ಮುಂಡರಗಿ: ನಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು, ಮೌಲ್ಯ ಹಾಗೂ ಸಂಸ್ಕಾರವನ್ನು ಕಲಿತುಕೊಳ್ಳಲು ಉತ್ತಮ ಶಾಲೆಗಳು ಅಗತ್ಯ ಶಿವಮೊಗ್ಗದ ಹೆಸರಾಂತ ರಂಗ ಕಲಾವಿದೆ, ರಾಜ್ಯ ಸಂಪನ್ಮೂಲ ಶಿಕ್ಷಕಿ ಲಕ್ಷ್ಮಿಎಸ್. ಹೇಳಿದರು.
ಅವರು ಶುಕ್ರವಾರ ಸಂಜೆ ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2024-25ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಹಾಗೂ ಮಕ್ಕಳ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿ ಮಾತನಾಡಿದರು.ಸಮುದಾಯ ಹಾಗೂ ಶಿಕ್ಷಕರ ಕೈಜೋಡಿಸುವಿಕೆಯಿಂದ ಮುಂಡರಗಿ ರಾಮೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಒಂದು ಮಾದರಿ ಶಾಲೆಯಾಗಿ ಬೆಳೆದು ನಿಂತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಹಾಡು ನೃತ್ಯ, ನಾಟಕ, ಚಿತ್ರಕಲೆ ಸೇರಿದಂತೆ ಎಲ್ಲ ಕಲೆಗಳು ನಮ್ಮನ್ನು ಬೆಳೆಸುತ್ತದೆ. ನಮ್ಮನ್ನು ಉಳಿಸುತ್ತವೆ. ಇಲ್ಲಿನ ಶಿಕ್ಷಕರು ರಾಮೇನಹಳ್ಳಿಯ ಈ ಶಾಲೆಯನ್ನು ನೋಡುಗರ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ. ರಂಗ ವೇದಿಕೆ, ರಂಗದಂಗಳ, ಕಾಂಪೌಂಡ್ ಗೋಡೆಯ ಚಿತ್ರಗಳು, ಶಾಲಾ ಗ್ರಂಥಾಲಯವೂ ಸೇರಿದಂತೆ ಮಕ್ಕಳಿಗೆ ಒದಗಿಸುತ್ತಿರುವ ವಿವಿಧ ಸೌಲಭ್ಯಗಳನ್ನು ನೋಡಿದರೆ ಇದೊಂದು ಉತ್ತಮ ಸರ್ಕಾರಿ ಶಾಲೆಯಾಗಿ ಹೊರ ಹೊಮ್ಮಿದೆ ಎಂದರು. ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಒಂದೂವರೆ ವರ್ಷದಲ್ಲಿ ಈ ಶಾಲೆಯ ಕಡೆ ಎಲ್ಲರ ಗಮನ ಸೆಳೆಯುವಂತಾಗಿದೆ. ಡಾ. ನಿಂಗು ಸೊಲಗಿಯವರು ಇದ್ದಲ್ಲಿ ಇಂಥ ಮ್ಯಾಜಿಕ್ ನಡೆಯುತ್ತದೆ. ತಮ್ಮೆಲ್ಲ ಶಿಕ್ಷಕರನ್ನು ಸೇರಿಸಿಕೊಂಡು ದಾನಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳವ ಮೂಲಕ ಸರ್ಕಾರಿ ಶಾಲೆಯನ್ನು ಸಮುದಾಯದ ಶಾಲೆಯಾಗಿ ಮಾರ್ಪಡಿಸುತ್ತಾರೆ. ಈ ಹಿಂದೆ ಪಟ್ಟಣದ ಎಸ್.ಎಂ.ಭೂಮರಡ್ಡಿ ಸರ್ಕಾರಿ ಶಾಲೆ, ಇದೀಗ ರಾಮೇನಹಳ್ಳಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ. ಕೈಜೋಡಿಸಿದ ಶಿಕ್ಷಕರಿಗೆ ದಾನಿಗಳಿಗೆ ಅಭಿನಂದಿಸುವೆ ಎಂದರು.
ದಾನಿಗಳಾದ ಲಕ್ಷ್ಮಿದೇವಿ ಪರಶುರಾಮ ಜಂಬಗಿ ಮಾತನಾಡಿ, ತಂದೆ ತಾಯಿ ಸದಾ ಖುಷಿಯಿಂದ ಹೆಮ್ಮೆ ಪಡಬೇಕಾದರೆ ಶಾಲೆಯಲ್ಲಿ ಮಕ್ಕಳು ಚನ್ನಾಗಿ ಓದಬೇಕು. ಶಿಕ್ಷಕ, ಪಾಲಕ ಹಾಗೂ ಮಕ್ಕಳಲ್ಲಿ ಹೊಂದಾಣಿಕೆ ಇದ್ದಾಗ ಮಾತ್ರ ಇಂತಹ ಅಭಿವೃದ್ಧಿ ಕೆಲಸಗಳಾಗುತ್ತವೆ ಎಂದರು. ಶಾಲಾ ಮುಖ್ಯೋಪಾಧ್ಯಾಯ ಡಾ. ನಿಂಗು ಸೊಲಗಿ ಮಾತನಾಡಿ, ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದಿಸಿದರು. ಈ ಶಾಲಾ ಅಭಿವೃದ್ಧಿಗಾಗಿ ಈ ಗ್ರಾಮದ ಅನೇಕ ಹಿರಿಯರು, ಯುವಕ ಮಿತ್ರರು ಎಲ್ಲರೂ ಸೇರಿ ತನು, ಮನ, ಧನದಿಂದ ಸಹಾಯ ಸಹಕಾರ ಮಾಡಿದ್ದರಿಂದಾಗಿ ಇಂದು ಈ ಶಾಲೆ ಅಭಿವೃದ್ದಿ ಪಥದತ್ತ ಮುನ್ನಡೆದಿದೆ. ನನ್ನ ವೃತ್ತಿ ಬಂಧುಗಳ ಸಹಕಾರದಲ್ಲಿ ವರ್ಷ ಪೂರ್ತಿ ಶಾಲೆಯಲ್ಲಿ ಮಕ್ಕಳಿಗಾಗಿ ಕಾರ್ಯಕ್ರಮ ಮಾಡಿದ್ದೇವೆ ಎಂದರು. ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಗ್ರಾಮೀಣ ಸೇವಾ ರತ್ನ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ.ಎಂ.ಲಾಂಡೆ, ತಾಲೂಕು ಮಟ್ಟದ ಉತ್ತಮ ಅಡುಗೆ ತಯಾರಕರು ಪ್ರಶಸ್ತಿ ಪುರಸ್ಕೃತರಾದ ಸುಶೀಲಾ ಕೃಷ್ಣಪ್ಪ ವಾಲಿಕಾರ ಹಾಗೂ ಗ್ರಾಮದ ಎಲ್ಲ ದಾನಿಗಳಿಗೂ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಶಿಕ್ಷಕ ಪಿ.ಎಂ.ಲಾಂಡೆ ಮಾತನಾಡಿದರು.ಎಸ್‌ಡಿಎಂಸಿ ಅಧ್ಯಕ್ಷ ಮಹೇಶ ಬಾಗಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯರಾದ ದೇವಕ್ಕ ದಂಡಿನ, ಲಿಂಗರಾಜಗೌಡ ಪಾಟೀಲ, ನಾಗರಾಜ ಹೊಂಬಳಗಟ್ಟಿ, ಪರಶುರಾಮ ಜಂಬಗಿ, ಬಸವರಾಜ ತಿಗರಿ, ಚಂದ್ರಪ್ಪ ಗದ್ದಿ, ದೊಡ್ಡೆಲ್ಲಪ್ಪ ಜಂಬಗಿ, ಶಿಕ್ಷಕಿಯರಾದ ಪಿ.ಆರ್. ಗಾಡದ, ಶಿವಲೀಲಾ ಅಬ್ಬಿಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕರಾದ ಮಂಜುನಾಥ ಗುಗ್ಗರಿ ಹಾಗೂ ಪಿ.ಎಂ. ಲಾಂಡೆ ನಿರೂಪಿಸಿದರು. ಬಿ.ಎಚ್. ಹಲವಾಗಲಿ ವಂದಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.