ಪಹಣಿಗೆ ಆಧಾರ್‌ ಜೋಡಣೆಗೆ ಕಲಬುರಗಿಯಲ್ಲಿ ಉತ್ತಮ ಸ್ಪಂದನೆ

KannadaprabhaNewsNetwork |  
Published : Jul 25, 2024, 01:21 AM IST
ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ | Kannada Prabha

ಸಾರಾಂಶ

ನಕಲಿ ದಾಖಲೆ ಸೃಷ್ಠಿಸಿ ನಡೆಯುವ ಮೋಸದ ವ್ಯವಹಾರಗಳಿಗೆ ಕಡಿವಾಣ ಹಾಕಲು ರಾಜ್ಯದಲ್ಲಿ ಪಹಣಿಗೆ ಆಧಾರ್ ಜೋಡಣೆ ಮಾಡುವ ಕೆಲಸ ಚಾಲ್ತಿಯಲ್ಲಿದೆ, ಜಿಲ್ಲೆಯಲ್ಲಿ ಇದೂವರೆಗೆ 4.77 ಲಕ್ಷ ಪಹಣಿಗೆ ಆಧಾರ್ ಸೀಡಿಂಗ್ ಮಾಡಿದ್ದು, ಶೇ.67ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಕಲಬುರಗಿ

ಪಹಣಿಗೆ ಆಧಾರ್‌ ಜೋಡಣೆಯಿಂದ ಮೋಸದ ವ್ಯವಹಾರಗಳಿಗೆ ಮೂಗುದಾರ ಹಾಕುವ ದಿಶೆಯಲ್ಲಿ ಕಂದಾಯ ಇಲಾಖೆ ಹೊಸ ಹೆಜ್ಜೆ ಇಟ್ಟಿದೆ.

ನಕಲಿ ದಾಖಲೆ ಸೃಷ್ಠಿಸಿ ನಡೆಯುವ ಮೋಸದ ವ್ಯವಹಾರಗಳಿಗೆ ಕಡಿವಾಣ ಹಾಕಲು ರಾಜ್ಯದಲ್ಲಿ ಪಹಣಿಗೆ ಆಧಾರ್ ಜೋಡಣೆ ಮಾಡುವ ಕೆಲಸ ಚಾಲ್ತಿಯಲ್ಲಿದೆ, ಜಿಲ್ಲೆಯಲ್ಲಿ ಇದೂವರೆಗೆ 4.77 ಲಕ್ಷ ಪಹಣಿಗೆ ಆಧಾರ್ ಸೀಡಿಂಗ್ ಮಾಡಿದ್ದು, ಶೇ.67ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದ್ದಾರೆ.

ಬುಧವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಎರಡೂವರೆ ತಿಂಗಳಿನಿಂದ ಗ್ರಾಮ ಆಡಳಿತಾಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ 8,76,177 ಪಹಣಿ ಪೈಕಿ 4.77 ಲಕ್ಷ ಪಹಣಿಗೆ ಆಧಾರ್ ಜೋಡಣೆ ಮಾಡಿದ್ದಾರೆ. ಗ್ರಾಮ ಭೇಟಿ ಸಂದರ್ಭದಲ್ಲಿ 41,489 ಜಮೀನು ಭೂ ಪರಿವರ್ತನೆಯಾದರೆ, 67,375 ಪಹಣಿಗಳ ಮಾಲೀಕರು ನಿಧನರಾಗಿರುವುದು ಬೆಳಕಿಗೆ ಬಂದಿದೆ. ಉಳಿದ ಜೋಡಣೆ ಕಾರ್ಯ ಇದೇ ಜುಲೈ ಮಾಸಾಂತ್ಯಕ್ಕೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.

ಆಧಾರ್ ಜೋಡಣೆ ಕಡ್ಡಾಯವಲ್ಲವಾದರು ಜೋಡಣೆ ಮಾಡಿಕೊಳ್ಳುವುದರಿಂದ ಆಸ್ತಿಗಳ ಗ್ಯಾರಂಟಿ ಭೂಮಾಲಿಕರಿಗೆ ಸಿಗಲಿದೆ. ಇದರಿಂದ ಆಸ್ತಿಯನ್ನು ಮೋಸ, ವಂಚನೆ ಮೂಲಕ ಅವ್ಯವಹಾರ ತಡೆಯಲು ಸಾಧ್ಯವಾಗಲಿದೆ. ಸರ್ಕಾರಿ ಸೌಲಭ್ಯ, ಬೆಳೆ ಪರಿಹಾರ ನೇರವಾಗಿ ರೈತರಿಗೆ ದೊರಕಲಿದೆ. ಗ್ರಾಮ ಆಡಳಿತಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಓ.ಟಿ.ಪಿ. ಎಸ್.ಎಂ.ಎಸ್. ಮೂಲಕ ಮಾಲೀಕರನ್ನು ಖಾತ್ರಿಪಡಿಸಿಕೊಂಡು ಅವರ ಭಾವಚಿತ್ರ ಸೆರೆಹಿಡಿದು ಸ್ಥಳದಲಿಯೇ ಆಧಾರ್ ಜೋಡಣೆ ಮಾಡಲಿದ್ದಾರೆ. ಕಂದಾಯ ಇಲಾಖೆಯ ಈ ಹೊಸ ಯೋಜನೆಗೆ ರೈತಾಪಿ ವರ್ಗ ಅಗತ್ ಮಾಹಿತಿ ನೀಡಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಜಿಲ್ಲೆಯ ತಾಲೂಕಾವಾರು ಅಂಕಿ-ಸಂಖ್ಯೆ ಗಮನಿಸಿದಲ್ಲಿ ಚಿತ್ತಾಪುರ 71,906, ಕಮಲಾಪುರ 54,909, ಚಿಂಚೋಳಿ 86,379, ಕಲಬುರಗಿ 95,386, ಶಹಾಬಾದ 20,813, ಕಾಳಗಿ 66182, ಸೇಡಂ 1,17,231, ಆಳಂದ 1,38,526, ಅಫಜಲಪೂರ 92,741, ಜೇವರ್ಗಿ 77,566 ಹಾಗೂ ಯಡ್ರಾಮಿಯಲ್ಲಿ 54,538 ಪಹಣಿಗೆ ಆಧಾರ್ ಜೋಡಣೆ ಮಾಡಲಾಗಿದೆ. ರಾಜ್ಯದ ಸರಾಸರಿ ಆಧಾರ್ ಸೀಡಿಂಗ್ ಶೇ.63 ಇದ್ದರೆ, ಜಿಲ್ಲೆಯ ಪ್ರಮಾಣ ಶೇ.67ರಷ್ಟಿದೆ ಎಂದರು.

ಆಗಸ್ಟ್ 15 ರಿಂದ ಪೌತಿ ಖಾತೆ ಅಭಿಯಾನ:

ಆರ್.ಟಿ.ಸಿ. ಮಾಲೀಕರ ಮರಣ ಪ್ರಕರಣಗಳಲ್ಲಿ ಆಸ್ತಿಯನ್ನು ಅವರ ಕುಟುಂಬಸ್ಥರ ಅಥವಾ ವಾರಸುದಾರರ ಹೆಸರಿನಲ್ಲಿ ವರ್ಗಾಯಿಸಲು ಬರುವ ಆಗಸ್ಟ್-15 ರಿಂದ ಜಿಲ್ಲೆಯಾದ್ಯಂತ ಪೌತಿ ಖಾತೆ ಅಭಿಯಾನ ನಡೆಸಲಾಗುವುದು. ಡಿಸ್ಪೂಟ್, ಕಂದಾಯ ನ್ಯಾಯಾಲಯ, ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳಲ್ಲಿ ನ್ಯಾಯಾಲಯದ ಅಂತಿಮ ತೀರ್ಪಿನ ಪ್ರಕಾರ ಮುಂದಿನ ಕ್ರಮ ವಹಿಸಲಾಗುತ್ತದೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಸ್ಪಷ್ಟಪಡಿಸಿದರು.

ಶೇ.94ರಷ್ಟು ಬಿತ್ತನೆ: ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗ್ಗಿಂತ ಶೇ.45ರಷ್ಟು ಹೆಚ್ಚಿನ ಮಳೆಯಾಗಿದ್ದು, ಇದೂವರೆಗೆ ಶೇ.94ರಷ್ಟು ಬಿತ್ತನೆ ಕಾರ್ಯ ಮುಗಿದಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಮಾಡಿಸಲು ಇದೇ ಜುಲೈ 31 ಕೊನೆ ದಿನವಾಗಿದ್ದು, ಜಿಲ್ಲೆಯ ಅನ್ನದಾತರು ಶೇ.10ರಂತೆ ಪ್ರೀಮಿಯಮ್ ಹಣ ಪಾವತಿಸಿ ಕೂಡಲೆ ನೊಂದಣಿ ಮಾಡಿಸಿಕೊಳ್ಳಬೇಕೆಂದು ಮನವಿ ಮಾಡಿದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನೊಂದಣಿ ಮಾಡಿಸಿದಲ್ಲಿ ಅತಿವೃಷ್ಠಿ, ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಬೆಳೆ ಪರಿಹಾರ ದೊರಕಲಿದೆ. ಒಟ್ಟಾರೆ 3 ಲಕ್ಷ ಬೆಳೆ ವಿಮೆ ನೋಂದಣಿ ಗುರಿ ಹೊಂದಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''