ಆಂಗ್ಲ ಮಾಧ್ಯಮದ ಮಕ್ಕಳನ್ನು ನಡುನೀರಲ್ಲಿ ಕೈ ಬಿಟ್ಟ ಸರ್ಕಾರ

KannadaprabhaNewsNetwork |  
Published : Jul 17, 2026, 02:15 AM IST
ಫೈಲ್‌ ಫೋಟೋ | Kannada Prabha

ಸಾರಾಂಶ

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 2 ತಿಂಗಳು ಕಳೆಯುತ್ತಾ ಬಂದರೂ ಆಂಗ್ಲ ಮಾಧ್ಯಮದ 8ನೇ ತರಗತಿಗೆ ಸರ್ಕಾರ ಮಂಜೂರಾತಿ ನೀಡಿಲ್ಲ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಸರ್ಕಾರಿ ಆಂಗ್ಲ ಮಾಧ್ಯಮದಲ್ಲಿ 7ನೇ ತರಗತಿ ಉತ್ತೀರ್ಣರಾದ ರಾಜ್ಯದ 1001 ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯ 30 ಸಾವಿರ ಮಕ್ಕಳಿಗೆ 8ನೇ ತರಗತಿ ಆರಂಭಿಸದೇ ವಿದ್ಯಾರ್ಥಿಗಳನ್ನು ಸರ್ಕಾರ ನಡುನೀರಿನಲ್ಲಿ ಕೈ ಬಿಟ್ಟಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 2 ತಿಂಗಳು ಕಳೆಯುತ್ತಾ ಬಂದರೂ ಆಂಗ್ಲ ಮಾಧ್ಯಮದ 8ನೇ ತರಗತಿಗೆ ಸರ್ಕಾರ ಮಂಜೂರಾತಿ ನೀಡಿಲ್ಲ. ಈವರೆಗೂ ಈ ಮಕ್ಕಳಿಗೆ ಹಾಜರಾತಿಯೂ ಇಲ್ಲ. ಪಠ್ಯಪುಸ್ತಕಗಳಿಲ್ಲ. ನುರಿತ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲು ಶಿಕ್ಷಕರಿಲ್ಲ. ಕೆಲವೆಡೆ ತರಗತಿ ನಡೆಸಲು ಕೊಠಡಿಗಳಿಲ್ಲ.

ಹಾಗಾಗಿ ಮಕ್ಕಳು ವಿಧಿ ಇಲ್ಲದೇ ಕನ್ನಡ ಮಾಧ್ಯಮದಲ್ಲಿ ದಾಖಲಾತಿ ಪ್ರವೇಶ ಪಡೆಯುತ್ತಿದ್ದಾರೆ. ಶಿಕ್ಷಕರೂ ಮುಂದಾಗಿ ಕನ್ನಡ ಮಾಧ್ಯಮಕ್ಕೆ ಇವರನ್ನು ದಾಖಲು ಮಾಡಿಕೊಳ್ಳುತ್ತಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸ ಮಾಡಿರುವ ರಾಜ್ಯದಲ್ಲಿ 30 ಸಾವಿರ ಮಕ್ಕಳು ಈಗ ತಮ್ಮ ಮುಂದಿನ ಓದನ್ನು ಕನ್ನಡ ಮಾಧ್ಯಮದಲ್ಲಿ ಮಾಡಬೇಕಿದೆ.

ಪಾಲಕರಿಂದ ಒಪ್ಪಿಗೆ ಪತ್ರ:

ರಾಜ್ಯದ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಗೆ 8ನೇ ತರಗತಿಗೆ ವಿದ್ಯಾರ್ಥಿಗಳು ಹೋಗುತ್ತಿದ್ದಾರೆ. ಅಲ್ಲಿ ಆಂಗ್ಲ ಮಾಧ್ಯಮದ ಬದಲು ಕನ್ನಡ ಮಾಧ್ಯಮದಲ್ಲಿ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ನಮ್ಮಲ್ಲಿ ಈವರೆಗೂ ಆಂಗ್ಲ ಮಾಧ್ಯಮ ಶಾಲೆ ಮಂಜೂರಾತಿ ಇಲ್ಲ. ಅಲ್ಲಿಯ ವರೆಗೂ ಕನ್ನಡ ಮಾಧ್ಯಮದಲ್ಲಿ ದಾಖಲಾತಿ ಪಡೆಯಲು ತಾವು ಅನುಮತಿ ನೀಡಬೇಕು. ಸರ್ಕಾರದಿಂದ ಆಂಗ್ಲ ಮಧ್ಯಮ ಶಾಲೆ ಮಂಜೂರಾದ ಬಳಿಕ ಅವರನ್ನು ಮತ್ತೆ ಆಂಗ್ಲ ಮಾಧ್ಯಮ ಶಾಲೆಗೆ ಮರು ದಾಖಲಾತಿ ಮಾಡಿಕೊಳ್ಳುತ್ತೇವೆ ಎಂದು ಪಾಲಕರಿಂದ ಅನುಮತಿ ಪಡೆದುಕೊಳ್ಳಲಾಗುತ್ತಿದೆ.

ಈ 8ನೇ ತರಗತಿ ಮಕ್ಕಳ ದಾಖಲಾತಿಯನ್ನು ಆನ್‌ಲೈನ್‌ನಲ್ಲಿ ದಾಖಲು ಮಾಡಬೇಕಿದೆ. ಇದಕ್ಕಾಗಿ ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್‌ ವ್ಯವಸ್ಥೆ, (ಶಾಟ್ಸ್‌ ಆ್ಯಪ್‌) ಅಪ್‌ಲೋಡ್‌ ಮಾಡಿದ ಬಳಿಕ ಆ ಮಕ್ಕಳ ಹಾಜರಾತಿಗೆ ಅನುಗುಣವಾಗಿ ಬಿಸಿಯೂಟ, ಹಾಲು, ಮೊಟ್ಟೆ ಮತ್ತು ಬಾಳೆಹಣ್ಣು ನೀಡಲು ಅವಕಾಶವಿದೆ. ಮಕ್ಕಳನ್ನು ಆಂಗ್ಲ ಮಾಧ್ಯಮದ ಬದಲು ಕನ್ನಡ ಮಾಧ್ಯಮದಲ್ಲಿ ದಾಖಲಾತಿ ನಡೆಯುತ್ತಿದೆ.

ಸರ್ಕಾರ ಆಂಗ್ಲ ಮಾಧ್ಯಮದ 8ನೇ ತರಗತಿ ಮಂಜೂರಾತಿ ನೀಡಿಲ್ಲ. ಆ ಮಕ್ಕಳನ್ನು ಸರ್ಕಾರಿ ಪ್ರೌಢಶಾಲೆಯ ಕನ್ನಡ ಮಾಧ್ಯಮದಲ್ಲಿ ದಾಖಲಾತಿ ನಡೆಸುವ ಪ್ರಕ್ರಿಯೆ ನಡೆದಿದೆ. ದಾಖಲಾತಿ ಇಲ್ಲದಿದ್ದರೆ ಅವರಿಗೆ ಹಾಜರಾತಿ ಸಿಗಲ್ಲ. ಆಂಗ್ಲ ಮಾಧ್ಯಮ ಮಂಜೂರು ಆದ ಕೂಡಲೇ ಅವರನ್ನು ಮರು ದಾಖಲಾತಿ ಮಾಡಲಾಗುವುದು ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಗಳಾ.

ವಿದ್ಯಾರ್ಥಿಗಳು 7ನೇ ತರಗತಿ ಆಂಗ್ಲ ಮಾಧ್ಯಮ ಶಾಲೆಯಿಂದ ಪಾಸ್‌ ಆಗಿದ್ದಾರೆ. ಅವರಿಗೆ 8ನೇ ತರಗತಿ ಆಂಗ್ಲ ಮಾಧ್ಯಮ ವ್ಯವಸ್ಥೆ ಇಲ್ಲ. ವಿಧಿ ಇಲ್ಲದೇ ಶಿಕ್ಷಕರು ಪಾಲಕರ ಅನುಮತಿ ಪತ್ರ ಪಡೆದು ಕನ್ನಡ ಮಾಧ್ಯಮದಲ್ಲೇ ಅವರನ್ನು ದಾಖಲಾತಿ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಪಾಲಕ ಜಯಪ್ರಕಾಶ ನಾರಾಯಣ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವನ ನಿರ್ವಹಣೆಗೆ ಪದವಿ ಮುಖ್ಯವಲ್ಲ, ಕೌಶಲ್ಯ ಬೇಕು
ಹೂಳು ತುಂಬಿದ ಚರಂಡಿ ದುರಸ್ತಿ ಮಾಡಿ: ಡಂಬಳ ಗ್ರಾಮಸ್ಥರ ಆಗ್ರಹ