ಅರ್ಜಿ ವಿಲೇಯಲ್ಲಿ ಜಿಲ್ಲಾಡಳಿತದಿಂದ ಉತ್ತಮ ಕಾರ್ಯ: ನಲಿನ್ ಅತುಲ್

KannadaprabhaNewsNetwork | Published : Aug 28, 2024 12:52 AM

ಸಾರಾಂಶ

ಈವರೆಗಿನ ಜನಸ್ಪಂದನಾ ಕಾರ್ಯಕ್ರಮದ ಒಟ್ಟು 1770 ಅರ್ಜಿಗಳ ಪೈಕಿ 1582 ಅರ್ಜಿ ವಿಲೇಗೊಳಿಸಿ ಜಿಲ್ಲಾಡಳಿತವು ಉತ್ತಮ ಕಾರ್ಯ ಮಾಡಿದೆ. ಬಾಕಿ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತಿದೆ.

ಅಳವಂಡಿ ಗ್ರಾಮದಲ್ಲಿ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಈವರೆಗಿನ ಜನಸ್ಪಂದನಾ ಕಾರ್ಯಕ್ರಮದ ಒಟ್ಟು 1770 ಅರ್ಜಿಗಳ ಪೈಕಿ 1582 ಅರ್ಜಿ ವಿಲೇಗೊಳಿಸಿ ಜಿಲ್ಲಾಡಳಿತವು ಉತ್ತಮ ಕಾರ್ಯ ಮಾಡಿದೆ. ಬಾಕಿ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ತಿಳಿಸಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಇವುಗಳ ಆಶ್ರಯದಲ್ಲಿ ತಾಲೂಕಿನ ಅಳವಂಡಿ ಗ್ರಾಮದ ಹಲವಾಗಲಿ ರಸ್ತೆಯಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

2023ರ ಸೆಪ್ಟೆಂಬರ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಅಕ್ಟೋಬರ್‌ನಲ್ಲಿ ಗಂಗಾವತಿ ಮತ್ತು ಡಿಸೆಂಬರ್‌ನಲ್ಲಿ ಕುಷ್ಟಗಿಯಲ್ಲಿ, 2024ರ ಫೆಬ್ರವರಿಯಲ್ಲಿ ಚಿಕ್ಕವಂಕಲಕುಂಟದಲ್ಲಿ, ಜೂನ್‌ದಲ್ಲಿ ಕನಕಗಿರಿಯಲ್ಲಿ, ಜುಲೈನಲ್ಲಿ ಮಂಗಳೂರ ಗ್ರಾಮದಲ್ಲಿ ಮತ್ತು ಆಗಸ್ಟ್‌ನಲ್ಲಿ ಸಿದ್ದಾಪುರ ಗ್ರಾಮದಲ್ಲಿ ನಡೆಸಿದ ಜನಸ್ಪಂದನಾ ಕಾರ್ಯಕ್ರಮಗಳಲ್ಲಿ ಸ್ವೀಕೃತಿಯಾದ ಒಟ್ಟು 1770 ಅರ್ಜಿಗಳ ಪೈಕಿ 1582 ಅರ್ಜಿಗಳನ್ನು ವಿಲೇಗೊಳಿಸಿ ಜಿಲ್ಲಾಡಳಿತವು ಉತ್ತಮ ಕಾರ್ಯ ಮಾಡಿದೆ ಎಂದರು.

ಅಹವಾಲು ಸ್ವೀಕಾರ:

ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ತಹಸೀಲ್ದಾರ ವಿಠ್ಠಲ್ ಚೌಗಲಾ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಸಾರ್ವಜನಿಕರ ಅಹವಾಲು ಆಲಿಸಿದರು.

ಕಾರ್ಯಕ್ರಮದ ನಿಮಿತ್ತ ಸ್ಥಳದಲ್ಲಿ ಅರ್ಜಿಗಳ ಸ್ವೀಕೃತಿಗೆ ವ್ಯವಸ್ಥೆ ಮಾಡಲಾಗಿತ್ತು. ಸ್ವೀಕೃತವಾದ ಅರ್ಜಿಗಳ ವಿವರವನ್ನು ಏಕಕಾಲಕ್ಕೆ ರಿಜಿಸ್ಟರ್‌ನಲ್ಲಿ ಮತ್ತು ಐಪಿಜಿಆರ್ ಎಸ್ ಪೋರ್ಟಲ್‌ನಲ್ಲಿ ಅಳವಡಿಸುವ ವ್ಯವಸ್ಥೆ ಮಾಡಲಾಗಿತ್ತು.

ಕೊಪ್ಪಳ-ಮುಂಡರಗಿ ಮಧ್ಯೆದ ರಸ್ತೆ ಸೇರಿದಂತೆ ಬೇರೆ ಬೇರೆ ರಸ್ತೆಗಳನ್ನು ಮೊದಲಾದ್ಯತೆಯ ಮೇರೆಗೆ ಸರಿಪಡಿಸಬೇಕು. ವಿವಿಧೆಡೆಯ ಶಾಲೆಗಳಲ್ಲಿನ ಬಿಸಿ ಊಟದ ಕೋಣೆ ಸರಿಪಡಿಸಬೇಕು ಎನ್ನುವುದು ಸೇರಿದಂತೆ ಒಟ್ಟು 192 ಅರ್ಜಿಗಳು ಸ್ವೀಕೃತವಾದವು.

ಅಳವಂಡಿ ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಹನುಮಪ್ಪ ಜೋಗಿನ, ಶಾರಮ್ಮ ರಾಮಣ್ಣ ಈಳಗೇರ, ಸಿಪಿಐ ಸುರೇಶ, ಪಿಎಸ್ ಐ ಶ್ರೀ ಪ್ರಹ್ಲಾದ್ ನಾಯಕ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.ರೈತರೊಂದಿಗೆ ಊಟ:

ಮಧ್ಯಾಹ್ನ ವೇಳೆಗೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರೊಂದಿಗೆ ಬೆಳಗಟ್ಟಿ ಗ್ರಾಮದ ಸಾವಯವ ಕೃಷಿಕ ಮಲ್ಲಪ್ಪ ಡಂಬಳ ಅವರ ತೋಟಕ್ಕೆ ತೆರಳಿ ರೈತರೊಂದಿಗೆ ಊಟ ಮಾಡಿದರು. ಸಜ್ಜಿರೊಟ್ಟಿ, ತರಕಾರಿ ಪಲ್ಯ, ಪಾಯಸ ಸೇರಿದಂತೆ ಸಿರಿ ಧಾನ್ಯಗಳಿಂದ ಅಡುಗೆ ಸಿದ್ಧಪಡಿಸಿ ಬಡಿಸಿದ್ದು ವಿಶೇಷವಾಗಿತ್ತು.

ಪ್ರಾತ್ಯಕ್ಷಿಕೆ ವೀಕ್ಷಣೆ:

ಗ್ರಾಮ ಭೇಟಿ ವೇಳೆ ಜಿಲ್ಲಾಧಿಕಾರಿ ಇಪ್ಕೊ ನ್ಯಾನೋ ರಸಗೊಬ್ಬರಗಳ ವಿಚಾರ ಸಂಕಿರಣ ಮತ್ತು ಡ್ರೋಣ ಪ್ರಾತ್ಯಕ್ಷಿಕೆಯ ವೀಕ್ಷಣೆ ನಡೆಸಿದರು. ವೀಣಾ ಮೌನೇಶ ಕಮ್ಮಾರ ಡ್ರೋಣ ಪೈಲಟ್ ಚಲಾಯಿಸಿ ಬೆಳೆಗೆ ಔಷಧಿ ಸಿಂಪಡಣೆ ಮಾಡಿದರು.ವಸತಿ ನಿಲಯಕ್ಕೆ ಭೇಟಿ:

ಅಳವಂಡಿ ಗ್ರಾಮದಲ್ಲಿನ ಬಿಸಿಎಂ ಇಲಾಖೆಯ ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ಮಹಿಳೆಯರ ವಸತಿ ನಿಲಯಕ್ಕೆ ಸಹ ಜಿಲ್ಲಾಧಿಕಾರಿ ಭೇಟಿ ನೀಡಿದರು. ಪ್ರತಿದಿನದ ಊಟದ ವಿವರ, ಭಾನುವಾರದ ಊಟ, ಪುಸ್ತಕ ವಿತರಣೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು. ಸಮಯದ ಮಹತ್ವ ಅರಿತು ವಿದ್ಯಾಭ್ಯಾಸ ನಡೆಸುವಂತೆ ಜಿಲ್ಲಾಧಿಕಾರಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಮ್ಯಾನೇಜಮೆಂಟ್ ಸಮಿತಿ ಸೇರಿದಂತೆ ನಾನಾ ವ್ಯವಸ್ಥೆ ಕಲ್ಪಿಸಲು ತಾಲೂಕು ಅಧಿಕಾರಿ ನಾಗರತ್ನ ಮತ್ತು ವಾರ್ಡನ್ ಮೀನಾಕ್ಷಿ ಅವರಿಗೆ ನಿರ್ದೇಶನ ನೀಡಿದರು.ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ:

ಗ್ರಾಮ ಸಂಚಾರದ ನಂತರ ಜಿಲ್ಲಾಧಿಕಾರಿ ಪುನಃ ಅಂಬೇಡ್ಕರ್ ಭವನಕ್ಕೆ ತೆರಳಿ ಸಾರ್ವಜನಿಕರ ಅಹವಾಲು ಆಲಿಸಿದರು. ಬಳಿಕ ಅಳವಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಗೆ ಮಂಜೂರಾದ ಹುದ್ದೆಗಳು, ಆಸ್ಪತ್ರೆಯಲ್ಲಿನ ವೈದ್ಯಕೀಯ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಗರ್ಭಿಣಿಯರ ನೋಂದಣಿ, ಮಕ್ಕಳ ಚಿಕಿತ್ಸಾ ನೋಂದಣಿಯನ್ನು ಪರಿಶೀಲನೆ ಮಾಡಿದರು. ತಾಲೂಕು ಆರೋಗ್ಯಾಧಿಕಾರಿ ರಾಮಾಂಜನೇಯ ಸೇರಿದಂತೆ ಇತರರು ಇದ್ದರು.

Share this article