ಭಟ್ಕಳ: ಪಟ್ಟಣದ ಆಸರಕೇರಿಯ ತಿರುಮಲ ವೆಂಕಟ್ರಮಣ ದೇವಸ್ಥಾನದ ಸಭಾಭವನದಲ್ಲಿ ತಾಲೂಕು ನಾಮಧಾರಿ ಶಿಕ್ಷಣಪ್ರೇಮಿಗಳ ಸಂಘದಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಾಮಧಾರಿ ಸಮಾಜದ ಹಿರಿಯ ಮುಖಂಡ ಡಿ.ಬಿ. ನಾಯ್ಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಇಚ್ಛಾಶಕ್ತಿ ಹಾಗೂ ಕಠಿಣ ಪರಿಶ್ರಮ ಇದ್ದಲ್ಲಿ ಉತ್ತಮ ಶಿಕ್ಷಣ ಪಡೆದು ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯತೆ ಹಾಗೂ ನೈತಿಕತೆಯನ್ನು ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು. ಸಮಾಜದ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು. ಭಟ್ಕಳ ನಾಮಧಾರಿ ಗುರುಮಠದ ಅಧ್ಯಕ್ಷ ಅರುಣ ನಾಯ್ಕ ಮಾತನಾಡಿ, ಸಮಾಜದ ಕಾರ್ಯ ಎಂದರೆ ದೇವರ ಕಾರ್ಯ ಹಾಗೂ ಅದರಲ್ಲೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ಕೊಡಬೇಕಾಗಿದೆ. ಸಮಾಜದ ವಿದ್ಯಾರ್ಥಿಗಳೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದರೆ ಸಾಲದು. ನಮ್ಮನ್ನು ಕಷ್ಟಪಟ್ಟು ಓದಿಸಿದ ಪಾಲಕರನ್ನು ಹಾಗೂ ಸಮಾಜವನ್ನು ಮರೆಯಬಾರದು ಎಂದರು.ಶಿರಾಲಿ ಸಾರದಹೊಳೆ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದ ಆಡಳಿ ಮಂಡಳಿಯ ಅಧ್ಯಕ್ಷ ಆರ್.ಕೆ. ನಾಯ್ಕ ಮಾತನಾಡಿ, ನಾಮಧಾರಿ ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಶಿಕ್ಷಣಪ್ರೇಮಿಗಳು ಮಾಡಿದ್ದಾರೆ ಎಂದರು.
ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ರವಿ ಎಂ. ನಾಯ್ಕ, ಶಿಕ್ಷಣ ಪ್ರೇಮಿಗಳ ಸಂಘದ ಪ್ರಮುಖ ಭವಾನಿಶಂಕರ ನಾಯ್ಕ, ಅಧ್ಯಕ್ಷತೆ ವಹಿಸಿದ್ದ ರಾಘವೇಂದ್ರ ನಾಯ್ಕ ಮಾತನಾಡಿದರು. ಸಹಕಾರಿ ಧುರೀಣ ಈರಪ್ಪ ಗರಡಿಕರ್, ಕಸಾಪ ಘಟಕದ ಅಧ್ಯಕ್ಷ ಗಂಗಾಧರ ನಾಯ್ಕ ಉಪಸ್ಥಿತರಿದ್ದರು.ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯರಾದ ಡಿ.ಬಿ. ನಾಯ್ಕ, ಶ್ರೀ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೆ.ಆರ್. ನಾಯ್ಕ ಹಾಗೂ ನಿವೃತ್ತ ಕೃಷಿ ಅಧಿಕಾರಿ ಜಿ.ಎನ್. ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯ ಮಟ್ಟದಲ್ಲಿ ೮ನೇ ರ‍್ಯಾಂಕ್ ಪಡೆದ ನಾಮಧಾರಿ ಹೆಮ್ಮೆ ಪ್ರಶಸ್ತಿಯನ್ನು ಮುರುಡೇಶ್ವರದ ಸಿಂಚನಾ ಮಂಜುನಾಥ ನಾಯ್ಕ ಪಡೆದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ತಾಲೂಕಿನ ಒಟ್ಟೂ ೧೩೨ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮಂಜುನಾಥ ನಾಯ್ಕ ಪ್ರಾರ್ಥನೆ ಹಾಡಿದರು. ಪಾಂಡುರಂಗ ನಾಯ್ಕ ಸ್ವಾಗತಿಸಿದರು. ಶಿವಾನಂದ ನಾಯ್ಕ ಪ್ರಾಸ್ತಾವಿಕರವಾಗಿ ಮಾತನಾಡಿದರು. ದಿನೇಶ ನಾಯ್ಕ ವಂದಿಸಿದರು. ಶಿಕ್ಷಕರಾದ ನಾರಾಯಣ ನಾಯ್ಕ ಹಾಗೂ ಪರಮೇಶ್ವರ ನಾಯ್ಕ ನಿರೂಪಿಸಿದರು.