ಕನ್ನಡಪ್ರಭ ವಾರ್ತೆ ಕಿಕ್ಕೇರಿ/ಮಂಡ್ಯ
ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ತಾಲೂಕುಗಳ ಪ್ರತಿ ಗ್ರಾಮದಲ್ಲೂ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.ಕೆ.ಆರ್.ಪೇಟೆ ತಾಲೂಕಿನ ವಡಕಹಳ್ಳಿಯಲ್ಲಿ ಚನ್ನರಾಯಪಟ್ಟಣ- ಮೈಸೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಹಂತದಲ್ಲಿ ಆರೋಗ್ಯ ಮೇಳದ ಮೂಲಕ ಜನರಿಗೆ ಆರೋಗ್ಯ ಸೇವೆ ನೀಡುವ ಬದಲು ಪ್ರತಿ ಗ್ರಾಮದಲ್ಲಿ ಆರೋಗ್ಯ ಮೇಳದ ಮೂಲಕ ವಿಧಾನಸಭಾ ಕ್ಷೇತ್ರ, ಹೋಬಳಿ ಮಟ್ಟದಲ್ಲಿ ನಡೆದು ಪ್ರತಿ ಹಳ್ಳಿ ಜನತೆಗೆ ಎಕ್ಸ್‌ರೇ ಮತ್ತಿತರ ಸೌಲಭ್ಯ ಸ್ಥಳದಲ್ಲಿಯೇ ಸಿಗವಂತೆ ಮಾಡಲು ಚಿಂತಿಸಲಾಗಿದೆ ಎಂದರು.ನಿಮ್ಮ ಆರ್ಶೀವಾದದಿಂದ ಚುನಾವಣೆಯಲ್ಲಿ ಗೆದ್ದು ಕೇಂದ್ರದಲ್ಲಿ ಸಚಿವನಾಗಿದ್ದೇನೆ. ನನ್ನ ಮೇಲೆ ದೊಡ್ಡ ಮಟ್ಟಿನ ನಿರೀಕ್ಷೆ ಇಟ್ಟುಕೊಂಡು ಆರ್ಶೀವಾದ ಮಾಡಿದ್ದೀರಿ. ನಾನು ಕೆಲಸದ ಒತ್ತಡಗಳ ನಡುವೆಯೂ ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಿದ್ದೇನೆ ಎಂದರು.
ರಾಜ್ಯದಲ್ಲಿ ಬಾಣಂತಿಯರ ಸಾವು ನಿರಂತರವಾಗಿ ನಡೆಯುತ್ತಿದೆ. ಇದು ಆತಂಕದ ವಿಷಯ. ಜಿಲ್ಲೆಯ ಜನರ ಆರೋಗ್ಯ ದೃಷ್ಟಿಯಿಂದ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮೈಸೂರಿನ ಕೆ.ಆರ್.ನಗರ ಸೇರಿದಂತೆ ಎಂಟು ತಾಲೂಕಿನ ಪ್ರತಿ ಗ್ರಾಮದಲ್ಲೂ ಆರೋಗ್ಯ ತಪಾಸಣೆ ಮಾಡಿಸಲು ಚಿಂತನೆ ಮಾಡಲಾಗಿದೆ. ಈ ಬಗ್ಗೆ ಕೂಡ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇವೆ ಎಂದು ಹೇಳಿದರು.ಮಂಡ್ಯದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಕೆಲಸಕ್ಕಾಗಿ 4 ಸಾವಿರ ಅರ್ಜಿ ನೀಡಿದ್ದು 1500 ನಿರುದ್ಯೋಗಿಗಳಿಗೆ ಕೆಲಸ ನೀಡಲಾಗಿದೆ. ಐಟಿಐ ಯುವಕರಿಗೆ ಉದ್ಯೋಗಕ್ಕೆ ವಿಫುಲ ಅವಕಾಶವಿದೆ. ಹೊರಗಡೆ ಹೋಗಿ ಕೆಲಸ ಮಾಡಲು ಸಿದ್ಧರಾದರೆ ಕೆಲಸ ಕೊಡಿಸಲು ಬದ್ಧನಿದ್ದೇನೆ ಎಂದರು.
ಯುವ ಜನರಿಗೆ ಕೆಲಸ ರೂಪಿಸಲು ಇಂದು ಸಹ ಸಭೆ ಮಾಡಿದ್ದೇನೆ. ಕೆ.ಆರ್.ಪೇಟೆ ತಾಲೂಕಿನ ಅಭಿವೃದ್ಧಿ ಹಾಗೂ ಇತರೆ ಸಮಸ್ಯೆಗಳನ್ನು ಜನತೆ ಎದುರಿಸುತ್ತಿದ್ದಾರೆ. ಆರೋಗ್ಯದ ಜೊತೆಗೆ ಕೆರೆ- ಕಟ್ಟೆ, ಸೇತುವೆ ಹಾಳಾಗಿವೆ. ರಾಜ್ಯ ಸರ್ಕಾರ ಮೌನಕ್ಕೆ ಜಾರಿದೆ. ಇವುಗಳಿಗೆ ಯಾವ ಮೂಲದಿಂದ ಆರ್ಥಿಕ ಸಹಾಯ ಮಾಡಬಹುದು ಎಂದು ನಾನು ಯೋಚಿಸುತ್ತಿದ್ದೇನೆ ಎಂದರು. ಶ್ರೀರಂಗಪಟ್ಟಣದಿಂದ - ಅರಸೀಕೆರೆ ಮಾರ್ಗದವರಿಗೆ ರಸ್ತೆಯನ್ನು ಮೇಲ್ದರ್ಜೆಗೇರಿಸಲು ಯತ್ನಿಸಲಾಗುತ್ತಿದೆ. ತಾಲೂಕಿನಲ್ಲಿ ಚೆಕ್‌ಡ್ಯಾಂ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಗಮನ ಹರಿಸಲಾಗಿದೆ ಎಂದು ತಿಳಿಸಿದರು.ತಾಲೂಕಿನ ಶಾಸಕ ಎಚ್.ಟಿ. ಮಂಜು ಇರಲಿ ಕಾಂಗ್ರೆಸ್ ಶಾಸಕರಿಗೇ ಅನುದಾನದ ಕೊರತೆ ಕಾಡುತ್ತಿದೆ. ಅನುದಾನ ನೀಡದೆ ಅಭಿವೃದ್ಧಿ ಕಾಣದಾಗಿದೆ.ನೀರು, ಹಾಲಿನ ದರ ಎಲ್ಲವನ್ನೂ ಹೆಚ್ಚಿಸಲಾಗುತ್ತಿದೆ. ಆದರೆ, ಈ ಹೆಚ್ಚುವರಿ ಹಾಲಿನ ದರ ರೈತರಿಗೆ ಸಿಗಲಾರದು. ರೈತರ ದಾಖಲೆಗಳನ್ನು ಸರಿಪಡಿಸಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ರೈತರು ಎಂತಹ ಸಂಕಷ್ಟ ಬಂದರೂ ದೃತಿಗೆಡಬಾರದು ಎಂದು ಆತ್ಮಸ್ಥೈರ್ಯ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಎಚ್.ಟಿ.ಮಂಜು, ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕಿರಣ್, ಜೆಡಿಎಸ್ ತಾಲೂಕು ಅಧ್ಯಕ್ಷ ಜಾನಕೀ ರಾಂ, ಐಕನಹಳ್ಳಿ ಕೃಷ್ಣೇಗೌಡ, ಸಹಕಾರ ಮಾರಾಟ ಮಂಡಳಿಯ ನಿರ್ದೇಶಕ ಎಸ್.ಎಲ್. ಮೋಹನ್, ಗದ್ದೆಹೊಸೂರು ಅಶ್ವಿನ್‌ಕುಮಾರ್, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ಡಿವೈಎಸ್‌ಪಿ ಚಲುವರಾಜು, ತಹಸೀಲ್ದಾರ್ ಅಶೋಕ್, ಇಒ ಸುಷ್ಮಾ, ವಕೀಲ ಧನಂಜಯಕುಮಾರ್, ಐನೋರಹಳ್ಳಿ ಮಲ್ಲೇಶ್, ಮಲ್ಲೇನಹಳ್ಳಿ ಮೋಹನ್, ಕಡಹೆಮ್ಮಿಗೆ ರಮೇಶ್, ದಿಶಾ ಸಮಿತಿ ಸದಸ್ಯ ನರಸನಾಯಕ, ಸಿಪಿಐ ಸುಮಾರಾಣಿ ಮತ್ತಿತರರಿದ್ದರು.