ಸಮಸಮಾಜ ನಿರ್ಮಾಣ ಗೋಪಾಲಗೌಡರ ಧ್ಯೇಯ

KannadaprabhaNewsNetwork | Published : Mar 18, 2024 1:46 AM

ಸಾರಾಂಶ

ಶಾಂತವೇರಿ ಗೋಪಾಲಗೌಡ ಅವರು ಜನತೆಗೆ ಭೂಮಿ, ಬಂಡವಾಳ, ಅಧಿಕಾರ ಸಮಾನವಾಗಿ ಹಂಚಿಕೆಯಾದಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ಬಲವಾಗಿ ನಂಬಿ, ಜನಪರ ಹೋರಾಟಕ್ಕೆ ಇಳಿದಿದ್ದರು ಎಂದು ನಿವೃತ್ತ ಮುಖ್ಯಶಿಕ್ಷಕ ರಾಜಪ್ಪ ಮಾಸ್ತರ್ ಸೊರಬದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ಶಾಂತವೇರಿ ಗೋಪಾಲಗೌಡ ಅವರು ಜನತೆಗೆ ಭೂಮಿ, ಬಂಡವಾಳ, ಅಧಿಕಾರ ಸಮಾನವಾಗಿ ಹಂಚಿಕೆಯಾದಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ಬಲವಾಗಿ ನಂಬಿ, ಜನಪರ ಹೋರಾಟಕ್ಕೆ ಇಳಿದಿದ್ದರು ಎಂದು ನಿವೃತ್ತ ಮುಖ್ಯಶಿಕ್ಷಕ ರಾಜಪ್ಪ ಮಾಸ್ತರ್ ಹೇಳಿದರು.

ಶನಿವಾರ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು ಹಾಗೂ ಸೊರಬದ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡ ಜನ್ಮಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾರ್ಥ, ಸ್ವಜನ ಪಕ್ಷಪಾತ, ನಯವಂಚನೆಯಿಂದ ಇಂದಿನ ರಾಜಕಾರಣಿಗಳು ಗೌರವದಿಂದ ವಂಚಿತರಾಗಿದ್ದಾರೆ. ಆದರೆ, ಗೋಪಾಲಗೌಡರು ಕೋಮವಾದ, ಜಾತಿವಾದ ಮೀರಿ ಸಮಾಜದ ಹಿತಕ್ಕಾಗಿ ಹೋರಾಟ ನಡೆಸಿದರು. ಗೇಣಿಗಾರರಿಗೆ ಭೂಹಕ್ಕು ಕೊಡಿಸುವಲ್ಲಿ ಅವರ ಪಾತ್ರ ಹಿರಿದಾಗಿದೆ. ಅಂಥದ್ದೇ ದಾರಿಯಲ್ಲಿ ಕಾಗೋಡು ತಿಮ್ಮಪ್ಪ ಕೂಡ ರಾಜಕಾರಣ ಮಾಡಿ ಜನಮಾನಸದಲ್ಲಿ ನೆಲೆಸಿದ್ದಾರೆ ಎಂದರು.

ಶಿವಮೊಗ್ಗ ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಜಿ.ಕೆ. ಸತೀಶ ತೀರ್ಥಹಳ್ಳಿ ಅವರು "ಶಾಂತವೇರಿ ಗೋಪಾಲಗೌಡ ಅವರ ಬದುಕು- ಹೋರಾಟ " ಬಗ್ಗೆ ಉಪನ್ಯಾಸ ನೀಡಿದರು. ರಾಜಕೀಯ ಅಧಿಕಾರ ಪಡೆದು, ಬರಿಗೈಯಲ್ಲಿ ಹೊರಟು ಹೋಗುವಂಥದ್ದು ಈ ದೇಶದ ಸಂಸ್ಕೃತಿಯಲ್ಲಿ ಅಪರೂಪ. ಅಂತಹ ತ್ಯಾಗ, ಸರಳ, ಹೋರಾಟದ ಮನೋಭಾವದ ವ್ಯಕ್ತಿತ್ವ ಶಾಂತವೇರಿ ಗೋಪಾಲಗೌಡರಲ್ಲಿತ್ತು ಎಂದರು.

ಗೋಪಾಲಗೌಡರ ಚುನಾವಣಾ ಪ್ರಚಾರ ಸಭೆಗಳನ್ನು ಜ್ಞಾನ ಪ್ರಸರಣ ಕ್ರಿಯೆಗಳೆಂದು ಕರೆಯಲಾಗುತ್ತಿತ್ತು. ಕುಟುಂಬ, ಆಸ್ತಿ, ಹಣಕ್ಕಾಗಿ ಬದುಕದೆ ಬಡವರ, ಶೋಷಣೆಗೆ ಒಳಗಾದವರ ಪ್ರಗತಿಗಾಗಿ ಶ್ರಮಿಸಿದರು. ಇಂದು ಬಂಡವಾಳಶಾಹಿಗಳು ಬಡವರ ಭೂಮಿ ಕಸಿಯುವಂಥ ತಂತ್ರ ರೂಪಿಸುತ್ತಿದ್ದಾರೆ. ಗೇಣಿದಾರ ಹೋರಾಟದಿಂದ ಪಡೆದ ತುಂಡು ಭೂಮಿಯನ್ನು ಕಳೆದುಕೊಳ್ಳದಂತೆ ಜನರು ಎಚ್ಚರ ವಹಿಸಬೇಕು ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶಿವಾನಂದ ಪಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಿ.ಪಿ. ವೆಂಕಟೇಶ್ ನಾಯ್ಕ್ ಮಾತನಾಡಿದರು. ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಎಸ್.ಎಂ. ನೀಲೇಶ ಪ್ರಾಸ್ತಾವಿಕ ಮಾತನಾಡಿದರು.

ಸಮಾಜ ಹೋರಾಟಗಾರ ಮಂಜುನಾಥ್ ಕೆ. ಹಳೇ ಸೊರಬ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಪಿ. ಸದಾನಂದ, ನಿವೃತ್ತ ಬಿಇಒ ನಿಂಗಪ್ಪ, ಪ್ರಮುಖರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಇದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಸೋಮಶೇಖರ್ ಪ್ರಾರ್ಥಿಸಿ, ಉಪನ್ಯಾಸಕ ಸುಧೀರ್ ಸ್ವಾಗತಿಸಿದರು. ಕ.ಸಾ.ಪ ಕಾರ್ಯದರ್ಶಿ ಬಿ.ರಮೇಶ್ ನಿರೂಪಿಸಿ, ಸವಿತಾ ವಂದಿಸಿದರು.

- - - -೧೭ಕೆಪಿಸೊರಬ೦೨:

ಸೊರಬ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಮ್ಮಿಕೊಂಡ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಪ್ರಗತಿಪರ ಚಿಂತಕ ರಾಜಪ್ಪ ಮಾಸ್ತರ್ ಉದ್ಘಾಟಿಸಿದರು.

Share this article