ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Mar 15, 2026, 03:00 AM IST
(ಫೋಟೊ14ಬಿಕೆಟಿ7, (1) ಮುಖ್ಯಮಂತ್ರಿ ಸಿದ್ದರಾಮಯ್ಯ   ಅವರು ಇಂದು ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ  ಶಂಕುಸ್ಥಾಪನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಕೃಷ್ಣ ಮೇಲ್ದಂಡೆ ಯೋಜನೆ ಅಂತ ಮೂರರ ಭೂ ಸ್ವಾಧೀನಗೊಳ್ಳುವ ಜಮೀನುಗಳಿಗೆ ಒಪ್ಪಂದದ ದರದಂತೆ ಪರಿಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.) | Kannada Prabha

ಸಾರಾಂಶ

ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶನಿವಾರ ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ಶಂಕುಸ್ಥಾಪನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಭೂ ಸ್ವಾಧೀನಗೊಳ್ಳುವ ಜಮೀನುಗಳಿಗೆ ಒಪ್ಪಂದದ ದರದಂತೆ ಪರಿಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜು ಶಂಕುಸ್ಥಾಪನೆಯಾಗಲು ಎಚ್.ವೈ. ಮೇಟಿಯವರೇ ಕಾರಣ. ಮೆಡಿಕಲ್ ಕಾಲೇಜು ಸ್ಥಾಪಿಸಲು 2025ರ ಬಜೆಟ್ ನಲ್ಲಿ ಘೋಷಣೆಯಾಗಿದ್ದು, ಇಂದು ಶಂಕುಸ್ಥಾಪನೆಗೊಳ್ಳುತ್ತಿದೆಯೇ ಹೊರತು, ಉಪಚುನಾವಣೆಯ ಕಾರಣಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಅನೇಕ ಜಿಲ್ಲೆಗಳನ್ನು ಅಭಿವೃದ್ಧಿಗೊಳಿಸುವ ದಿಸೆಯಲ್ಲಿ ಹಲವು ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಲಾಗಿದೆ. ಪ್ರತಿ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಹಾಗೂ ಟ್ರಾಮಾ ಸೆಂಟರ್ ಸ್ಥಾಪನೆ ಉದ್ದೇಶವಿದ್ದು, ಈಗಾಗಲೇ ಸುಮಾರು 25 ಜಿಲ್ಲೆಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ವರ್ಷ ಇಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಗ್ಯಾರಂಟಿ, ಅಭಿವೃದ್ಧಿಗೆ ಸಮಾನ ಆದ್ಯತೆ:

ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿಗೆ ಸರಕಾರ ಬಳಿ ಹಣವಿಲ್ಲ ಎಂದು ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ನಮ್ಮ ಸರಕಾರ ಗ್ಯಾರಂಟಿ ಹಾಗೂ ಅಭಿವೃದ್ಧಿಯನ್ನು ಸಮಾನ ಆದ್ಯತೆ ನೀಡುತ್ತಿದೆ. ಪ್ರತಿ ವರ್ಷ ಗ್ಯಾರಂಟಿಗಳಿಗೆ ಸುಮಾರು ₹50 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದು, ಇದುವರೆಗೆ ₹1.22 ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ. ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ, ಬಾಗಲಕೋಟೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಲಿಲ್ಲ. ಜಾತಿ ಧರ್ಮಗಳ ಮಧ್ಯೆ ವೈಮನಸ್ಸು ತರುವುದು ಅವರ ದುರಾಲೋಚನೆಯಾಗಿದೆ ಎಂದು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಯುಕೆಪಿ-3 ಭೂಪರಿಹಾರ ಒಂದೇ ಬಾರಿಗೆ ಪಾವತಿ:ಬಿಜೆಪಿಯವರು ತಮ್ಮ ಅವಧಿಯಲ್ಲಿ ಯುಕೆಪಿ ಯೋಜನೆಗೆ ಪರಿಹಾರ ನೀಡಲು ಆಸಕ್ತಿ ವಹಿಸಲಿಲ್ಲ. ಆದ್ದರಿಂದ ರೈತರು ಭೂಮಿ ನೀಡಲು ಮುಂದೆ ಬರಲಿಲ್ಲ. ಈಗ ರೈತರಿಗೆ ಭೂ ಪರಿಹಾರವನ್ನು ಒಂದೇ ಬಾರಿಗೆ ನೀಡಲು ಕಾಂಗ್ರೆಸ್ ಸರ್ಕಾರ ನಿರ್ಣಯಿಸಿದೆ. ಈ ಬಾರಿಯ ಬಜೆಟ್ ನಲ್ಲಿ ಯುಕೆಪಿ 3 ಹಂತದಲ್ಲಿ ಭೂಪರಿಹಾರಕ್ಕೆ ಹಣ ಮೀಸಲಿಡಲಾಗಿದ್ದು, ನಂತರವೂ ಹೆಚ್ಚಿನ ಅನುದಾನಕ್ಕೆ ವ್ಯವಸ್ಥೆಗೊಳಿಸಲಾಗುವುದು. ಸ್ವಯಂ ಪ್ರೇರಣೆಯಿಂದ ಭೂಮಿ ನೀಡುವ ರೈತರಿಗೆ ನೀರಾವರಿ ಜಮೀನಿಗೆ ₹40 ಲಕ್ಷ ಹಾಗೂ ಖುಷ್ಕಿ ಜಮೀನಿಗೆ ₹30 ಲಕ್ಷ ನೀಡಲು ಸರಕಾರದ ನಿರ್ಣಯಿಸಿದೆ. ಆದರೆ ಈ ಬಗ್ಗೆ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದ ಅನುಮತಿ ದೊರತಿಲ್ಲ:

ಯುಕೆಪಿ ಯೋಜನೆಯ ವ್ಯಾಪ್ತಿಗೆ ಬರುವ 8 ಗ್ರಾಮಗಳಲ್ಲಿ 900 ಎಕರೆಗೆ ₹446 ಕೋಟಿ ಪರಿಹಾರ ಕೊಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಎಂದಿಗೂ ನುಡಿದಂತೆ ನಡೆಯುತ್ತದೆ. ಕೇಂದ್ರಕ್ಕೆ ಹಲವು ಮನವಿಗಳ ನಂತರವೂ ಯುಕೆಪಿ, ಮಹಾದಾಯಿ ಸೇರಿದಂತೆ ಹಲವು ನೀರಾವರಿ ಯೋಜನೆಗೆ ಬೇಕಾದ ಅಗತ್ಯ ಅನುಮತಿ ಕೇಂದ್ರ ಸರಕಾರ ಇದುವರೆಗೆ ನೀಡಿಲ್ಲ. ಆದರೆ ನಮ್ಮ ಸರಕಾರ ಉತ್ತರ ಕರ್ನಾಟಕದ ಜನತೆಗೆ ನ್ಯಾಯ ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದರು.

ಮೇಟಿ ಅವರ ಆತ್ಮಕ್ಮೆ ಶಾಂತಿ ಸಿಗಲಿದೆ: ಎಂಬಿಪಾ

ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಎಚ್.ವೈ.ಮೇಟಿ ಅವರ ಬಹುದಿನದ ಕನಸು ಈಡೇರಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗುತ್ತಿದ್ದು, ಇದರಿಂದ ಮೇಟಿ ಅವರ ಆತ್ಮಕ್ಮೆ ಶಾಂತಿ ಸಿಗಲಿದೆ. ಸಿಎಂ ಮತ್ತು ಡಿಸಿಎಂ ಅವರ ಕಾರ್ಯ ಸ್ಮರಣೀಯವಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಒಳ್ಳೆಯ ಪರಿಹಾರ ಘೋಷಣೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ದೀರ್ಘಾವಧಿ ಸಿಎಂ ಆಗಿ ಹೊಸ ಇತಿಹಾಸ ಬರೆದರು. ಡಿಸಿಎಂ ಡಿಕೆ ಶಿವಕುಮಾರ್‌ ಹಗಲಿರುಳು ಶ್ರಮಿಸಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾದರು. ರೈತರ ಪರವಾಗಿ ನಿಂತ ಇಬ್ಬರಿಗೂ ಧನ್ಯವಾದ ಹೇಳಿದರು.

ವರ್ಷದಲ್ಲಿ ಕಾಲೇಜು ಕಟ್ಟಡ ಪೂರ್ಣ: ಸಚಿವ ಸತೀಶ

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಎಚ್.ವೈ ಮೇಟಿ ಅವರ ಕನಸು ಈಡೇರಿಸಲು ಸುಮಾರು ₹450 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ 3 ವರ್ಷಗಳಲ್ಲಿ ಪುರ್ಣ ಆಗಲಿದೆ ಎಂದು ಸಚಿವ ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.ಬಾಗಲಕೋಟೆ ಜನರ ಬಹುದಿನಗಳ ಕನಸು ಇಂದು ಈಡೇರಿದೆ. ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಕಾಲೇಜು ಸ್ಥಾಪನೆಗೆ ಚಾಲನೆ ಸಿಗುತ್ತಿರುವುದು ಖುಷಿಯ ವಿಷಯ. ನಮ್ಮ ಇಲಾಖೆಯಿಂದ ರಾಜ್ಯದ ಬ್ರಿಡ್ಜ್‌ಗಳಿಗೆ ಸುಮಾರು ₹60 ಕೋಟಿ ಕೊಟ್ಟಿದ್ದೇವೆ. ಬಾಗಲಕೋಟೆ ಕ್ಷೇತ್ರದ 10 ರಸ್ತೆಗಳ ಅಭಿವೃದ್ಧಿಗೆ ₹35 ಕೋಟಿ ಕೊಡಲು ಚಿಂತನೆ ನಡೆದಿದೆ. ಯಾವಾಗ್ಯಾವಾಗ ನಮ್ಮ ಸರ್ಕಾರ ಬಂದಿದೆಯೋ ಆಗ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣ ಕೊಟ್ಟಿದ್ದೇವೆ ಎಂದ ಅವರು, ಆದಷ್ಟು ಬೇಗ ಮೆಡಿಕಲ್ ಕಾಲೇಜ್‌ ಆರಂಭವಾಗಲಿ, ಎಚ್.ವೈ ಮೇಟಿ ಅವರ ಕನಸು ಈಡೇರಲಿ ಎಂದರು.

ಕೃಷ್ಣಾ ಯೋಜನೆ ರಾಷ್ಟ್ರೀಯ ಯೋಜನೆ ಆಗಲಿ: ಸಚಿವ ಎಚ್ಕೆಪಿ

ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ನೀರಾವರಿ ಭೂಮಿಗೆ ₹40 ಲಕ್ಷ, ಒಣಭೂಮಿಗೆ ₹30 ಲಕ್ಷ ಪರಿಹಾರ. ಇಷ್ಟು ಯೋಗ್ಯ ಪರಿಹಾರ ಬೇರೆ ಎಲ್ಲೂ ಕೊಟ್ಟಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಸರ್ಕಾರ ಬದ್ಧತೆ ಎಷ್ಟಿದೆಯೋ, ನಿಮ್ಮ ತ್ಯಾಗವೂ ಅಷ್ಟೇ ಕಾರಣವಾಗಿದೆ. ಮನೆ, ಮಠ, ಆಸ್ತಿ ಬಿಟ್ಟು ನೀವು ಬಂದ್ರಲ್ಲಾ ಅದು ಮುಖ್ಯವಾದದ್ದು ಎಂದರು.

ಕೃಷ್ಣಾ ಯೋಜನೆ ರಾಷ್ಟ್ರೀಯ ಯೋಜನೆ ಆಗಬೇಕು. ಅಂತಹ ಯೋಜನೆಗೆ ಕೇಂದ್ರ ಸರ್ಕಾರ ಮೋದಿ ಎಷ್ಟು ಕೊಡುತ್ತೀರಿ ಎಂದು ಕೇಳುವುದು ನಮ್ಮ ಹಕ್ಕು. ಬಿಜೆಪಿಯವರು ಏನು ಮಾಡುತ್ತಿದ್ದಾರೆ? ಬಿಜೆಪಿ ಸರ್ಕಾರ ಬ್ರಿಜೇಶ್ ಕುಮಾರ್‌ ಅವರ ಆದೇಶದ ಬಗ್ಗೆ ಇವತ್ತಿಗೂ ನೊಟಿಫಿಕೇಶನ್ ಮಾಡಲಿಲ್ಲ. ಆ ಮೂಲಕ ಲಕ್ಷಾಂತರ ಎಕರೆ ನೀರಾವರಿ ಆಗೋದನ್ನು ತಪ್ಪಿಸಿದ್ದೀರಿ ಎಂದು ಬಿಜೆಪಿ ವಿರುದ್ಧ ಎಚ್.ಕೆ.ಪಾಟೀಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ಮೆಡಿಕಲ್ ಕಾಲೇಜ್ ಬಹುದಿನಗಳ ಕನಸು: ಸಚಿವ ತಿಮ್ಮಾಪುರ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಮಾತನಾಡಿ, ಸರ್ಕಾರಿ ಮೆಡಿಕಲ್ ಕಾಲೇಜ್ ಆಗಬೇಕೆಂಬುದು ಬಹುದಿನಗಳ ಕನಸಾಗಿತ್ತು. ಈ ಮೆಡಿಕಲ್ ಕಾಲೇಜಿಗಾಗಿ ಹಲವು ಹೋರಾಟಗಳು ನಡೆದಿದ್ದವು. ಆದರೆ ಹಿಂದಿನ ಸರ್ಕಾರಗಳು ಮೆಡಿಕಲ್ ಕಾಲೇಜು ಮಾಡಲಿಲ್ಲ. ಆಗ ಎಚ್.ವೈ.ಮೇಟಿಯವರು ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜು ತರುತ್ತೇನೆ ಎಂದಿದ್ದರು. ನಮ್ಮ ಸರ್ಕಾರ ಸರ್ಕಾರಿ ಕಾಲೇಜ್ ಮಂಜೂರು ಮಾಡಿ, ಶಂಕುಸ್ಥಾಪನೆ ಮಾಡಿದೆ ಎಂದು ಹೇಳಿದರು. ಕೃಷ್ಣಾ ಮೇಲ್ದಂಡೆ ಯೋಜನೆಗೆ ಮುಳುಗಡೆ ಆಗುವ ಜಮೀನುಗಳಿಗೆ ಪರಿಹಾರ ನೀಡುತ್ತಿದ್ದೇವೆ. ಮುಳುಗಡೆ ಆಗುವ ನೀರಾವರಿ ಜಮೀನಿಗೆ ₹40 ಲಕ್ಷ, ಖುಷ್ಕಿ ಜಮೀನಿಗೆ ₹30 ಲಕ್ಷ ನಿಗದಿ ಮಾಡಿದ್ದಾರೆ. ಸಿಎಂ ಹಾಗೂ ಡಿಸಿಎಂ ಮನಸ್ಸು ಮಾಡಿ ಈ ಯೋಜನೆಯನ್ನು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಕಾಮಗಾರಿಗೆ ಮುಳುಗಡೆ ಆಗುವ ಜಮೀನುಗಳಿಗೆ ಪರಿಹಾರ ನೀಡಲಿದ್ದಾರೆ ಎಂದರು.

ವಿರೋಧ ಪಕ್ಷಗಳು ಈ ಸರ್ಕಾರದಲ್ಲಿ ಹಣ ಇಲ್ಲ ಎಂದು ಹೇಳಿದರು. ಆದರೆ ನಮ್ಮ ಸರ್ಕಾರ ನೀರಾವರಿ ಯೋಜನೆಗೆ ಹಣ ಬಿಡುಗಡೆ ಮಾಡಿದೆ. ಬಸವಣ್ಣನ ಮೂರ್ತಿಯೂ ಬರುತ್ತೆ, ಶಿವಾಜಿ ಮಹಾರಾಜ ಮೂರ್ತಿಯನ್ನೂ ಸ್ಥಾಪಿಸುತ್ತೇವೆ. ನಾವು ಯಾರ ವಿರೋಧಿಯೂ ಅಲ್ಲ, ಎಲ್ಲ ಸಮಾಜದವರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ. ಬಾಗಲಕೋಟೆ ನಡುಗಡ್ಡೆ ಪ್ರದೇಶವಾಗಿರುವ ಕಿಲ್ಲಾ ಏರಿಯಾವನ್ನು ಮುಳುಗಡೆ ಪ್ರದೇಶ ಎಂದು ಘೋಷಣೆ ಮಾಡಬೇಕೆಂದು ಸಚಿವ ತಿಮ್ಮಾಪುರ ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೃದ್ಧೆಗೆ ಸಂಕೀರ್ಣ ಸೊಂಟದ ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆ: ವೃದ್ಧೆ ಚೇತರಿಕೆ
ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಸ್ನಾತಕೋತ್ತರ ವಿದ್ಯಾರ್ಥಿ ಸಾವು