ಕನ್ನಡಪ್ರಭ ವಾರ್ತೆ ಸಿಂಧನೂರು
ತಾಲೂಕಿನ ಗೊರೇಬಾಳ ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೋತ್ಸವ ಅಂಗವಾಗಿ ಫೆ.12ರಿಂದ ಬಸವ ಪುರಾಣ ಪ್ರವಚನ ಆರಂಭಗೊಂಡಿದ್ದು, ಎ.1ರಂದು ಮಹಾಮಂಗಲ ಆಗಲಿದೆ. ಅಂದು ಸಂಜೆ 4.30ಗಂಟೆಗೆ ‘ತವರಿಗೆ ತೇರು’ ಕಾರ್ಯಕ್ರಮದಡಿ ಗ್ರಾಮದಿಂದ ಬೇರೆಡೆಗೆ ತೆರಳಿದ ಮಹಿಳೆಯರನ್ನು ಆಹ್ವಾನಿಸಿ ಉಡಿ ತುಂಬಲಾಗುವುದು. ಇದು ರಾಜ್ಯದಲ್ಲಿಯೇ ಪ್ರಪ್ರಥಮ ವಿಶಿಷ್ಟ ಕಾರ್ಯಕ್ರಮವಾಗಿದ್ದು, ಇದರಿಂದ ಮಹಿಳಾ ಸಮಾನತೆ ಮತ್ತು ಬೆಳವಣಿಗೆಗೆ ನಾಂದಿಯಾಗಲಿದೆ. ಮುಂಡರಗಿ ಅನ್ನದಾನೇಶ್ವರ ಸಂಸ್ಥಾನ ಮಠದ ಡಾ.ಅನ್ನದಾನ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಾವೇರಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮೀಜಿ ನೇತೃತ್ವ ವಹಿಸುವರು. ಚಿಕ್ಕ ತೋಟ್ಟಲಕೇರಿ ಶಿವಲಿಂಗ ಮಹಾಸ್ವಾಮಿ ಅಧ್ಯಕ್ಷತೆ ವಹಿಸುವರು ಎಂದರು.
ಎ.2 ರಂದು ಕೃಷಿ ಗೋಷ್ಠಿ ನಡೆಯಲಿದ್ದು, ರೈತರು ಬದಕು-ಬವಣೆ ಕುರಿತು ಚರ್ಚಿಸಲಾಗುವುದು. ಗದಗ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿ ಸಾನ್ನಿಧ್ಯ ವಹಿಸುವರು. ಇಲಕಲ್ ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಮಹಾಸ್ವಾಮಿ ನೇತೃತ್ವ ವಹಿಸುವರು. ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಮಹಾಸ್ವಾಮಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.ಎ.3 ರಂದು ವಳಬಳ್ಳಾರಿ ಚನ್ನಬಸವ ಶಿವಯೋಗಿಗಳ ಲಘು ರಥೋತ್ಸವ ತಾಯಂದಿಯರಿಂದ ನಡೆಯಲಿದೆ. ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿ ಹಾಗೂ ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಮಹಾಸ್ವಾಮಿ ಸಾನ್ನಿಧ್ಯ ವಹಿಸುವರು. ಆಳಂದ, ನಂದವಾಡಿಗಿ, ಜಾಲವಾದಿ ಮಹಾಂತೇಶ್ವರ ಮಠದ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿ ನೇತೃತ್ವ ವಹಿಸುವರು ಎಂದು ಹೇಳಿದರು.
ನಂತರ ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿ ಮಾತನಾಡಿ, 12ನೇ ಶತಮಾನದ ಬಸವಾದಿ ಶರಣರ ಕಾಯಕ, ದಾಸೋಹ ಪರಂಪರೆಯನ್ನು ವಳಬಳ್ಳಾರಿ ಮಠ ಹಾಗೂ ಗೊರೇಬಾಳ ಶರಣಬಸವೇಶ್ವರ ಮಠ ಮುಂದುವರೆಸಿಕೊಂಡು ಬಂದಿದೆ. ಎ.1ರಿಂದ 4ರವರೆಗೆ ನಡೆಯುವ ವಿಶೇಷ ಕಾರ್ಯಕ್ರಮಗಳಲ್ಲಿ ವಿವಿಧ ಮಠಗಳ ಶ್ರೀಗಳು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಸಕಲ ಭಕ್ತರಿಗೆ ನಿರಂತರ ದಾಸೋಹ ವ್ಯವಸ್ಥೆ ಇರುತ್ತದೆ. ವಿಶೇಷವಾಗಿ ಜಾತ್ರಾ ಮಹೋತ್ಸವ ನಿಮಿತ್ತ ಸಾರಿಗೆ ಮತ್ತು ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗಿದೆ. ಆದ್ದರಿಂದ ಎಲ್ಲರೂ ಒಂದಾಗಿ ಜಾತ್ರೆಯನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.