ತಿಪಟೂರು: ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಉಪವಿಭಾಗಾಧಿಕಾರಿ ಸಪ್ತಶ್ರೀಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಮುಖಂಡ ಕುಪ್ಪಾಳು ರಂಗಸ್ವಾಮಿ ಮಾತನಾಡಿ, ಸಂವಿಧಾನದ ಮೂಲ ತತ್ವದ ಆಶಯವೇ ಶೋಷಿತರು ಮುಖ್ಯವಾಹಿನಿಗೆ ಬರಬೇಕು ಎನ್ನುವುದು. ಸರ್ವರಿಗೂ ಸಮಪಾಲು ದೊರೆಯಬೇಕಾದರೆ ಒಳಮೀಸಲಾತಿಯ ಅಗತ್ಯವಿದೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮಾದಿಗ ಸಮಾಜ ಮೀಸಲಾತಿ ಸವಲತ್ತುಗಳು ಜನಸಂಖ್ಯೆಯ ಆಧಾರದಲ್ಲಿ ದೊರೆಯದೆ ಅನ್ಯಾಯಕ್ಕೊಳಗಾಗಿದೆ ಎಂದರು.
ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳು ಒಳ ಮೀಸಲಾತಿ ಜಾರಿ ಅಧಿಕಾರವನ್ನು ಹೊಂದಿರುವುದಾಗಿ ಆದೇಶ ನೀಡಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಸಚಿವ ಸಂಪುಟದ ಮುಂದಿಟ್ಟು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.ಮುಖಂಡ ಪೆದ್ದಿಹಳ್ಳಿ ನರಸಿಂಹಯ್ಯ ಮಾತನಾಡಿ, ಒಳಮೀಸಲಾತಿ ಶೋಷಿತ ಸಮುದಾಯಗಳ ಸಂವಿಧಾನ ಬದ್ಧ, ನ್ಯಾಯಸಮ್ಮತ ಹಕ್ಕು. ನಾವು ಯಾವುದೇ ಜಾತಿ ಜನಾಂಗಗಳ ವಿರೋಧಿಗಳಲ್ಲ. ನಮಗೆ ಮೀಸಲಾತಿಯಲ್ಲಿ ಆಗಿರುವಂತಹ ಅನ್ಯಾಯವನ್ನು ಸರಿಪಡಿಸಲು ಒಳಮಿಸಲಾತಿ ಜಾರಿಯಾಗಬೇಕೆಂದು ಹೋರಾಟ ನಡೆಸುತ್ತಿದ್ದೇವೆ. ನಮ್ಮ ನ್ಯಾಯ ಸಮ್ಮತವಾದ ಹೋರಾಟವನ್ನು ಸರ್ಕಾರ ಪರಿಗಣಿಸಿ ಒಳಮಿಸಲಾತಿಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷ ಬೇವಿನಹಳ್ಳಿ ಚೆನ್ನಬಸವಯ್ಯ, ನಾಗತಿಹಳ್ಳಿ ಕೃಣಮೂರ್ತಿ, ಮಾಜಿ ಜಿ.ಪಂ. ಸದಸ್ಯ ಶಾಂತಪ್ಪ, ಚಂದ್ರಶೇಖರ್, ಬಸವರಾಜು, ರಾಘವೇಂದ್ರ, ಹರೀಶ್‌ಗೌಡ, ಹತ್ಯಾಳ್‌ಮೂರ್ತಿ, ಸೋಮಶೇಖರ್, ಮಂಜುನಾಥ, ಕಾಂತರಾಜು, ಗೌಡನಕಟ್ಟೆ ಅಶೋಕ್ ಶೆಟ್ಟಿಹಳ್ಳಿ ಕಲ್ಲೇಶ್, ಲಿಂಗದೇವರು, ಟಿ.ರಾಜು.ಜಗದಾರ್ಯ, ಟಿ.ಕೆ ಕುಮಾರ್ ಇದ್ದರು.