ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಶಾಸಕ ದಿ.ಗೋಪಾಲ ಭಂಡಾರಿ ಅವರ 6ನೇ ಪುಣ್ಯಸ್ಮರಣೆ ಕಾರ್ಕಳ ದೇವಾಡಿಗ ಸುಧಾರಕ ಸಂಘದ ಸಭಾಂಗಣದಲ್ಲಿ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು, ದಿ. ಗೋಪಾಲ ಭಂಡಾರಿ ಶಾಸಕರಾಗಿ, ಭೂ ಸುಧಾರಣಾ ಮಸೂದೆ ಜಾರಿ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳಲ್ಲಿ ಮುಂದಾಳತ್ವ ವಹಿಸಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಅವರ ರಾಜಕೀಯ ಬದುಕು ಇಂದಿನ ಪೀಳಿಗೆಯ ಯುವರಾಜಕಾರಣಿಗಳಿಗೆ ಮಾದರಿಯಾಗಿರಬೇಕು ಎಂದರು.ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರ ಜನಪರ ಕಾರ್ಯಶೈಲಿಯನ್ನು ಭಂಡಾರಿ ಜನರ ಕೈಗೆ ತಲುಪಿಸಿದ ವ್ಯಕ್ತಿ ಎಂದು ಹೇಳಿ, ಕಾರ್ಕಳ-ಹೆಬ್ರಿ ತಾಲೂಕು ಸ್ಥಾಪನೆಗಾಗಿ ವಿಧಾನಸಭೆಯಲ್ಲಿ ಗಟ್ಟಿಯಾಗಿ ಧ್ವನಿ ಎತ್ತಿದ ಅವರನ್ನು ಸ್ಮರಿಸಿದರು.
ಹಿರಿಯ ನ್ಯಾಯವಾದಿ ಶೇಖರ ಮಡಿವಾಳ, ಅಕ್ರಮ ಸಕ್ರಮ, 94ಸಿ, ಸಿಸಿ ಯೋಜನೆ, ಆಶ್ರಯ ಹೌಸಿಂಗ್, ಶಿಕ್ಷಣ-ಆರೋಗ್ಯ ಹಠಾತ್ ಸಬಲೀಕರಣ ಇವುಗಳಲ್ಲಿ ಭಂಡಾರಿಯವರ ಪಾತ್ರ ಸ್ಮರಣೀಯ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್, ತಮ್ಮ ಭಾಷಣದಲ್ಲಿ ಗೋಪಾಲ ಭಂಡಾರಿ ಅವರನ್ನು ‘ಯುವ ಜನತೆಗೆ ಪ್ರೇರಕ’ ಎಂದು ಶ್ಲಾಘಿಸಿದರು.ಕಾರ್ಯಕ್ರಮದಲ್ಲಿ 82 ಯುನಿಟ್ ರಕ್ತದಾನ ಗೈದ ದಾನಿಗಳಿಗೆ ಸಸಿ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಜೊತೆಗೆ ಜರಿಗುಡ್ಡೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಆರ್ಥಿಕ ಸಹಾಯಧನ ವಿತರಿಸಲಾಯಿತು.ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ, ಮಂಜುನಾಥ ಪೂಜಾರಿ ಮುದ್ರಾಡಿ, ಸುಧಾಕರ ಕೋಟ್ಯಾನ್, ಜಾರ್ಜ್ ಕ್ಯಾಸ್ಟೆಲಿನೋ, ಗೋಪಿನಾಥ ಭಟ್, ನವೀನ್ ಅಡ್ಯಂತಾಯ, ಭಾನು ಭಾಸ್ಕರ ಪೂಜಾರಿ, ರೀನಾ ಡಿಸೋಜ, ಸುಭಿತ್ ಎನ್.ಆರ್, ಸುಧಾಕರ ಶೆಟ್ಟಿ ಮುಡಾರು, ಉಮೇಶ್ ರಾವ್ ಬಜಗೋಳಿ, ಸಿರಿಯಣ್ಣ ಶೆಟ್ಟಿ, ಕೃಷ್ಣ ಶೆಟ್ಟಿ ಬಜಗೋಳಿ, ಸೂರಜ್ ಶೆಟ್ಟಿ, ಮಂಜುನಾಥ ಜೋಗಿ, ಮಲಿಕ್ ಅತ್ತೂರು, ಅನಿಲ್ ಪೂಜಾರಿ, ಚೇತನ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರು, ವಿವಿಧ ಘಟಕಗಳ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಅಜಿತ್ ಹೆಗ್ಡೆ ಸ್ವಾಗತಿಸಿದರು. ರಾಜೇಂದ್ರ ದೇವಾಡಿಗ ವಂದಿಸಿದರು. ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ನಿರೂಪಿಸಿದರು.