವಾಸ ಕೈಗೊಂಡು ಯೇಸು ಸ್ವಾಮಿಯನ್ನು ಶಿಲುಬೆಗೇರಿಸುವ ಘಟನಾವಳಿಗಳನ್ನು ಮೆಲುಕು ಹಾಕುವುದರ ಮೂಲಕ ಕಳೆದರು.

ಕನ್ನಡಪ್ರಭ ವಾರ್ತೆ ಉಡುಪಿ

ಕ್ರೈಸ್ತ ಭಾಂದವರಿಗೆ ಪವಿತ್ರ ದಿನವಾದ ಶುಭ ಶುಕ್ರವಾರ (ಗುಡ್ ಫ್ರೈಡೆ)ವನ್ನು ಜಿಲ್ಲಾದ್ಯಂತ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು.

ಜಿಲ್ಲೆಯ ಎಲ್ಲ ಚರ್ಚುಗಳಲ್ಲಿ ಬೆಳಗ್ಗೆಯಿಂದಲೇ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ನಡೆಯಿತು. ಕ್ರೈಸ್ತ ಭಾಂದವರು ದಿನವಿಡೀ ಉಪವಾಸ ಕೈಗೊಂಡು ಯೇಸು ಸ್ವಾಮಿಯನ್ನು ಶಿಲುಬೆಗೇರಿಸುವ ಘಟನಾವಳಿಗಳನ್ನು ಮೆಲುಕು ಹಾಕುವುದರ ಮೂಲಕ ಕಳೆದರು.

ಉಡುಪಿ ಧರ್ಮಪ್ರಾಂತ್ಯದ ಪ್ರಧಾನ ದೇವಾಲಯವಾದ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರು ಶುಭ ಶುಕ್ರವಾರದ ಪ್ರಾರ್ಥನಾವಿಧಿ ನೆರವೇರಿಸಿದರು. ಈ ಸಂಧರ್ಭ ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಚರ್ಚಿನ ಪ್ರಧಾನ ಧರ್ಮಗುರು ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರು ಜೋಯ್ ಅಂದ್ರಾದೆ, ಪಿಲಾರ್ ಸಭೆಯ ನಿತೇಶ್ ಡಿಸೋಜ, ನಿವೃತ್ತ ಧರ್ಮಗುರುಗಳಾದ ಲೊರೇನ್ಸ್ ರೊಡ್ರಿಗಸ್, ಲೊರೇನ್ಸ್ ಮಾರ್ಟಿಸ್ ಉಪಸ್ಥಿತರಿದ್ದರು.

ಧರ್ಮಾಧ್ಯಕ್ಷರು ತಮ್ಮ ಗುಡ್ ಫ್ರೈಡೆ ಸಂದೇಶದಲ್ಲಿ ಪವಿತ್ರ ಶುಕ್ರವಾರದಂದು ಯೇಸುಸ್ವಾಮಿ ಲೋಕದ ಪಾಪದ ಪರಿ ಹಾರಕ್ಕಾಗಿ ಶಿಲುಬೆಯ ಮೇಲೆ ಪ್ರಾಣಾರ್ಪಣೆ ಮಾಡಿದರು. ಶೋಷಿತರ ಕಣ್ಣೀರನ್ನು ಒರೆಸುವ ಸತ್ಯ ಮಾರ್ಗದಲ್ಲಿ ಜಗತ್ತನ್ನು ಮುನ್ನಡೆಸಬಲ್ಲ ಮಹಾ ಶಕ್ತಿಯಾಗಿರುವ ಯೇಸು, ಜಗದ ದುಃಖವನ್ನು ತೊಡೆಯಲು ಶಕ್ತನಾಗಿದ್ದಾರೆ. ಜಗತ್ತಿನಾದ್ಯಂತ ಇರುವ ಕೆಟ್ಟತನಕ್ಕೆ ಯೇಸುವಿನ ಪ್ರೀತಿ, ಕರುಣೆ, ಕ್ಷಮೆ, ಔದಾರ್ಯಗಳು ಔಷಧವಾಗಬೇಕು. ಯೇಸು ಕ್ರಿಸ್ತರು ಶಿಲುಬೆಯನ್ನು ಹೊತ್ತು ನಡೆದಂತೆ ನಾವೂ ಜೀವನದಲ್ಲಿ ಎದುರಾಗುವ ಕಷ್ಟ, ನೋವು ಸಂಕಟಗಳನ್ನು ಎದುರಿಸಿ ಮುನ್ನಡೆಯಬೇಕಿದೆ. ಸ್ವಾರ್ಥ ತ್ಯಜಿಸಿ ಪರರ ಪ್ರೀತಿಯಲ್ಲಿ ಬದುಕಲು ದೇವರು ತೋರಿರುವ ದಾರಿಯೇ ಶಿಲುಬೆಯ ಹಾದಿಯಾಗಿದೆ ಎಂದರು.

ಜಿಲ್ಲೆಯ ಅನೇಕ ಚರ್ಚುಗಳಲ್ಲಿ ಯೇಸುಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ಘಟನಾವಳಿಗಳನ್ನು ಪ್ರಸ್ತುತಪಡಿಸಲಾಯಿತು. ಧರ್ಮಗುರುಗಳು ರಕ್ತವರ್ಣದ ಪೂಜಾಬಟ್ಟೆ ಧರಿಸಿ ಯೇಸು ಕ್ರಿಸ್ತರ ಕೊನೆಯ ಘಳಿಗೆಗಳ ವೃತ್ತಾಂತವನ್ನು ಓದಿದರು. ಬಳಿಕ ಮುಚ್ಚಲ್ಪಟ್ಟ ಶಿಲುಬೆಯನ್ನು ಮೆರವಣಿಗೆಯಲ್ಲಿ ತಂದು ಅನಾವರಣಗೊಳಿಸಲಾಯಿತು.

Share this article