ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ರಾಜ್ಯ ಸರ್ಕಾರದಿಂದ ಉತ್ತಮ ಸ್ಪಂದನೆ: ವಿಪ ಸದಸ್ಯ ಡಾ. ಧನಂಜಯ ಸರ್ಜಿ

KannadaprabhaNewsNetwork |  
Published : Jan 15, 2026, 01:45 AM IST
ಪೊಟೊ: 14ಎಸ್‌ಎಂಜಿಕೆಪಿ08ಶಿವಮೊಗ್ಗ ನಗರದ ವಿಧಾನ ಪರಿಷತ್ ಕಾರ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿದರು. | Kannada Prabha

ಸಾರಾಂಶ

ವಿಧಾನ ಪರಿಷತ್ ಅಧಿವೇಶನದ ಸಂದರ್ಭದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ನಡೆಸಿದ ಚರ್ಚೆಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮಹತ್ವದ ಸುಧಾರಣೆಗಳನ್ನು ತಿದ್ದುಪಡಿ ಮಾಡಿ ಜಾರಿಗೆ ತಂದಿದೆ ಎಂದು ವಿಪ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಿಧಾನ ಪರಿಷತ್ ಅಧಿವೇಶನದ ಸಂದರ್ಭದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ನಡೆಸಿದ ಚರ್ಚೆಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮಹತ್ವದ ಸುಧಾರಣೆಗಳನ್ನು ತಿದ್ದುಪಡಿ ಮಾಡಿ ಜಾರಿಗೆ ತಂದಿದೆ ಎಂದು ವಿಪ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ರಾಜ್ಯದ ಸಣ್ಣ ಕ್ಲಿನಿಕ್ ಅಥವಾ ಆಸ್ಪತ್ರೆಗಳು ಬಹುಮಹಡಿ ಕಟ್ಟಡದ ಒಂದು ಭಾಗದಲ್ಲಿದ್ದರೂ ಇಡೀ ಕಟ್ಟಡಕ್ಕೆ ಅಗ್ನಿಶಾಮಕ ಇಲಾಖೆಯಿಂದ ಎನ್.ಒ.ಸಿ. ಪಡೆಯುವುದು ಕಡ್ಡಾಯವಾಗಿತ್ತು. ಹಳೆಯ ಅಗ್ನಿಸುರಕ್ಷತಾ ಮಾನದಂಡದ ಪ್ರಕಾರ ಶೇ.99ಕ್ಕೂ ಹೆಚ್ಚು ಆಸ್ಪತ್ರೆಗಳು ಪರವಾನಗಿ ಪಡೆಯಲು ಸಂಕಷ್ಟ ಎದುರಿಸುತ್ತಿದ್ದವು. ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘ, ಕೂಡ್ಲಿಗಿ ಶಾಸಕರಾದ ಡಾ.ಶ್ರೀನಿವಾಸ್ ಅವರು ಒಡಗೂಡಿ ನಾನು ನಡೆಸಿದ ಹೋರಾಟದ ಫಲವಾಗಿ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ಗೃಹ ಸಚಿವ ಜಿ.ಪರಮೇಶ್ವರ್ ಅವರು ಜಂಟಿ ಸಭೆ ನಡೆಸಿ ನಿಯಮಗಳನ್ನು ಸರಳೀಕರಿಸಿದ್ದಾರೆ ಎಂದರು.

ಅದರಂತೆ 20.99 ಮೀಟರ್‌ಗಿಂತ ಕಡಿಮೆ ಎತ್ತರವಿರುವ ಆಸ್ಪತ್ರೆಗಳಿಗೆ ಕನಿಷ್ಠ ಅಗ್ನಿ ಸುರಕ್ಷತಾ ಮಾನದಂಡ ನಿಗದಿಪಡಿಸಿ ಜನವರಿ 9, 2026ರಂದು ಆದೇಶ ಹೊರಡಿಸಲಾಗಿದೆ. ವಸತಿ ರಹಿತ 21 ಮೀಟರ್‌ಗಿಂತ ಕಡಿಮೆ ಎತ್ತರದ ಸಣ್ಣ ಕ್ಲಿನಿಕ್ ಹಾಗೂ ರಕ್ತನಿಧಿ ಕೇಂದ್ರಗಳು ಇನ್ನು ಮುಂದೆ ಅಗ್ನಿಶಾಮಕ ಇಲಾಖೆಯ ಬದಲು ಆರೋಗ್ಯ ಇಲಾಖೆ ಮಟ್ಟದಲ್ಲೇ ತಪಾಸಣೆಗೊಳಪಡಲಿವೆ ಮತ್ತು ನವೀಕರಣ ಶುಲ್ಕವನ್ನು ಕಟ್ಟಡದ ವಿಸ್ತೀರ್ಣಕ್ಕೆ ಅನುಗುಣವಾಗಿ ಪರಿಷ್ಕರಿಸಲಾಗಿದೆ. ರಾಜ್ಯದಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಸೇರಿ ಒಟ್ಟು 8,728 ಆಸ್ಪತ್ರೆಗಳಿವೆ, ಇವುಗಳಲ್ಲಿ 329 ಆಸ್ಪತ್ರೆಗಳು ಮಾತ್ರ ಫೈರ್ ಕ್ಲಿಯರೆನ್ಸ್ ಪಡೆದುಕೊಂಡಿದೆ. ಈ ಕಾನೂನು ತಿದ್ದುಪಡಿಯಿಂದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೂ ಅನುಕೂಲವಾಗಿಲಿದೆ ಎಂದರು.

ಶಿಕ್ಷಣ ಕ್ಷೇತ್ರದ ಸುಧಾರಣೆ ಕುರಿತು ಮಾತನಾಡಿದ ಶಾಸಕರು, ರಾಜ್ಯದ ಖಾಸಗಿ ವಿವಿಗಳು ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗಳಿಗೆ ಅತಿ ಹೆಚ್ಚು ಸೀಟುಗಳನ್ನು ಮೀಸಲಿಟ್ಟು ಸರ್ಕಾರಿ ಕಾಲೇಜುಗಳಲ್ಲಿ ಕೇವಲ ಶೇ.10ರಷ್ಟು ಮಾತ್ರ ಅವಕಾಶ ನೀಡುತ್ತಿರುವುದು ತಾರತಮ್ಯಕ್ಕೆ ಕಾರಣವಾಗಿತ್ತು. ಒಂದು ಖಾಸಗಿ ವಿವಿಯಲ್ಲಿ 4320 ಎಂಜಿನಿಯರಿಂಗ್ ಸೀಟುಗಳಿದ್ದು, ಅದರಲ್ಲಿ 4100 ಸೀಟುಗಳು ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗಳಿಗೆ ಮೀಸಲಿದೆ, ಆದರೆ ರಾಜ್ಯದ ಒಟ್ಟು ಸರ್ಕಾರಿ ಕಾಲೇಜುಗಳಲ್ಲಿ ಕೇವಲ 6495 ಸೀಟುಗಳಿದ್ದರೆ ಅದರಲ್ಲಿ ಕೇವಲ 700 ಸೀಟುಗಳು ಮಾತ್ರ ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗಳಿಗೆ ಮೀಸಲಿದೆ, ರಾಜ್ಯದಲ್ಲಿ ಖಾಸಗಿ ಮತ್ತು ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು 1,50,000 ಸೀಟುಗಳಿದ್ದರೆ ಅದರಲ್ಲಿ 1 ಲಕ್ಷ ಸೀಟುಗಳು ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗೆ ಇದೆ ಎಂಬ ಆಘಾತಕಾರಿ ವಿಷಯವನ್ನು ಗಮನ ಸೆಳೆದ ಪರಿಣಾಮವಾಗಿ ಇದನ್ನು ಗಂಭೀರವಾಗಿ ಪರಿಗಣಿಸಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಒಂದೇ ಕೋರ್ಸಿಗೆ ಅಧಿಕ ಸೀಟು ಪಡೆಯುವುದನ್ನು ನಿರ್ಬಂಧಿಸಲು ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಸೌಲಭ್ಯ ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಇದು ಖಾಸಗಿ ವಿವಿಗಳ ಹಾವಳಿಗೆ ಕಡಿವಾಣ ಹಾಕುವುದಲ್ಲದೆ, ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ವಿವಿಧ ಆರೋಗ್ಯ ಯೋಜನೆಗಳಡಿ ನೀಡಲಾಗುವ ಚಿಕಿತ್ಸಾ ದರಗಳ ತಾರತಮ್ಯ ನಿವಾರಣೆಯಲ್ಲಿ ಶಿವಮೊಗ್ಗ ಸಂಸದರಾದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನವನ್ನು ಶಾಸಕರು ಶ್ಲಾಘಿಸಿದರು.

ಸಂಸದರು ಸಂಸತ್ತಿನಲ್ಲಿ ಮತ್ತು ಕೇಂದ್ರ ಆರೋಗ್ಯ ಸಚಿವರಾದ ಜೆ.ಪಿ. ನಡ್ಡಾ ಅವರಲ್ಲಿ ಮಾಡಿದ ಮನವಿಯ ಫಲವಾಗಿ ಅ.13, 2025 ರಿಂದ ಅನ್ವಯವಾಗುವಂತೆ ದೇಶಾದ್ಯಂತ ಅಉಊS ದರಗಳನ್ನು ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಪರಿಷ್ಕರಿಸಲಾಗಿದೆ. ಸಿಸೇರಿಯನ್, ನಾರ್ಮಲ್ ಹೆರಿಗೆ ಮತ್ತು ಹಾರ್ಟ್ ಸರ್ಜರಿಗಳಂತಹ ಸುಮಾರು 2000 ವೈದ್ಯಕೀಯ ಪ್ರಕ್ರಿಯೆಗಳ ದರವನ್ನು ಹೆಚ್ಚಿಸಲಾಗಿದೆ. ನಗರಗಳನ್ನು ಟೈರ್-1, 2, 3 ಎಂದು ವಿಂಗಡಿಸಿ, ಆಸ್ಪತ್ರೆಗಳ ಮಾನ್ಯತೆ ಆಧಾರದ ಮೇಲೆ ದರ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಯಶಸ್ವಿನಿ ಮತ್ತು ಆಯುಷ್ಮಾನ್ ಭಾರತ್, ಜ್ಯೋತಿ ಸಂಜೀವಿನಿ, ಆರೋಗ್ಯ ಭಾಗ್ಯ , ಇ.ಎಸ್.ಐ. ಮತ್ತು ರಾಜ್ಯ ಸರ್ಕಾರದ ಆರೋಗ್ಯ ಯೋಜನೆಗಳಲ್ಲೂ ಈ ಪರಿಷ್ಕ್ರತ ದರವನ್ನು ಜಾರಿಗೆ ತರಲು ಸರ್ಕಾರಕ್ಕೆ ಒತ್ತಾಯಿಸಿದ್ದೀನಿ ಇದರ ಪರಿಣಾಮವಾಗಿ ಸರ್ಕಾರ ರಾಜ್ಯದಲ್ಲಿ ಜಾರಿಗೆ ತರುವ ಪ್ರಕ್ರಿಯೆಲ್ಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್.ಕೆ. ಜಗದೀಶ್, ನಗರ ಬಿಜೆಪಿ ಅಧ್ಯಕ್ಷರಾದ ಮೋಹನ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್ , ಎಚ್.ಸಿ. ಮಾಲತೇಶ್, ಮುಖಂಡರಾದ ಶಿವರಾಜ್ ಮತ್ತು ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ ಎಸ್. ಚಂದ್ರಶೇಖರ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ