ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಈ ಹಿಂದೆ ೪೦ ಎಕರೆ ಜಾಗ ಭೂಸ್ವಾಧೀನವಾಗಿತ್ತು. ಪ್ರಸ್ತುತ ೨೦ ಎಕರೆ ಮಾತ್ರ ಸ್ವಾಧೀನದಲ್ಲಿದೆ. ಉಳಿದ ಜಾಗದಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿಕೊಂಡಿರುವುದನ್ನು ತೆರವುಗೊಳಿಸುವಂತೆ ರೈತಸಂಘ, ಕರ್ನಾಟಕ ರಾಷ್ಟ್ರಸಮಿತಿ, ಕರುನಾಡ ಸೇವಕರು ಸಂಘಟನೆಯವರು ಮನವಿ ಮಾಡಿದ್ದರು.
ಈ ಮನವಿಯ ಆಧಾರದ ಮೇಲೆ ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ಕಳೆದ ಜುಲೈ ೧ ರಂದು ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಮಿಮ್ಸ್ ನಿರ್ದೇಶಕರು, ಜಿಲ್ಲಾಧಿಕಾರಿ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂ ದಾಖಲೆಗಳ ಉಪ ನಿರ್ದೇಶಕರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾರ್ಯಪಾಲಕ ಅಭಿಯಂತರರು, ಪೌರಾಯುಕ್ತರು, ತಹಸೀಲ್ದಾರ್, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಮಿಮ್ಸ್ ಮುಖ್ಯ ಆಡಳಿತಾಧಿಕಾರಿ ನೇತೃತ್ವದ ಸಮಿತಿ ರಚನೆ ಮಾಡಲಾಗಿತ್ತು.ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ನೇತೃತ್ವದ ತಂಡ ಆಸ್ಪತ್ರೆ ಜಾಗಕ್ಕೆ ಭೇಟಿ ನೀಡಿ ಎಲ್ಲಿಂದ ಎಲ್ಲಿಯವರೆಗೆ ಒತ್ತುವರಿಯಾಗಿರಬಹುದೆಂಬ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿತು.
ಗೂಗಲ್ ಸರ್ವೇ ನಡೆಸುವ ಮೂಲಕ ಆಸ್ಪತ್ರೆ ಜಾಗ ಎಷ್ಟಿದೆ ಎಂಬ ಬಗ್ಗೆ ಮೊದಲು ಗಡಿ ಗುರುತಿಸಲಾಗುವುದು. ನಂತರ ಆ ಗಡಿಯೊಳಗೆ ಇರುವವರಿಗೆ ಕಾನೂನುಬದ್ಧವಾಗಿ ನೋಟೀಸ್ ಜಾರಿಗೊಳಿಸಲಾಗುವುದು. ಜಾಗದ ಒಡೆತನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗುವುದು. ದಾಖಲೆಗಳನ್ನೆಲ್ಲಾ ಪರಿಶೀಲನೆ ನಡೆಸಿದ ಬಳಿಕ ಎಷ್ಟು ಜಾಗ ಒತ್ತುವರಿಯಾಗಿದೆ ಎಂಬ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಮಿತಿ ವರದಿ ಸಲ್ಲಿಸಲಿದೆ. ಆನಂತರ ಜಿಲ್ಲಾಧಿಕಾರಿಗಳು ವರದಿ ಆಧರಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಪೌರಾಯುಕ್ತೆ ಯು.ಪಿ.ಪಂಪಾಶ್ರೀ, ಎಇಇ ರವಿಕುಮಾರ್, ಮಿಮ್ಸ್ ನಿರ್ದೇಶಕ ನರಸಿಂಹಸ್ವಾಮಿ, ತಹಸೀಲ್ದಾರ್ ವಿಶ್ವನಾಥ್, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಸಹಾಯಕ ನಿರ್ದೇಶಕರು, ಸರ್ವೇಯರ್‌ಗಳು ಹಾಜರಿದ್ದರು.