ಮತಯಾಚನೆ ವೇಳೆ ಸಂಕನೂರ ಪರ ಎಲ್ಲೆಡೆ ಉತ್ತಮ ಸ್ಪಂದನೆ

KannadaprabhaNewsNetwork |  
Published : Oct 14, 2026, 02:00 AM IST
ರಾಣಿಬೆನ್ನೂರು ನಗರದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು.  | Kannada Prabha

ಸಾರಾಂಶ

ರಾಣಿಬೆನ್ನೂರಿನಲ್ಲಿ ವಿವಿಧ ಕಡೆ ಪದವೀಧರ ಮತದಾರರಲ್ಲಿ ನಮ್ಮ ಅಭ್ಯರ್ಥಿ ಪರ ಮತಯಾಚನೆ ಮಾಡಿದ್ದು ಎಲ್ಲೆಡೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ರಾಣಿಬೆನ್ನೂರು: ರಾಣಿಬೆನ್ನೂರಿನಲ್ಲಿ ವಿವಿಧ ಕಡೆ ಪದವೀಧರ ಮತದಾರರಲ್ಲಿ ನಮ್ಮ ಅಭ್ಯರ್ಥಿ ಪರ ಮತಯಾಚನೆ ಮಾಡಿದ್ದು ಎಲ್ಲೆಡೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವೀಧರ ಮತದಾರರ ನೋಂದಣಿ ಮಾಡುವ ಸಮಯದಲ್ಲಿ ನಮಗೆ ಬಹಳ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲಾ ಜಿಲ್ಲೆಯಲ್ಲಿ ಒಳ್ಳೆಯ ಬೆಳವಣಿಗೆ ಕಂಡು ಬಂದಿದೆ. ಬಿಜೆಪಿ ಶಕ್ತಿ ಹಾಗೂ ಸಂಕನೂರ ಅವರ ವರ್ಚಸ್ಸು, ಕೆಲಸ ನಮ್ಮ ಗೆಲುವಿಗೆ ಸಹಕಾರಿಯಾಗಲಿದೆ. ಈ ಸಲ ಅವರು ಕಳೆದ ಬಾರಿಗಿಂತ ಹೆಚ್ಚು ಮತದಿಂದ ಆಯ್ಕೆಯಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಆತಂಕಕಾರಿಯಾಗಿವೆ. ವಿಪಕ್ಷಗಳು ಪ್ರಜಾಪ್ರಭುತ್ವದಲ್ಲಿ ಚುನಾವಣೆಯಿಂದ ಗೆಲ್ಲುವ ತಿಲಾಂಜಲಿ ನೀಡಿ ಬೀದಿಗಳಲ್ಲಿ ನಿರ್ಣಯ ಬರಬೇಕು ಎಂಬ ಹಠಕ್ಕೆ ಬಿದ್ದಿವೆ. ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು, ದಂಡು ಕಟ್ಟಿಕೊಂಡು ಹೋಗಿದ್ದಾರೆ. ಅವರಿಗೆ ದೇಶದ ಯಾವುದೇ ಸ್ವಾಯತ್ತ ಸಂಸ್ಥೆ, ಕಾನೂನು ಮೇಲೆ ನಂಬಿಕೆಯ ಇಲ್ಲದೆ, ಕಾನೂನು ಬಾಹಿರ ನಡವಳಿಕೆ ಪ್ರದರ್ಶಿಸುತ್ತಿದ್ದು ಎಲ್ಲರಿಗೂ ಆತಂಕವಾಗಿದೆ. ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಸುಪ್ರೀಂಕೋರ್ಟಗೆ ದಂಡೆತ್ತಿ ಹೋಗಿರುವುದು ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ. ಇದನ್ನು ತಿರುಚಿ ಹೇಳುವ ಕೆಲಸ ರಾಜ್ಯದಲ್ಲಿ ನಡೆಯುತ್ತಿದೆ. ಎಸ್‌ಐಆರ್‌ಗೆ ಸಂಬಂಧಿಸಿದಂತೆ ಖಾಸಗಿ ದೂರು ದಾಖಲು ಮಾಡುವ ಅಧಿಕಾರ ಇಲ್ಲ. ಇದು ಯಾವುದು ಆಗದೆ ಇಲ್ಲಿಯ ಕಾಂಗ್ರೆಸ್ ನಾಯಕರ ದೂರಿನ ಮೇಲೆ ಕೇಸ್ ದಾಖಲು ಮಾಡಲಾಗಿದ್ದು ಅದಕ್ಕೆ ಹೈಕೋರ್ಟ್ ತಡೆಯಾಜ್ಞೆ ಕೊಟ್ಟಿದೆ. ಎಸ್‌ಐಆರ್ ಸುಳ್ಳಾದರೆ ಎರಡೆರಡು ಕಡೆಗಳಲ್ಲಿ ಮತದಾನ ಹಕ್ಕು ಹೊಂದಿದವರಿಗೆ ಅವರು ಗೆದ್ದು ಬರುವ ಕ್ಷೇತ್ರಗಳಲ್ಲಿ ಸೋಲಬಹುದು ಎಂದು ಈ ರೀತಿ ಮಾಡುತ್ತಿದ್ದಾರೆ. ಪ್ರತಿಯೊಂದು ಹೆಜ್ಜೆಯಲ್ಲಿ ಗೊಂದಲ ಮಾಡುತ್ತಾ ಬಂದಿದೆ. ಅವರ ಗ್ಯಾರಂಟಿಗಳನ್ನು ನಿಲ್ಲಿಸಿ ಎರಡು ಮೂರು ತಿಂಗಳಾಗಿದೆ. ರೇಷನ್ ಕಾರ್ಡ ಪರಿಶೀಲನೆಗೆ ಆಧಾರ ಕಾಡ್ ಲಿಂಕ್ ಮಾಡಬೇಕೆಂದು ನಾವು ಕೊಟ್ಟ ಅಕ್ಕಿಯನ್ನು ತರಿಸಿಕೊಂಡು ಈಗ ಪರಿಷ್ಕರಣೆ ಮಾಡುತ್ತೇವೆ ಅಂತಾ ಹೇಳುತ್ತಿದ್ದಾರೆ. ಅವರ ಬೊಕ್ಕಸ ಖಾಲಿಯಾಗಿದೆ. ಹಿಂದೆ ಕಾಣದಂತಹ ಆರ್ಥಿಕ ಸಂಕಷ್ಟ ಎದುರಾಗಿದೆ. ಯಾವುದೇ ಇಲಾಖೆ ಗುತ್ತಿಗೆದಾರರನ್ನು ಕೇಳಿದರೆ ನಮ್ಮ ಬಿಲ್ ಆಗಿಲ್ಲವೆಂದು ಹೇಳಿದ್ದಾರೆ. ಇದರಿಂದ ಅಭಿವೃದ್ಧಿ ಕೆಲಸ ಸಂಪೂರ್ಣ ನಿಂತಿದೆ.

ಸ್ಟ್ರಿಂಗ್ ಆಪರೇಷನ್ ಆಗಿದೆ ಎಂದು ಸಿಎಂ ಹೇಳುತ್ತಾರೆ. ಅದನ್ನು ತನಿಖೆ ಮಾಡಿಸುವ ಬದಲಿಗೆ ಮಂತ್ರಿಗಳನ್ನು ಹೆದರಿಸುವ ಕೆಲಸ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕುರಿತು ಅವಹೇಳನಕಾರಿ ಸುದ್ದಿ ಪ್ರಸಾರ ಮಾಡದಂತೆ ಸಿದ್ದರಾಮಯ್ಯ ಕೋರ್ಟಗೆ ಹೋಗಿ ಸ್ಟೆ ತಂದಿರುವುದು ಬೇಸರವಾಗಿದೆ. ಇದಕ್ಕೆ ಆಡಳಿತ ಪಕ್ಷದ ಆಂತರಿಕ ಗುದ್ದಾಟವೆ ಕಾರಣ ಎಂದರು.

ಅಭ್ಯರ್ಥಿ ಪ್ರೊ.ಎಸ್.ವಿ. ಸಂಕನೂರ ಮಾತನಾಡಿ, ಕ್ಷೇತ್ರದಲ್ಲಿ ಎರಡು ಸುತ್ತಿನ ಪ್ರಚಾರ ಕೈಗೊಂಡಿದ್ದು ಕ್ಷೇತ್ರವ್ಯಾಪ್ತಿಯ 36 ತಾಲೂಕಿಗೆ ಭೇಟಿ ಮಾಡಿದ್ದೇನೆ. ಶಾಲಾ, ಕಾಲೇಜು, ಸರ್ಕಾರಿ ಇಲಾಖೆ, ಗ್ರಾಮಾಂತರ ಪ್ರದೇಶದ ನಿರುದ್ಯೋಗ ಪದವೀಧರರನ್ನು ಭೇಟಿ ಮಾಡಿ ಮತ ಯಾಚಿಸಿರುವೆ. ಮೋದಿಯವರು ಯುವಕರಿಗೆ ಸ್ವಯಂ ಉದ್ಯೋಗ ಪ್ರಾರಂಭ ಮಾಡಲು ಅನೇಕ ಯೋಜನೆಗಳನ್ನು ತಂದಿದ್ದಾರೆ. ರಾಜ್ಯದಲ್ಲಿ ನಾಲ್ಕು ಲಕ್ಷ ಹುದ್ದೆ ಖಾಲಿಯಾಗಿವೆ. ಅದನ್ನು ತುಂಬಲು ಸರ್ಕಾರಕ್ಕೆ ಒತ್ತಡ ಹೇರಲಾಗಿದೆ. ಖಾಸಗಿ ಕಂಪನಿಗಳಲ್ಲಿ ಕೆಲಸ ಕೊಡಲು ಆದೇಶಿ, ಈಭಾಗದ ಕಂಪನಿಗಳು, ಕಾರ್ಖಾನೆಗಳು ಮಾಡುವ ನಿರೀಕ್ಷೆ ಹೊಂದಿರುವೆ. ಮತದಾರರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಿಕೊಟ್ಟಿದ್ದೇನೆ. ಕ್ಷೇತ್ರದ ಎಲ್ಲ ಜಿಲ್ಲೆಗಳಲ್ಲಿಯೂ ಉದ್ಯೋಗ ಮೇಳ ನಡೆಸಿ ಉದ್ಯೋಗ ಕೊಡಿಸುವ ಕೆಲಸ ನಿರ್ವಹಿಸಿರುವೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ಶಿವರಾಜ ಸಜ್ಜನ, ಮುಖಂಡರುಗಳಾದ ಕೆ.ಶಿವಲಿಂಗಪ್ಪ, ಎಸ್.ಎಸ್. ರಾಮಲಿಂಗಣ್ಣನವರ, ಡಾ. ಬಸವರಾಜ ಕೇಲಗಾರ, ಭಾರತಿ ಜಂಬಗಿ, ಭೋಜರಾಜ ಕರೂದಿ, ಮಂಜುನಾಥ ಕಾಟಿ, ಸುಭಾಸ ಸಿರಿಗೇರಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವಾಹಿತೆ ಸಾವು: ಪತಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು
ಪದವೀಧರರ ಧ್ವನಿಯಾಗಲು ಸಂಕನೂರರಿಗೆ ಬೆಂಬಲ ನೀಡಿ: ರೂಪಾಲಿ ನಾಯ್ಕ