ಕುವೆಂಪು ಜೀವನವೇ ಒಂದು ಮಹಾನ್ ಸಂದೇಶ :ಶಾಸಕ ಜಿ.ಟಿ. ದೇವೇಗೌಡ ಅಭಿಮತ

KannadaprabhaNewsNetwork |  
Published : Dec 30, 2023, 01:15 AM IST
3 | Kannada Prabha

ಸಾರಾಂಶ

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ

- ಶಾಸಕ ಜಿ.ಟಿ. ದೇವೇಗೌಡ ಅಭಿಮತ

- ಜಿಲ್ಲಾಡಳಿತದಿಂದ ವಿಶ್ವ ಮಾನವ ದಿನಾಚರಣೆ

ಕನ್ನಡಪ್ರಭ ವಾರ್ತೆ ಮೈಸೂರು

ಕುವೆಂಪು ಅವರ ಜೀವನವೇ ಒಂದು ಮಹಾನ್ ಸಂದೇಶವಾಗಿತ್ತು ಎಂದು ಶಾಸಕ ಜಿ.ಟಿ. ದೇವೇಗೌಡ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕುವೆಂಪು ಅವರು, ಜಾತೀಯತೆ, ಅರ್ಥಹೀನ ಆಚರಣೆ ವಿರೋಧಿಸುತ್ತಿದ್ದರು. ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಎಂಬ ಮಹಾಕಾವ್ಯ ಅವರಿಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಿತು ಎಂದು ಅವರು ತಿಳಿಸಿದರು.

ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ!, ಆ ನಂತರ ಆ ಮಗುವನ್ನು ಜಾತಿ, ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ, ಹಾಗಾಗಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶ ಎಂದರು.

ಬುದ್ಧ, ಬಸವರ ಹಾಗೆ ಸಮಾಜದಲ್ಲಿ ವ್ಯಕ್ತಿ ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದು ಕುವೆಂಪು ಅವರ ಆಶಯ. ಅದುವೆ ವಿಶ್ವ ಮಾನವ ಸಂದೇಶ. ರಸಋಷಿ ಕುವೆಂಪು ಅವರು 20ನೇ ಶತಮಾನದಲ್ಲಿ ಕಂಡ ಅದ್ಭುತ ಕವಿಗಳಲ್ಲಿ ಒಬ್ಬರು. ವರಕವಿ ಬೇಂದ್ರೆಯವರಿಂದ ಯುಗದ ಕವಿಗೆ, ಜಗದ ಕವಿಗೆ ಶ್ರೀರಾಮಾಯಣ ದರ್ಶನದಿಂದಲೇ ಕೈ ಮುಗಿದ ಕವಿಗೆ-ಮಣಿಯದವರು ಯಾರು? ರಾಮಕೃಷ್ಣ ವಚನೋದಿತ ಪ್ರತಿಭೆತೆರೆದ ಕವನ ತತಿಗೆತಣಿಯದವರುಆರು? ಮಲೆನಾಡಿನ ಸೌಂದರ್ಯಕ್ಕೆ ಕುಣಿದಾಡಿದ ಕವಿಯ ಜತೆಗೆ ಕುಣಿಯದವರುಆರು? ಎನಿಸಿಕೊಂಡವರು ಕುವೆಂಪು, ವಿಶ್ವ ಮಾನವ ಸಂದೇಶವನ್ನು ನೀಡಿದ ಕುವೆಂಪು ಅವರ ಜನ್ಮ ದಿನವನ್ನು ನಾವು ಇಂದು ವಿಶ್ವ ಮಾನವ ದಿನಾಚರಣೆಯಾಗಿ ಆಚರಿಸುತ್ತಿದ್ದೇವೆ ಎಂದರು.

ಅಧ್ಯಕ್ಷತೆವಹಿಸಿದ್ದ ಶಾಸಕ ಕೆ. ಹರೀಶ್‌ಗೌಡ ಮಾತನಾಡಿ, ನಾಡಿಗೆ ವಿಶ್ವಮಾನವ ಸಂದೇಶ ಸಾರಿದ ಕನ್ನಡ ಸಾಹಿತ್ಯದ ಮೇರು ಕವಿ ಕುವೆಂಪು. ಮನುಜಮತ, ವಿಶ್ವಪಥ ಸರ್ವೋದಯ, ಸಮನ್ವಯ ಹಾಗೂ ಪೂರ್ಣದೃಷ್ಟಿ ಎಂಬ ಪಂಚಮಂತ್ರಗಳ ಹರಿಕಾರರಾದ ರಾಷ್ಟ್ರಕವಿ ಕುವೆಂಪು ಅವರ 119ನೇ ಜನ್ಮದಿನದ ಶುಭಾಶಯ ತಿಳಿಸಿದರು.

ನಾನು ಮಗುವಾಗಿದ್ದಾಗಲೇ ಕುವೆಂಪು ಅವರನ್ನು ನೇರವಾಗಿ ಕಂಡು, ಅವರ ತೊಡೆ ಮೇಲೆ ಕುಳಿತ ಸಂತಸದ ಕ್ಷಣ ನನ್ನ ಜೀವಮಾನದುದ್ದಕ್ಕೂ ನನ್ನ ಜೊತೆಗಿರುತ್ತದೆ. ಕನ್ನಡದ ಶ್ರೇಷ್ಠ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿ ನಮ್ಮ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಕುವೆಂಪು ಅವರು ಹೆಚ್ಚಿಸಿದ್ದಾರೆ ಎಂದರು.

ವಿಧಾನ ಪರಿಷತ್‌ ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣದಲ್ಲಿ ಕುವೆಂಪು ಅವರ ಬರಹಗಳು ಅತ್ಯಂತ ಪ್ರಭಾವ ಬೀರುತ್ತವೆ. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಶ್ರೇಷ್ಠ ಸಾಹಿತಿ ಕುವೆಂಪು ಅವರನ್ನು ಕನ್ನಡ ನಾಡು ಚಿರಕಾಲ ಸ್ಮರಿಸುತ್ತದೆ ಎಂದು ಅವರು ಹೇಳಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಎಲ್. ಮಲ್ಲೇಶಗೌಡ ಮಾತನಾಡಿ, ಸಾಹಿತ್ಯದ ಎಲ್ಲಾ ಮಜಲುಗಳಲ್ಲಿ ಉತ್ತುಂಗದ ಶಿಖರವೇರಿದ ಕವಿ ಕುವೆಂಪು. ದ.ರಾ. ಬೇಂದ್ರೆ ಅವರು ಕುವೆಂಪು ಅವರನ್ನು ಯುಗದ ಕವಿ ಜಗದ ಕವಿ ಎಂದು ಹಾಡಿ ಹೊಗಳಿದ್ದಾರೆ.

ಇಂದಿನ ಯುವ ಪೀಳಿಗೆಯಿಂದ ಕುವೆಂಪು ಅವರನ್ನು ಓದುವ ಕೆಲಸವಾಗಬೇಕು. ಕುವೆಂಪು ಅವರ ವಿಶ್ವಮಾನವ ಸಂದೇಶ ಸಾಕಾಗಾರಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್‌. ಲೋಕನಾಥ್‌ ಅವರು ಜಿಲ್ಲಾ ಉಸ್ತುವಾರಿ ಸಚಿವರ ಸಂದೇಶ ವಾಚಿಸಿದರು. ವಿಧಾನ ಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ, ನಗರ ಪಾಲಿಕೆ ಆಡಳಿತ ವಿಭಾಗದ ಉಪ ಆಯುಕ್ತ ಜಿ.ಎಸ್. ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಲ್ಪಕಲಾ ಅಕಾಡೆಮಿ ಗೌರವ-ಶಿಲ್ಪಶ್ರೀ ಪ್ರಶಸ್ತಿ ಪ್ರಕಟ
ಹಿರಿಯ ಕವಿಗಳ ಬರಹದಿಂದ ಹೆಚ್ಚು ಪ್ರಭಾವಿತ: ಪ್ರೊ.ರಂಗಸ್ವಾಮಿ