ಧಾರವಾಡದಲ್ಲಿ ಗುಡುಗು ಸಮೇತ ಉತ್ತಮ ಮಳೆ

KannadaprabhaNewsNetwork |  
Published : May 14, 2025, 01:58 AM IST
ಮಳೆ ನೀರಿನಿಂದ ತುಂಬಿರುವ ರಸ್ತೆಗಳಲ್ಲಿ ಬೈಕ್ ಸವಾರನ ಪರದಾಟ. | Kannada Prabha

ಸಾರಾಂಶ

ಧಾರವಾಡ ಮಲೆನಾಡು ಪ್ರದೇಶಕ್ಕೆ ತುಸು ಪ್ರಮಾಣದಲ್ಲಿ ಸುರಿದರೂ ಬೆಳವಲು ಪ್ರದೇಶದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಿತು. ಪ್ರತಿ ಬಾರಿಯಂತೆ ಇಲ್ಲಿಯ ಕೋರ್ಟ್‌ ವೃತ್ತದಿಂದ ಟೋಲ್‌ನಾಕಾ ವರೆಗೆ ರಸ್ತೆಯಲ್ಲಿ ಮಳೆ ನೀರು ನಿಂತು ಸಂಚಾರದಲ್ಲಿ ತೀವ್ರ ಅಸ್ತವ್ಯಸ್ತಗೊಂಡಿತು.

ಧಾರವಾಡ: ಕೆಲವು ದಿನಗಳಿಂದ ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಧಾರವಾಡ ಜನತೆಗೆ ಮಂಗಳವಾರ ಸಂಜೆ ಗುಡುಗು, ಮಿಂಚು ಸಮೇತ ಸುರಿದ ಮುಂಗಾರು ಪೂರ್ವ ಮಳೆಯು ಮುದ ನೀಡಿತು. ಅಷ್ಟೇ ಪ್ರಮಾಣದಲ್ಲಿ ಮಳೆಯ ನೀರು ರಸ್ತೆಯಲ್ಲಿ ನಿಂತು ಜನರನ್ನು ಕಂಗಾಲಾಗುವಂತೆ ಮಾಡಿತು.

ಧಾರವಾಡ ಮಲೆನಾಡು ಪ್ರದೇಶಕ್ಕೆ ತುಸು ಪ್ರಮಾಣದಲ್ಲಿ ಸುರಿದರೂ ಬೆಳವಲು ಪ್ರದೇಶದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಿತು. ಪ್ರತಿ ಬಾರಿಯಂತೆ ಇಲ್ಲಿಯ ಕೋರ್ಟ್‌ ವೃತ್ತದಿಂದ ಟೋಲ್‌ನಾಕಾ ವರೆಗೆ ರಸ್ತೆಯಲ್ಲಿ ಮಳೆ ನೀರು ನಿಂತು ಸಂಚಾರದಲ್ಲಿ ತೀವ್ರ ಅಸ್ತವ್ಯಸ್ತಗೊಂಡಿತು. ಸಣ್ಣ ವಾಹನಗಳು ಮಾತ್ರವಲ್ಲದೇ ಬಸ್ಸು- ಕಾರುಗಳು ಸಹ ಸಂಚರಿಸದಂತೆ ನೀರು ನಿಂತು ಅವಾಂತರ ಸೃಷ್ಟಿಯಾಯಿತು. ಟೋಲ್‌ನಾಕಾದಿಂದ ಎಸ್‌ಡಿಎಂ ವರೆಗೂ ಸಂಚಾರ ದಟ್ಟಣೆ ಹೆಚ್ಚಾಗಿ ಜನರು ಪರದಾಡುವಂತಾಯಿತು.

ಅದೇ ರೀತಿ ಸಮೀಪದ ಅಮ್ಮಿನಬಾವಿ, ಮರೇವಾಡ, ಕರಡಿಗುಡ್ಡ ಸೇರಿ ಸವದತ್ತಿ ರಸ್ತೆಗುಂಟ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಸುಮಾರು 2 ಗಂಟೆಗೂ ಅಧಿಕ ಹೊತ್ತಿನವರೆಗೆ ನಿರಂತರವಾಗಿ ಸುರಿದ ದಟ್ಟವಾದ ಮಳೆಯು ವಿಪರೀತ ಗುಡುಗು, ಮಿಂಚು, ಗಾಳಿಯನ್ನು ಹೊತ್ತು ತಂದಿತ್ತು. ರಸ್ತೆ ಕಾಣದಂತೆ ಮಳೆ ಸುರಿದಿದ್ದರಿಂದ ಸವದತ್ತಿ ರಸ್ತೆಯಲ್ಲಿ ವಾಹನ ನಡೆಸಲು ಚಾಲಕರು ಗೊಂದಲಕ್ಕೀಡಾಗಿ ಕಷ್ಟ ಅನುಭವಿಸಬೇಕಾಯಿತು. ವಾಹನಗಳು ಅತ್ಯಂತ ನಿಧಾನ ಗತಿಯಲ್ಲಿ ಚಲಿಸಿದವು.

ಧಾರವಾಡ ಸಮೀಪದ ಗ್ರಾಮಗಳ ಜಮೀನುಗಳು ಮಳೆನೀರಿನಿಂದ ಜಲಾವೃತಗೊಂಡಿದ್ದವು. ಸರ್ಕಾರಿ ಬಸ್ ಸಂಚಾರಕ್ಕೂ ಈ ಮಳೆ ವ್ಯತ್ಯಯ ಮಾಡಿತು. ಕೆಲವು ಬಸ್ ಚಾಲಕರು ರಸ್ತೆ ಕಾಣದೇ ಇದ್ದಾಗ ಬಸ್ ನಿಲುಗಡೆ ಮಾಡಿ ನಂತರ ಮಳೆಯ ಆರ್ಭಟ ತಗ್ಗಿದ ನಂತರ ಬಸ್ ಚಾಲನೆ ಮಾಡಿದರು. ಕೆಲವು ಗ್ರಾಮಗಳಲ್ಲಿ ವ್ಯಾಪಕ ಮಳೆ ನೀರು ಹರಿದಿದ್ದರಿಂದ ಬಹುತೇಕ ಒಳಗಿನ ರಸ್ತೆಗಳು ಜಲಾವೃತವಾಗಿದ್ದವು. ಅಮ್ಮಿನಬಾವಿ ಗ್ರಾಮ ಪಂಚಾಯತಿ ಎದುರಿನ ರಸ್ತೆಯಲ್ಲಿ ನೀರು ತುಂಬಿಕೊಂಡು ರಸ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ರಸ್ತೆಯ ಇಕ್ಕೆಲಗಳಲ್ಲಿಯ ಗಟಾರಗಳು ಕಾಣದಂತೆ ನೀರು ತುಂಬಿಕೊಂಡಿದೆ ಎಂದು ಗ್ರಾಮದ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದರು.

ಮುಂಗಾರು ಹಂಗಾಮಿನ ಬಿತ್ತನೆಗೆ ಸಿದ್ಧತೆ ಕೈಗೊಂಡಿದ್ದ ರೈತರಿಗೆ ಮುಂಗಾರು ಪೂರ್ವ ಈ ಮಳೆ ಸಂತೋಷ ನೀಡಿದೆ. ಮೇ ಅಂತ್ಯ ಹಾಗೂ ಜೂನ್‌ ಮೊದಲ ವಾರದಿಂದ ಬಿತ್ತನೆ ಕಾರ್ಯ ಶುರುವಾಗಲಿದ್ದು, ಈ ಕಾರ್ಯಕ್ಕೆ ಮಂಗಳವಾರದ ಮಳೆ ಹದವಾಗಿದೆ.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ