
ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಸೋಮವಾರ ಉತ್ತಮ ಮಳೆ ಸುರಿದಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ಮಳೆಯಾಗಿದೆ. ಮಳೆಯಿಂದಾಗಿ ವಿರಾಜಪೇಟೆ ಹೋಬಳಿಯಲ್ಲಿ ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರ ಬಿದ್ದು ಸವಾರೆ, ಬೇಟೋಳಿ ಗ್ರಾಮದ ನಿವಾಸಿ ಮಹಿಳೆ ಸಿಂಧು ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ಗಾಯಗೊಂಡಿರುವ ಅವರನ್ನು ವಿರಾಜಪೇಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ.ಭಾರೀ ಮಳೆಗೆ ಗೋಣಿಕೊಪ್ಪ ಕುಂದಾ ಗ್ರಾಮದ ಬಸವೇಶ್ವರ ಕಾಲೋನಿ ಸಂಪರ್ಕಿಸುವ ಸೇತುವೆ ಮುಳುಗಿದ್ದು, ಅದರ ಮೇಲೆ ಅಂದಾಜು 2 ಅಡಿಯಷ್ಟು ನೀರು ಹರಿಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಗೋಣಿಕೊಪ್ಪ ಪೋಲಿಸ್ ಠಾಣೆ ವತಿಯಿಂದ ಸೇತುವೆ ಮುಂಭಾಗದಲ್ಲಿ ಆಡ್ಡಲಾಗಿ ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿರ್ಬಂಧಿಸಲಾಗಿದೆ.
ಹೋಬಳಿವಾರು ವಿವರ: ಮಡಿಕೇರಿ 16, ನಾಪೋಕ್ಲು 12.40, ಸಂಪಾಜೆ 12, ಭಾಗಮಂಡಲ 77.20, ವಿರಾಜಪೇಟೆ 58.80, ಅಮ್ಮತ್ತಿ 47.50, ಹುದಿಕೇರಿ 38, ಶ್ರೀಮಂಗಲ 60, ಪೊನ್ನಂಪೇಟೆ 75, ಬಾಳೆಲೆ 12.05, ಸೋಮವಾರಪೇಟೆ 15, ಶನಿವಾರಸಂತೆ 18, ಶಾಂತಳ್ಳಿ 37, ಕೊಡ್ಲಿಪೇಟೆ 27, ಕುಶಾಲನಗರ 3.60, ಸುಂಟಿಕೊಪ್ಪ 10 ಮಿ.ಮೀ.ಮಳೆಯಾಗಿದೆ.
ಹಾರಂಗಿ ಜಲಾಶಯ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2835.92 ಅಡಿಗಳು. ಇಂದಿನ ನೀರಿನ ಒಳಹರಿವು 1344 ಕ್ಯುಸೆಕ್, ಹೊರ ಹರಿವು ನದಿಗೆ 180 ಕ್ಯುಸೆಕ್.