ನಗರದ ಒಕ್ಕಲಿಗರ ಭವನದಲ್ಲಿ ಮೂರು ದಿನದ ‘40ರ ಸಂಭ್ರಮ’ ಸಮಾರೋಪ ಸಮಾರಂಭ
ಬಸವಣ್ಣ ಹಾಗೂ ಶಿವಶರಣರ ಆಶಯದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರ ಕಲ್ಯಾಣ ಕಾರ್ಯಕ್ರಮಗಳೊಂದಿಗೆ ಜನ ಸ್ನೇಹಿ ಆಡಳಿತ ನೀಡುತ್ತಿದೆ ಎಂದು ಇಂಧನ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಷತ್ತು ನಗರದ ಒಕ್ಕಲಿಗರ ಭವನದಲ್ಲಿ ಆಯೋಜಿಸಿದ್ದ ಮೂರು ದಿನದ ‘40ರ ಸಂಭ್ರಮ’ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿ, ಬಸವಣ್ಣ ಕಾಯಕಕ್ಕೆ ಮಹತ್ವ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ನರೇಗಾ ಕಾರ್ಯಕ್ರಮ ರೂಪಿಸಿ ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡಲಾಗಿತ್ತು. ಇನ್ನೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರಿಸಿದ ಮರು ಕ್ಷಣವೇ ಬಸವಣ್ಣ ಪ್ರತಿಪಾದಿಸಿದಂತೆ ಹಸಿವು ನಿಗಿಸುವ ನಿಟ್ಟಿನಲ್ಲಿ ಅನ್ನ ಭಾಗ್ಯ ಯೋಜನೆ ಘೋಷಿಸಿದರು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದಲ್ಲದೇ, ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರ ಅಳವಡಿಕೆಗೆ ಆದೇಶಿಸಿದರು.ದಾಸೋಹ ಎಂದರೆ ಉತ್ಪಾದನೆ ಮತ್ತು ವಿನಿಯೋಗ. ಈ ನಿಟ್ಟಿನಲ್ಲಿ ಮಹಿಳೆಯರು ಮತ್ತು ಬಡವರಿಗೆ ಆರ್ಥಿಕ ಶಕ್ತಿ ತುಂಬಲು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಬಸವಾದಿ ಶರಣರ ಆಶಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಕೇವಲ ವೀರಶೈವ ಸಮಾಜಕ್ಕೆ ಸೀಮಿತವಾಗದೇ ಶರಣರ ವಿಚಾರ ಧಾರೆ ರಾಜ್ಯಾಂದ್ಯಂತ ವಿವಿಧ ಕಾರ್ಯಕ್ರಮದ ಮೂಲಕ ವಚನದ ಜ್ಞಾನವನ್ನು ಜನರಿಗೆ ನೀಡಲಾಗುತ್ತಿದೆ. ಶರಣರ ವಿಚಾರಧಾರೆ ಸಾರ್ವಕಾಲಿಕವಾದವುಗಳು. ಅವರನ್ನು ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯ ಮತ್ತು ಹೊರದೇಶದಲ್ಲಿ ಪ್ರಚಾರ ಮಾಡುವ ನಿಟ್ಟಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಡಾ.ಬಸವರಾಜ ಸಾದರ ಅವರ ‘ಕಾಯಕಾರ್ಥ ಕ್ರಾಂತಿ’ ಪುಸಕ್ತ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ರುವಾರಿಗಳಾದ ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವ ಬಿ.ಬಿ.ಲಿಂಗಯ್ಯ, ಸಾಹಿತಿ ಬಸವರಾಜ ಸಾದರ, ಬಿಜೆಪಿ ಮುಖಂಡ ಕಲ್ಮಡಪ್ಪ, ಪೂಚಂತೆ ಪ್ರತಿಷ್ಠಾನದ ಸದಸ್ಯ ರುದ್ರಸ್ವಾಮಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವೀಶ್ ಕ್ಯಾತನಬೀಡು, ಸುಶೀಲಾ ಸೋಮಶೇಖರ್ ಮೊದಲಾದವರಿದ್ದರು.