ಕನ್ನಡಪ್ರಭ ವಾರ್ತೆ, ತರೀಕೆರೆ
ಈ ಬಾರಿ ತರೀಕೆರೆ ತಾಲೂಕಿನಲ್ಲಿ ವಾಡಿಕೆಯ ಶೇ. 32ರಷ್ಟು ಮಳೆಯಾಗಿದ್ದರೂ 100 ಎಕರೆ ಬೀಜೋತ್ಪಾದನಾ ಕೇಂದ್ರದ ಜಮೀನಿನಲ್ಲಿರುವ 12 ಎಕರೆ ಪ್ರದೇಶದಲ್ಲಿ ತೊಗರಿಬೆಳೆ ಮತ್ತು 20 ಎಕರೆಯಲ್ಲಿ ರಾಗಿ ಬೆಳೆಯನ್ನು ಉತ್ತಮ ವಾಗಿ ಬೆಳೆಯಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.ಲಿಂಗದಹಳ್ಳಿ ಬೀಜೋತ್ಪಾನಾ ಕೇಂದ್ರದ ಅವರಣದಲ್ಲಿ ಏರ್ಪಾಡಾಗಿದ್ದ ಸುಗ್ಗಿ ಸಂಭ್ರಮ ಮತ್ತು ರೈತ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕಡಿಮೆ ಮಳೆಯಾಶ್ರಿತ ಜಮೀನುಗಳಲ್ಲೂ ರೈತರು ಹೆಚ್ಚಿನ ಆದಾಯ ಪಡೆಯಬಹುದಾಗಿದ್ದು ಬರಗಾಲದಿಂದಾಗಿ ಮುಂಗಾರಿನ ಬೆಳೆಗಳೆಲ್ಲವೂ ರೈತರ ಕೈತಪ್ಪಿ ಹೋಗಿದೆ. ತಾಲೂಕಿನ ಪ್ರತಿ ಎಕರೆ ಜಮೀನಿಗೂ ರಾಜ್ಯ ಸರ್ಕಾರದಿಂದ ರು. 890 ಗಳಂತೆ ಬೆಳೆ ಪರಿಹಾರವನ್ನು ನೀಡಲಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ ಸುಗ್ಗಿ ಸಂಭ್ರಮ ಎಂಬ ಕಾರ್ಯಕ್ರಮ ಕೃಷಿ ಇಲಾಖೆಯಿಂದ ನಡೆಯುತ್ತಿ ರುವುದನ್ನು ಕಣ್ಣಾರೆ ಕಂಡಿದ್ದು ಬರಗಾಲದ ವರ್ಷ ಲಿಂಗದಹಳ್ಳಿ ಸರ್ಕಾರಿ ಬೀಜೋತ್ಪಾದನಾ ಕೇಂದ್ರದಲ್ಲಿ ತೊಗರಿ ಮತ್ತು ರಾಗಿ ಬೆಳೆ ಬೆಳೆದು ಅತ್ಯುತ್ತಮ ಇಳುವರಿ ಪಡೆದಿರುವುದಕ್ಕೆ ಸಂಬಂಧಪಟ್ಟ ಇಲಾಖಾ ಅಧಿಕಾರಿ ವರ್ಗದವರ ಶ್ರಮವೇ ಮುಖ್ಯ ಕಾರಣವಾಗಿದೆ ಎಂದು ಹೇಳಿದರು.ಇಲ್ಲಿನ ಬಿತ್ತನೆ ಬೀಜಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಬೀಜ ನಿಗಮಗಳ ಮೂಲಕ ಸಂಸ್ಕರಿಸಿ ರೈತರಿಗೆ ನೀಡಲಿದ್ದು ರೈತರು ಈ ಉತ್ಪನ್ನಗಳನ್ನು ಬಳಸುವ ಮೂಲಕ ತಮ್ಮ ಆದಾಯ ಹೆಚ್ಚಿಸಿಕೊಳ್ಳಬೇಕು. ಕೃಷಿ ಇಲಾಖೆ ಅಧಿಕಾರಿಗಳಂತೆಯೇ ಇನ್ನಿತರೆ ಇಲಾಖೆಗಳ ಅಧಿಕಾರಿಗಳು ಉತ್ತಮವಾ|ಗಿ ಕಾರ್ಯ ನಿರ್ವಹಿಸುವ ಮೂಲಕ ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಎಚ್.ಎಲ್. ಸುಜಾತ ಮಾತನಾಡಿ ಲಿಂಗದಹಳ್ಳಿ ಬೀಜೋತ್ಪಾದನಾ ಕೇಂದ್ರ ಈ ಬಾರಿ ರಾಗಿ ಮತ್ತು ತೊಗರಿ ಬೆಳೆಯಲ್ಲಿ ಉತ್ತಮ ಫಸಲು ಪಡೆವ ಮೂಲಕ ಸುಮಾರು 30 ಲಕ್ಷ ರು. ಗಳಷ್ಟು ಮೌಲ್ಯದ ಬೆಳೆ ಬೆಳೆದಿದ್ದು ಇದರಲ್ಲಿ ರು. 5 ಲಕ್ಷದಷ್ಟು ಖರ್ಚು ವೆಚ್ಚಗಳನ್ನು ಕಳೆದರೂ ಸುಮಾರು ರು. 25 ಲಕ್ಷದಷ್ಟು ನಿವ್ವಳ ಲಾಭ ಬರಲಿದೆ ಎಂದು ಹೇಳಿದರು.ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಎಂ. ಆರ್. ಚಂದ್ರಮೌಳಿ, ಕೃಷಿಕ ಸಮಾಜ ರಾಜ್ಯ ಪ್ರತಿನಿಧಿ ಬಿ. ಆರ್. ರವಿ, ಲಿಂಗದಹಳ್ಳಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಸಿರಿಧಾನ್ಯ ಕೃಷಿಕರಾದ ಕಡೂರು ಮಂಜುನಾಥ್ , ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ, ಕೃಷಿ ಅಧಿಕಾರಿಗಳಾದ ಎಂ.ಆರ್. ಹಂಸವೇಣಿ ಮತ್ತು ಲೋಕೇಶಪ್ಪ, ತೋಟಗಾರಿಕಾ ಅಧಿಕಾರಿ ಪೂರ್ಣಿಮ, ವಾಣಿ ಶ್ರೀನಿವಾಸ್ ಉಪಸ್ಥಿತರಿದ್ದರು.
15ಕೆಟಿಆರ್.ಕೆ.2ಃತರೀಕೆರೆ ಸಮೀಪದ ಲಿಂಗದಹಳ್ಳಿ ಬೀಜೋತ್ಪಾದನಾ ಕೇಂದ್ರದಲ್ಲಿ ಏರ್ಪಡಿಸಿದ್ದ ಸುಗ್ಗಿ ಸಂಭ್ರಮ ಹಾಗೂ ರೈತ ದಿನಾಚರಣೆ ಉದ್ಘಾಟನೆಯನ್ನು ಶಾಸಕ ಜೆ.ಎಚ್.ಶ್ರೀನಿವಾಸ್, ಜಿಲ್ಲಾಧಿಕಾರಿ ಮೀನಾ ನಾಗರಾಜ್. ಸಿಇಒ ಡಾ. ಗೋಪಾಲ ಕೃಷ್ಣ ನೆರವೇರಿಸಿದರು.