ಸರ್ಕಾರದ ನೆರವಿಗೆ ಸ್ವಾಗತ. ಬಡ ಕುಟುಂಬಗಳಿಗೆ ಇನ್ನಷ್ಟು ನೆರವು ಕೊಡಿ: ಪ್ರತಿಪಕ್ಷ ನಾಯಕ ಅಶೋಕ ಒತ್ತಾಯ

KannadaprabhaNewsNetwork |  
Published : Sep 14, 2025, 01:04 AM IST
13ಎಚ್ಎಸ್ಎನ್18 : ಘಟನೆ ನಡೆದ ಮೊಸಳೆ ಹೊಸಳ್ಳಿಗೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಭೇಟಿ ನೀಡಿದ್ದರು. | Kannada Prabha

ಸಾರಾಂಶ

ನಾನು ಪರಿಹಾರ ವಿಚಾರದಲ್ಲಿ ರಾಜಕೀಯ ಮಾಡಲು ಬಂದಿಲ್ಲ. ಇಂತಹ ಸಂದರ್ಭಗಳಲ್ಲಿ ಮಾನವೀಯತೆ ಮುಖ್ಯ. ಜನರ ಬದುಕು ಕಷ್ಟದಲ್ಲಿದೆ. ಆದ್ದರಿಂದ, ಮೃತರ ಕುಟುಂಬಗಳಿಗೆ ಹೆಚ್ಚಿನ ನೆರವು ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ .

ಕನ್ನಡಪ್ರಭ ವಾರ್ತೆ ಹಾಸನ

ತಾಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗಣಪತಿ ವಿಸರ್ಜನಾ ಮೆರವಣಿಗೆ ಮೇಲೆ ಲಾರಿ ಹರಿದು 9 ಜನರು ಮೃತಪಟ್ಟ ಪ್ರಕರಣ ರಾಜ್ಯಾದ್ಯಂತ ಆಘಾತ ಮೂಡಿಸಿದ್ದು, ಘಟನೆಯ ಹಿನ್ನೆಲೆ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಶನಿವಾರ ಸ್ಥಳಕ್ಕೆ ಭೇಟಿ ನೀಡಿ, ಮೃತರ ಕುಟುಂಬಸ್ಥರ ದುಃಖದಲ್ಲಿ ಭಾಗಿಯಾದರು.

ಅಪಘಾತ ಸ್ಥಳಕ್ಕೆ ಮತ್ತು ಗಾಯಳು ಇರುವ ಹಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದು ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇಂತಹ ಘಟನೆ ನಡೆಯಬಾರದಿತ್ತು. ಇಡೀ ರಾಜ್ಯದ ಜನತೆಗೆ ದಿಗ್ಭ್ರಮೆಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಸ್ಪಂದಿಸಿ ಪರಿಹಾರ ಘೋಷಿಸಿರುವುದು ಒಳ್ಳೆಯದು. ಆದರೆ, ಇದು ಸಾಕಾಗುವುದಿಲ್ಲ. ಬಡತನದಲ್ಲಿರುವ ಕುಟುಂಬಗಳಿಗೆ ಇನ್ನಷ್ಟು ನೆರವು ನೀಡಬೇಕೆಂದು ನಾನು ಸರ್ಕಾರದ ಜೊತೆ ಮಾತಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ನಾನು ಪರಿಹಾರ ವಿಚಾರದಲ್ಲಿ ರಾಜಕೀಯ ಮಾಡಲು ಬಂದಿಲ್ಲ. ಇಂತಹ ಸಂದರ್ಭಗಳಲ್ಲಿ ಮಾನವೀಯತೆ ಮುಖ್ಯ. ಜನರ ಬದುಕು ಕಷ್ಟದಲ್ಲಿದೆ. ಆದ್ದರಿಂದ, ಮೃತರ ಕುಟುಂಬಗಳಿಗೆ ಹೆಚ್ಚಿನ ನೆರವು ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.

ಅಪಘಾತದ ಕುರಿತು ಪ್ರತಿಕ್ರಿಯಿಸಿದ ಅವರು, ಪೊಲೀಸರು ಕ್ರಮ ಕೈಗೊಂಡಿದ್ದರೂ ಜನರ ಮೇಲೆ ಟ್ರಕ್ ಹರಿದಿದೆ. ಇಂತಹ ಮೆರವಣಿಗೆಗಳು ನಡೆಯಬೇಕಾದರೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಇರಬೇಕಾಗಿತ್ತು. ಸ್ಥಳೀಯರು ಹಲವು ಬಾರಿ ಹಂಪ್ ಹಾಕಬೇಕೆಂದು ಒತ್ತಾಯಿಸಿದ್ದರು. ನಾನು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ತಕ್ಷಣ ಹಂಪ್ ಹಾಕಲು ಸೂಚಿಸುತ್ತೇನೆ ಎಂದು ಹೇಳಿದರು.

ಅಪಘಾತದ ವೇಳೆ ಸಾವನ್ನಪ್ಪಿದವರಲ್ಲಿ ಯುವಕರೇ ಹೆಚ್ಚಿರುವುದು ಹೃದಯವಿದ್ರಾವಕ. ಅವರ ಕುಟುಂಬಗಳು ಈಗಾಗಲೇ ಬಡತನದಲ್ಲಿ ಬದುಕುತ್ತಿರುವವರು. ಇಂತಹ ಕುಟುಂಬಗಳಿಗೆ ವಿಶೇಷ ಸಹಾಯ ದೊರಕಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.ಮೃತರ ಕುಟುಂಬಗಳು ಭಾರೀ ದುಃಖದಲ್ಲಿವೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ರಸ್ತೆ ಸುರಕ್ಷತೆ ಹಾಗೂ ಜನರ ಜೀವದ ಹಿತದೃಷ್ಟಿಯಿಂದ ಗಂಭೀರವಾಗಿ ಯೋಚಿಸಿ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.

ಆಲೂರು- ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪಕ್ಷದ ಮುಖಂಡ ಬಿ.ಎಚ್. ನಾರಾಯಣಗೌಡ ಇತರರು ಇದ್ದರು.

PREV

Recommended Stories

ಕಸ ಸುರಿಯುವ ಹಬ್ಬದಿಂದ ಜನರಲ್ಲಿ ಜಾಗೃತಿ - ಕಂಡಲ್ಲಿ ಕಸ ಹಾಕುವವರ ಮನೆ ಮುಂದೆ ತ್ಯಾಜ್ಯ
ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ