ದೇಶದಲ್ಲೇ ಸಮಾಜವಾದ ಸಿದ್ಧಾಂತ ಪ್ರತಿಪಾದಿಸಿದ ಗೋಪಾಲಗೌಡರು: ಕೆ.ಪಿ.ಶ್ರೀಪಾಲ್

KannadaprabhaNewsNetwork |  
Published : Mar 17, 2026, 02:00 AM IST
ಪೋಟೋ: 15ಎಸ್‌ಎಂಜಿಕೆಪಿ01ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಇತಿಹಾಸ ವಿಭಾಗ, ಕುವೆಂಪು ವಿವಿ ಇತಿಹಾಸ ಅಧ್ಯಾಪಕರ ಸಂಘ ಇವರ ಸಹಯೋಗದಲ್ಲಿ ಕಾಲೇಜಿನ ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶಾಂತವೇರಿ ಗೋಪಾಲಗೌಡ ಅವರ ಜನ್ಮದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ನವ ವಸಾಹತು ಶಾಹಿ ಸಂದರ್ಭದಲ್ಲಿ ಚಳುವಳಿಗಳ ಪ್ರಸ್ತುತತೆ ಕುರಿತು ಒಂದು ದಿನದ ರಾಜ್ಯ ಮಟ್ಟದ  ವಿಚಾರ ಸಂಕಿರಣ ನಡೆಯಿತು. | Kannada Prabha

ಸಾರಾಂಶ

ವ್ಯವಸ್ಥೆಗಳ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವುದೇ ಗೋಪಾಲಗೌಡರಿಗೆ ಸಲ್ಲಿಸುವ ಅಭಿನಂದನೆ ಎಂದು ವಕೀಲ ಹಾಗೂ ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಕೆ.ಪಿ.ಶ್ರೀಪಾಲ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವ್ಯವಸ್ಥೆಗಳ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವುದೇ ಗೋಪಾಲಗೌಡರಿಗೆ ಸಲ್ಲಿಸುವ ಅಭಿನಂದನೆ ಎಂದು ವಕೀಲ ಹಾಗೂ ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಕೆ.ಪಿ.ಶ್ರೀಪಾಲ್ ಹೇಳಿದರು.ನಗರದ ಸಹ್ಯಾದ್ರಿ ಕಲಾ ಕಾಲೇಜಿನ ಇತಿಹಾಸ ವಿಭಾಗ, ಕುವೆಂಪು ವಿವಿ ಇತಿಹಾಸ ಅಧ್ಯಾಪಕರ ಸಂಘ ಇವರ ಸಹಯೋಗದಲ್ಲಿ ಕಾಲೇಜಿನ ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶನಿವಾರ ಶಾಂತವೇರಿ ಗೋಪಾಲಗೌಡ ಅವರ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ನವ ವಸಾಹತುಶಾಹಿ ಸಂದರ್ಭದಲ್ಲಿ ಚಳುವಳಿಗಳ ಪ್ರಸ್ತುತತೆ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಇಂದು ಭ್ರಷ್ಟಾಚಾರವೇ ಎಲ್ಲೆಡೆ ತುಂಬಿ ತುಳುಕುತ್ತಿದೆ. ಅಲ್ಲದೆ ಪ್ರಗತಿಶೀಲ ದಾರಿಯಲ್ಲಿರುವ ದೇಶಗಳ ಮೇಲೆ ಯುದ್ಧ ಸಾರುವಂತಹ ಅಪಾಯಕಾರಿ ಬೆಳವಣಿಗೆಗಳು ಕೂಡ ಆಗುತ್ತಿದೆ. ಆದರ್ಶಗಳೆಲ್ಲವೂ ಸತ್ತು ಹೋಗಿವೆ. ಇಂತಹ ಸಂದರ್ಭದಲ್ಲಿ ಮತ್ತೆ ಮತ್ತೆ ಗೋಪಾಲಗೌಡರು ನೆನಪಾಗುತ್ತಾರೆ. ಅನ್ಯಾಯ, ಭ್ರಷ್ಟಾಚಾರ, ಶೋಷಣೆ ವಿರುದ್ಧ ಹೋರಾಟ ನಡೆಸಿದವರು ಅವರು. ಜಿಲ್ಲೆಯಲ್ಲಿ ಅಷ್ಟೇ ಅಲ್ಲದೆ, ಇಡೀ ದೇಶದಲ್ಲಿಯೇ ಸಮಾಜವಾದ ಸಿದ್ಧಾಂತವನ್ನು ಪ್ರತಿಪಾದಿಸಿದವರು ಎಂದರು.

ಚಿಂತಕ ಹಾಗೂ ಸಾಹಿತಿ ನೆಂಪೆ ದೇವರಾಜ್ ಮಾತನಾಡಿ, ನವ ವಸಾಹತುಶಾಹಿ ಧೋರಣೆ ಇಂದು ಜಗತ್ತಿನೆಲ್ಲೆಡೆ ವ್ಯಕ್ತವಾಗುತ್ತಿದೆ. ಪ್ರಬಲ ರಾಷ್ಟ್ರಗಳು ಸಣ್ಣ ಸಣ್ಣ ರಾಷ್ಟ್ರಗಳ ಮೇಲೆ ದಾಳಿ ನಡೆಸಲು ಹೊರಟಿವೆ. ಬಹುರಾಷ್ಟ್ರೀಯ ಕಂಪನಿಗಳು ಕೂಡ ನಮ್ಮಲ್ಲಿ ಚಳುವಳಿಯನ್ನು ಹತ್ತಿಕ್ಕಿದ್ದನ್ನು ನಾವು ಕಾಣುತ್ತೇವೆ. ಚಳುವಳಿಗಳೆಲ್ಲಾ ಇಂದು ಸತ್ತುಹೋಗಿವೆ. ದಾರಿ ತಪ್ಪಿವೆ. ರೈತ, ದಲಿತ, ಕಾರ್ಮಿಕ ಮುಂತಾದ ಅನೇಕ ಚಳುವಳಿಗಳು ಇಂದು ತನ್ನ ಸ್ವರೂಪವನ್ನೇ ಬದಲಾಯಿಸಿಬಿಟ್ಟಿವೆ. ಹಲವು ದೇಶಗಳು ಸರ್ವಾಧಿಕಾರಿ ಧೋರಣೆಯನ್ನು ತಾಳುತ್ತಿವೆ. ಇದು ಅನಾಗರಿಕ ಲಕ್ಷಣ ಹೌದು ಎಂದರು.

ಗೋಪಾಲಗೌಡರು ಕೇವಲ ಹೋರಾಟಗಾರ ಮಾತ್ರ ಆಗಿರಲಿಲ್ಲ. ಸಾಂಸ್ಕೃತಿಕ ನಾಯಕರೂ ಆಗಿದ್ದರು. ಅವರು ಒಳ್ಳೆಯ ಸಂಸದೀಯ ಪಟು. ಸದನದಲ್ಲಿ ಅವರ ಭಾಷಣ ಕೇಳಲು ಎಲ್ಲಾ ಪಕ್ಷದವರು ಕಾಯುತ್ತಿದ್ದರು. ಅವರ ಕಾಲದಲ್ಲಿ ರೈತ ಚಳುವಳಿ ಸೇರಿದಂತೆ ಎಲ್ಲಾ ಚಳುವಳಿಗಳು ಕೂಡ ವಿಜೃಂಭಿಸುತ್ತಿದ್ದವು. ನಕ್ಸಲ್ ಚಳುವಳಿ ಕೂಡ ಆರಂಭವಾಗಿತ್ತು. ಯಾವ ಹಿಂಸಾತ್ಮಕ ಚಳುವಳಿಗಳು ಕೂಡ ಗಟ್ಟಿಯಾಗಿ ನಿಲ್ಲುವುದಿಲ್ಲ. ಪ್ರಜಾಸತ್ತಾತ್ಮಕ ಚಳುವಳಿಗಳು ಮಾತ್ರ ಉಳಿಯುತ್ತವೆ ಎನ್ನುವುದಕ್ಕೆ ಗೋಪಾಲಗೌಡರೇ ಸಾಕ್ಷಿಯಾಗಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಚಾರ ಸಂಕಿರಣದ ಸಂಚಾಲಕ ಡಾ.ಕೆ.ಎನ್. ಮಂಜುನಾಥ್, ಗೋಪಾಲಗೌಡರು ಇತಿಹಾಸದ ಪುಟಗಳಲ್ಲಿ ಸದಾ ಉಸಿರಾಡುತ್ತಲೇ ಇರುತ್ತಾರೆ. ಅವರ ಅದರ್ಶಗಳು ಜೀವಂತವಾಗಿರಬೇಕು. ಅವರ ಬದುಕು-ಬರಹ ಎಲ್ಲವೂ ನಮ್ಮ ವಿದ್ಯಾರ್ಥಿಗಳಿಗೆ ತಿಳಿಯಬೇಕು ಎಂಬ ಹಿನ್ನಲೆಯಲ್ಲಿ ಈ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಪ್ರೊ.ಸಿರಾಜ್ ಅಹಮದ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ.ಎಸ್. ಸುಮಾ, ಡಾ.ಮಂಜುನಾಥ್ ಸಕಲೇಶ್, ಡಾ.ಟಿ ಮಂಜುನಾಥ್, ಡಾ.ರಂಗನಾಥ್ ರಾವ್ ಕರಾಡ್, ಡಾ.ಕೀರ್ತಿನಾಥ, ಡಾ.ಎಚ್.ಎಂ. ಶಂಭುಲಿಂಗಮೂರ್ತಿ, ಡಾ.ಎಚ್.ಪಿ. ಮಂಜುನಾಥ್, ಶಫಿಯುಲ್ಲಾ ಉಪಸ್ಥಿತರಿದ್ದರು.

ನಂತರ ನಡೆದ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಧ್ಯಾಪಕ ಡಾ.ಕೆ. ಪ್ರಭಾಕರ ರಾವ್ ವಹಿಸಿದ್ದರು. ಕಾಲೇಜಿನ ಇತಿಹಾಸ ವಿಭಾಗದ ಭೋದಕ ವರ್ಗದವರು ಹಾಗೂ ಸಂಶೋಧಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನುಡಿದು ತೋರುವುದಕ್ಕಿಂತ ನಡೆದು ತೋರಿಸಿ: ಹುಕ್ಕೇರಿ ಶ್ರೀ
ಹೋಟೆಲ್‌ಗಳಲ್ಲಿ 16 ಗೃಹ ಬಳಕೆ ಸಿಲಿಂಡರ್ ಜಪ್ತಿ