ಜನರ ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯ: ಅಶೋಕ ಶಿಗ್ಗಾಂವಿ

KannadaprabhaNewsNetwork |  
Published : Nov 15, 2026, 02:15 AM IST
ಹನುಮಸಾಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಅಂಗನವಾಡಿ ಮಕ್ಕಳಿಂದ ಮಕ್ಕಳ ದಿನಾಚರಣೆ ಅಂಗವಾಗಿ ಕೇಕ್ ಕತ್ತರಿಸಲಾಯಿತು. | Kannada Prabha

ಸಾರಾಂಶ

ಹನುಮಸಾಗರ ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮವನ್ನು ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.

ಹನುಮಸಾಗರ: ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದ ಮೂಲಕ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದು ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಹೇಳಿದರು.

ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಸೌಲಭ್ಯಗಳು ತಾಂತ್ರಿಕ ಕಾರಣಗಳಿಂದ ಅಥವಾ ಇಲಾಖೆಗಳ ವಿಳಂಬದಿಂದ ಅರ್ಹ ಫಲಾನುಭವಿಗಳಿಗೆ ತಲುಪದಿದ್ದರೆ, ಅಂತಹವರು ಅರ್ಜಿ ಸಲ್ಲಿಸಿದಲ್ಲಿ ಅರ್ಹತೆಯ ಆಧಾರದ ಮೇಲೆ ಶೇ. 100ರಷ್ಟು ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈಗಾಗಲೇ 65ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಅವುಗಳನ್ನು ಪರಿಶೀಲಿಸಿ ನಿಯಮಾನುಸಾರ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ತಾಲೂಕು ಸಮಾಜ ಕಲ್ಯಾಣಾಧಿಕಾರಿ ತುಗ್ಗಪ್ಪ ದೇಸಾಯಿ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರದಿಂದ ದೊರೆಯುವ ವಿದ್ಯಾರ್ಥಿವೇತನ (ಸ್ಕಾಲರ್‌ಶಿಪ್) ಸೇರಿದಂತೆ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ಪಡೆದು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಸಮುದಾಯ ಆರೋಗ್ಯ ಕೇಂದ್ರದ (ಸಿಎಚ್‌ಸಿ) ಕಾರ್ಯಾರಂಭದ ಕುರಿತು ಚರ್ಚೆ ನಡೆಯಿತು. ರಾಹುಲ್ ದೇವ್ ಸಿಂಗ್ ಮಾತನಾಡಿ, ಹನುಮಸಾಗರದಲ್ಲಿ ಸಿಎಚ್‌ಸಿ ಪ್ರಾಥಮಿಕ ಆರೋಗ್ಯ ಕಟ್ಟಡ ನಿರ್ಮಾಣಗೊಂಡಿದ್ದರೂ, ಅದು ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿಲ್ಲ. ಇದರಿಂದ ಸಾರ್ವಜನಿಕರಿಗೆ ಸಮರ್ಪಕ ಆರೋಗ್ಯ ಸೇವೆ ದೊರೆಯುತ್ತಿಲ್ಲ ಎಂದು ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯ ಅಧಿಕಾರಿ ಆನಂದ ಗೊಟೂರ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಅಗತ್ಯ ಸಿಬ್ಬಂದಿ ಹಾಗೂ ಮೂಲಸೌಕರ್ಯ ಕಲ್ಪಿಸುವ ಪ್ರಕ್ರಿಯೆ ಹಂತ ಹಂತವಾಗಿ ನಡೆಯುತ್ತಿದೆ. ಒಂದೆರಡು ತಿಂಗಳಲ್ಲಿ ನಾಲ್ವರು ವೈದ್ಯರು ಸೇರಿದಂತೆ ಅಗತ್ಯ ಸಿಬ್ಬಂದಿ ನೇಮಕಗೊಂಡು ಕೇಂದ್ರ ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಅರ್ಹ ಫಲಾನುಭವಿಗಳಿಗೆ ವೃದ್ಧಾಪ್ಯ ವೇತನ ಹಾಗೂ ನಿವೇಶನದ ಸೌಲಭ್ಯಗಳನ್ನು ಒದಗಿಸಲಾಯಿತು. ಮಕ್ಕಳ ದಿನಾಚರಣೆ ಅಂಗವಾಗಿ ಕೇಕ್ ಕತ್ತರಿಸಲಾಯಿತು. ಚಿಕ್ಕಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ ನೆರವೇರಿಸಲಾಯಿತು.

ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧಿಕಾರಿ ಅಮರೇಶ ಯಾದವ, ಪಪಂ ಅಧಿಕಾರಿ ರೆಡ್ಡಿ ರಾಯನಗೌಡ, ಸಿಡಿಪಿಒ ಯಲ್ಲಮ್ಮ ಹಂಡಿ, ತಾಲೂಕು ಅರಣ್ಯಾಧಿಕಾರಿ ಪರಶುರಾಮ, ಯಮನಪ್ಪ ಚೂರಿ, ಸಮಾಜ ಕಲ್ಯಾಣಾಧಿಕಾರಿ ತುಗ್ಗಪ್ಪ ದೇಸಾಯಿ, ಉಪತಹಸೀಲ್ದಾರ್ ರಜನಿಕಾಂತ, ಉಮೇಶ ಗೌಡರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶದ ಅಭಿವೃದ್ಧಿಗೆ ಯುವಶಕ್ತಿ ಆಧಾರಸ್ತಂಭ: ಕಾಳೇಗೌಡ
ಶಾಸಕ ಪೊನ್ನಣ್ಣ, ಅಶೋಕ್ ಪೂವಯ್ಯಗೆ ಸನ್ಮಾನ