ವೈಜ್ಞಾನಿಕ ಕೃಷಿಯಿಂದ ಉತ್ತಮ ಆದಾಯ: ಸಂಸದ ಕಾಗೇರಿ

KannadaprabhaNewsNetwork |  
Published : Dec 24, 2025, 02:45 AM IST
ಪೊಟೋ23ಎಸ್.ಆರ್‍.ಎಸ್‌1 (ಆತ್ಮ ಯೋಜನೆಯಡಿ ತಾಲೂಕು ಮಟ್ಟದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ರೈತರನ್ನು ಸನ್ಮಾನಿಸಿ, ಗೌರವಿಸಲಾಯಿತು.) | Kannada Prabha

ಸಾರಾಂಶ

ರೈತರು ವೈಜ್ಞಾನಿಕ ತಳಹದಿಯಲ್ಲಿ ಕೃಷಿ ಕಾರ್ಯನಿರ್ವಹಿಸಿದರೆ ಉತ್ತಮ ಆದಾಯ ನಿರೀಕ್ಷಿಸಬಹುದು.

ರೈತ ದಿನಾಚರಣೆ ಉದ್ಘಾಟನೆ, ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ರೈತರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ ಶಿರಸಿ

ರೈತರು ವೈಜ್ಞಾನಿಕ ತಳಹದಿಯಲ್ಲಿ ಕೃಷಿ ಕಾರ್ಯನಿರ್ವಹಿಸಿದರೆ ಉತ್ತಮ ಆದಾಯ ನಿರೀಕ್ಷಿಸಬಹುದು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ನಗರದ ಅರಣ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಮಂಗಳವಾರ ಜಿಪಂ, ಕೃಷಿ ಇಲಾಖೆ, ತಾಲೂಕು ಕೃಷಿಕ ಸಮಾಜ, ಧಾರವಾಡ ಕೃಷಿ ವಿಶ್ವ ವಿದ್ಯಾಲಯ, ಶಿರಸಿಯ ಕೃಷಿ ವಿಜ್ಞಾನ ಕೇಂದ್ರ, ಅರಣ್ಯ ಮಹಾವಿದ್ಯಾಲಯದ ಹಮ್ಮಿಕೊಂಡ ರೈತ ದಿನಾಚರಣೆಯನ್ನು ಉದ್ಘಾಟಿಸಿ, ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ರೈತರನ್ನು ಸನ್ಮಾನಿಸಿ ಮಾತನಾಡಿದರು.

ಸ್ವಾತಂತ್ರ್ಯಾನಂತರ ಆಹಾರದ ಕೊರತೆಯಿಂದ ಎರಡು ಹೊತ್ತಿನ ಊಟಕ್ಕೂ ಪರದಾಡುವಂತಾಗಿತ್ತು. ಅಂದಿನ ಭೀಕರ ಸನ್ನಿವೇಶದಲ್ಲಿ ಪರಿಸ್ಥಿತಿ ಕಷ್ಟದಲ್ಲಿತ್ತು.‌ ನಂತರ ಸರ್ಕಾರಗಳು ರೈತರ ಪರವಾಗಿ ಅನುಷ್ಠಾನಗೊಳಿಸಿದ ಯೋಜನೆಗಳ ಪರಿಣಾಮ ಆಹಾರ ಉತ್ಪಾದನೆ ಹೆಚ್ಚಾಗತೊಡಗಿತು. ಈಗ ಭಾರತಕ್ಕೆ ಬೇಕಾಗುವಷ್ಟು ಆಹಾರ ಉತ್ಪಾದನೆ ಜತೆ ಬೇರೆ ದೇಶಕ್ಕೂ ರಫ್ತು ಮಾಡುವಷ್ಟು ದೇಶ ಸದೃಢವಾಗಿ ಬೆಳೆದಿದೆ.‌ ಇದಕ್ಕೆ ರೈತರು ಪ್ರಮುಖ ಕಾರಣೀಕರ್ತರು ಎಂದ ಅವರು, ಮಣ್ಣಿನ ಆರೋಗ್ಯವೇ ಭೂಮಿಯ ಆರೋಗ್ಯ. ಕೇಂದ್ರ ಸರ್ಕಾರ ರಸಗೊಬ್ಬರಕ್ಕೆ ಸಬ್ಸಿಡಿ, ವಿಮೆ, ರೈತ ಸನ್ಮಾನ ಸೇರಿದಂತೆ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿ, ರೈತರ ಆರ್ಥಿಕ ಪರಿಸ್ಥಿತಿಯನ್ನು ಸದೃಢವಾಗಿಸಿದೆ ಎಂದರು. ಚರಣ ಸಿಂಗ್ ಅವರ ರೈತ ಪರ ಹೋರಾಟದಿಂದ ರೈತ ನಾಯಕರಾಗಿ ಗುರುತಿಸಿಕೊಂಡರು. ಅವರ ಜನ್ಮ ದಿನವನ್ನು ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು. ಆಹಾರ ವಿಷಪೂರಿತವಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ರೈತರು ಸಾವಯವ ಕೃಷಿ ಪದ್ಧತಿ ಹೆಚ್ಚಬೇಕು. ಏಕಮುಖ ಬೆಳೆಯಿಂದ ಮಾರುಕಟ್ಟೆ ಸೌಲಭ್ಯ ಕೊರತೆಯಾಗುತ್ತದೆ. ರೈತರು ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು.ಗ್ರಾಮೀಣ ಭಾಗದಲ್ಲಿ ಉದ್ಯೋಗದ ಭರವಸೆ ಅತಿ ಅವಶ್ಯವಾಗಿದ್ದು, 100 ದಿನ ಇರುವುದನ್ನು 120 ದಿನ ಮಾಡಲಾಗಿದ್ದು, ಒಂದು ವಾರದಲ್ಲಿ ಹಣ ಪಾವತಿಗೆ ಅವಕಾಶವಿದೆ.‌ ಪರಿಷ್ಕರಣೆಯ ಹೆಸರಿನಲ್ಲಿ ದರ ಕಡಿಮೆ ಮಾಡಬಾರದು. ಏರಿಕೆ ಮಾಡಬೇಕು ಎಂಬ ಬಿಲ್‌ನ್ನು ಕೇಂದ್ರ ಸರ್ಕಾರ ಅಧಿವೇಶನದಲ್ಲಿ ಪಾಸ್ ಮಾಡಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.ಕೃಷಿಕ ಸಮಾಜದ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೆಕೇರಿ ಅಧ್ಯಕ್ಷತೆ ವಹಿಸಿದ್ದರು. 2025-26ನೇ ಸಾಲಿನ ಆತ್ಮ ಯೋಜನೆಯಡಿ ತಾಲೂಕು ಮಟ್ಟದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಕೃಷಿಯಲ್ಲಿ ಸಮಗ್ರ ಬೆಳೆ ಪದ್ದತಿ ಅಳವಡಿಸಿಕೊಂಡಿರುವ ಮಹಾಬಲೇಶ್ವರ ಗೌಡ ಕಬ್ಬೆ, ತೋಟಗಾರಿಕೆ ಸಂಬಂಧಿಸಿ ಆನಂದ ಹೆಗಡೆ ಹುಳಗೋಳ, ಜೇನು ಕೃಷಿಕ ಪ್ರವೀಣ ಹೆಗಡೆ ಬಕ್ಕಳ, ಕೋಳಿ ಸಾಕಣೆದಾರ ಕನ್ನ ಬಡಗಿ ತೆಪ್ಪಾರ, ಹೈನುಗಾರ ಗಣಪತಿ ಹೆಗಡೆ ಸದಾಶಿವಳ್ಳಿ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭ ವಿಕಸಿತ ಭಾರತ 2047 ಹಸ್ತ ಪ್ರತಿಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಇತರ ಗಣ್ಯರು ಬಿಡುಗಡೆಗೊಳಿಸಿದರು.ಆತ್ಮ ಸಮಿತಿಯ ಅಧ್ಯಕ್ಷ ದುಶ್ಯಂತರಾಜ ಕೊಲ್ಲೂರಿ, ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ವಾಸುದೇವ, ಕೆವಿಕೆ ಮುಖ್ಯಸ್ಥೆ ಡಾ. ರೂಪಾ ಪಾಟೀಲ, ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಆರ್.ಡಿ. ಹೆಗಡೆ ಜಾನ್ಮನೆ ಮತ್ತಿತರರಿದ್ದರು. ಕೃಷಿ ಇಲಾಖೆಯ ಉಪನಿರ್ದೇಶಕ ಪಿ.ಕೆ. ಪಾಂಡು ಪ್ರಾಸ್ತಾವಿಕ ಮಾತನಾಡಿದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಧುಕರ ನಾಯ್ಕ ಸ್ವಾಗತಿಸಿದರು. ಕೃಷಿ ಅಧಿಕಾರಿ ವಿವೇಕ ಹೆಗಡೆ ನಿರೂಪಿಸಿದರು.

ವಿಮೆ ಯೋಜನೆ ಮಂಜೂರು ಮಾಡಿಸುವ ಪ್ರಯತ್ನ

ಹವಾಮಾನ ಆಧಾರಿತ ಬೆಳೆ ಯೋಜನೆಯ ವಿಮೆ ಮೊತ್ತ ರೈತರ ಖಾತೆಗೆ ಜಮಾ ಆಗಿಲ್ಲ. ಮಳೆಯಂತ್ರ ಸರಿ ಇಟ್ಟುಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಅಂಕಿ-ಅಂಶ ಸರಿಯಿಲ್ಲ. ಯಾವ ಮಾನದಂಡದಲ್ಲಿ ವಿಮೆ ಪರಿಹಾರ ನೀಡಬೇಕು ಎಂಬುದಾಗಿ ವಿಮೆ ಕಂಪೆನಿ ಪ್ರಶ್ನಿಸುತ್ತಿದ್ದು, ರೈತರಿಗೆ ಅನ್ಯಾಯವಾದ ರೀತಿಯಲ್ಲಿ ವಿಮೆ ಯೋಜನೆ ಮಂಜೂರು ಮಾಡಿಸುವ ಪ್ರಯತ್ನವನ್ನು ಸಂಸದನಾಗಿ ಮಾಡುತ್ತೇನೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ