ಬುದ್ಧ, ಬಸವ, ಅಂಬೇಡ್ಕರ್‌ ಆಶಯದಂತೆ ಸರ್ಕಾರ ಕರ್ತವ್ಯ

KannadaprabhaNewsNetwork | Published : Jan 27, 2025 12:45 AM

ಸಾರಾಂಶ

ಸಂವಿಧಾನವೇ ನಮ್ಮ ರಾಷ್ಟ್ರದ ಸರ್ವೋಚ್ಛ ಕಾನೂನು ಆಗಿದ್ದು, ಪ್ರತಿಯೊಬ್ಬರೂ ಸಂವಿಧಾನ ಆಶಯಗಳನ್ನು ಗೌರವಿಸುವ ಜೊತೆಗೆ ಅದರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿಕೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಸಂವಿಧಾನವೇ ನಮ್ಮ ರಾಷ್ಟ್ರದ ಸರ್ವೋಚ್ಛ ಕಾನೂನು ಆಗಿದ್ದು, ಪ್ರತಿಯೊಬ್ಬರೂ ಸಂವಿಧಾನ ಆಶಯಗಳನ್ನು ಗೌರವಿಸುವ ಜೊತೆಗೆ ಅದರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ, ಅವರು ಸಂದೇಶ ನೀಡಿದರು. ಬುದ್ಧ, ಬಸವ, ಅಂಬೇಡ್ಕರ್‌ ಆಶಯದಂತೆ ಸರ್ವರಿಗೂ ಸಮಪಾಲು, ಸಮಬಾಳು ತತ್ವದಡಿ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸೌಲಭ್ಯ ತಲುಪಿಸುವ ಕೆಲಸ ತಮ್ಮ ಸರ್ಕಾರ ಮಾಡುತ್ತಿದೆ ಎಂದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಜನರಿಗೆ ಮರಳು ಲಭ್ಯವಾಗುವಂತೆ ಜಿಲ್ಲೆಯ ತುಂಗಭದ್ರಾ ನದಿಪಾತ್ರದಲ್ಲಿ 24 ಮರಳಿನ ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಇದರಲ್ಲಿ 4 ಬ್ಲಾಕ್‌ ಸರ್ಕಾರಿ ಕಾಮಗಾರಿಗಳಿಗೆ ಮರಳು ನೀಡುವುದಕ್ಕೆ ಮೀಸಲಿರುತ್ತವೆ. 20 ಬ್ಲಾಕ್‌ಗಳ ಜನರಿಗೆ ನಿಗದಿತ ದರದಲ್ಲಿ ಮರಳು ಸಿಗುವಂತೆ ಮಾಡಲು ಟೆಂಡರ್ ಕರೆಯಲಾಗಿದೆ. ಈ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಪೂರ್ಣವಾಗಲಿದ್ದು, ಜನರಿಗೆ ಅಗತ್ಯ ಮರಳು ಲಭ್ಯವಾಗಲಿದೆ ಎಂದು ಭರವಸೆ ನೀಡಿದರು.

ಮುಂಗಾರು, ಹಿಂಗಾರು ಜಿಲ್ಲೆಯಲ್ಲಿ ಉತ್ತಮವಾಗಿ ಆಗಿದ್ದು, ಜೀವನಾಡಿಯಾದ ಭದ್ರಾ ಅಣೆಕಟ್ಟೆ ಮೈದುಂಬಿದೆ. ಜಿಲ್ಲೆಯ ರೈತರು ಬೇಸಿಗೆ ಬೆಳೆ ಬೆಳೆಯಲು ಸನ್ನದ್ಧರಾಗುತ್ತಿರುವುದು ಖುಷಿಯ ಸಂಗತಿ. ಕಾಂಗ್ರೆಸ್‌ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಬೆಳವಣಿಗೆಗೆ ಉತ್ತೇಜಕವಾಗಿವೆ. ಜನರಿಗೆ ಸೌಲಭ್ಯಗಳನ್ನು ದೊರಕಿಸುವಲ್ಲಿ ಸರ್ಕಾರ ನುಡಿದಂತೆ ನಡೆದಿದೆ. ಐದೂ ಗ್ಯಾರಂಟಿಗಳಿಂದ ಒಟ್ಟು ₹1966 ಕೋಟಿ ಮೊತ್ತವನ್ನು ನೇರವಾಗಿ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಖಾತೆಗೆ ವರ್ಗಾಯಿಸಲಾಗಿದೆ ಎಂದರು.

ಶಕ್ತಿ ಯೋಜನೆಯಿಂದ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ದಾವಣಗೆರೆ ವಿಭಾಗದಿಂದ 6.78 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇದರ ಪ್ರಯಾಣ ವೆಚ್ಚವಾದ ₹190 ಕೋಟಿಯನ್ನು ಸರ್ಕಾರ ನೀಡಿದೆ. ಅನ್ನ ಭಾಗ್ಯದಡಿ ಜಿಲ್ಲೆಯಲ್ಲಿ 3.29 ಲಕ್ಷ ಬಿಪಿಎಲ್ ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿಗೆ ನಗದಾಗಿ ತಲಾ ₹170 ರಂತೆ ಒಟ್ಟು ₹287 ಕೋಟಿ ಡಿಬಿಟಿ ಮಾಡಲಾಗಿದೆ ಎಂದು ತಿಳಿಸಿದರು.

ಗೃಹ ಶಕ್ತಿಯಡಿ ಜಿಲ್ಲೆಯ 3.61 ಲಕ್ಷ ಯಜಮಾನಿಯರಿಗೆ ₹1039 ಕೋಟಿ ವರ್ಗಾಯಿಸಲಾಗಿದೆ. ಗೃಹಜ್ಯೋತಿಯಡಿ 4.37 ಲಕ್ಷ ಗ್ರಾಹಕರಿಗೆ ₹442 ಕೋಟಿ ವಿದ್ಯುತ್ ವೆಚ್ಚವಾಗಿ ಪಾವತಿಸಿದೆ. ಯುವನಿಧಿಯಡಿ 5802 ಪದವೀಧರ, ಡಿಪ್ಲೊಮಾ ಉತ್ತೀರ್ಣರಿಗೆ ನಿರುದ್ಯೋಗ ಭತ್ಯೆಯಾಗಿ ₹8.47 ಕೋಟಿ ಡಿಬಿಡಿ ಮಾಡಿದೆ. ಪ್ರಧಾನಮಂತ್ರಿ ಗ್ರಾಮೀಣ ಆವಾಸ್‌ನಡಿ 8510 ಮನೆ ಜಿಲ್ಲೆಗೆ ಮಂಜೂರಾಗಿವೆ. ಎನ್ಆರ್‌ಎಲ್‌ಎಂ ಸಂಜೀವಿನಿಯಡಿ 2 ಅಕ್ಕ ಕೆಫೆ ಮಂಜೂರಾಗಿವೆ. ದಾವಣಗೆರೆ ನಗರದಲ್ಲೊಂದು ಅಕ್ಕ ಕೆಫೆ ಶುರುವಾಗಿದೆ. ಅದನ್ನು ಮಹಿಳಾ ಸ್ವಸಹಾಯ ಸಂಘ ನಿರ್ವಹಿಸುತ್ತದೆ ಎಂದು ಸಚಿವ ಮಲ್ಲಿಕಾರ್ಜುನ ಮಾಹಿತಿ ನೀಡಿದರು.

ಆಕರ್ಷಕ ಪಥ ಸಂಚಲನ, ಸಾಂಸ್ಕೃತಕ ಕಾರ್ಯಕ್ರಮಗಳಿಗೆ ಪ್ರಶಸ್ತಿ ನೀಡಲಾಯಿತು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮನರಂಜಿಸಿತು. ಹಲವು ಗಣ್ಯರು, ಸಾಧಕರಿಗೆ ಗೌರವಿಸಲಾಯಿತು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮೇಯರ್ ಕೆ.ಚಮನ್‍ ಸಾಬ್, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಉಪ ಮೇಯರ್ ಸೋಗಿ ಶಾಂತಕುಮಾರ, ಪೂರ್ವವಲಯ ಪೊಲೀಸ್ ಮಹಾನಿರೀಕ್ಷಕ ರವಿಕಾಂತೇಗೌಡ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಗಣೇಶ ಹುಲ್ಮನಿ, ಸುಧಾ ಇಟ್ಟಿಗುಡಿ, ಆಶಾ ಉಮೇಶ, ಎಚ್.ಬಿ.ಮಂಜಪ್ಪ, ಡಿ.ಬಸವರಾಜ, ಎಸ್.ಮಲ್ಲಿಕಾರ್ಜುನ, ಮಾಗಾನಹಳ್ಳಿ ಬಿ.ಕೆ.ಪರಶುರಾಮ, ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.

ಉದ್ಘಾಟನೆ:

ದಾವಣಗೆರೆ ನಗರದ ವಿಶ್ವೇಶ್ವರಯ್ಯ ಉದ್ಯಾವನದಲ್ಲಿ ಹಾಗೂ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಸಂವಿಧಾನ ಪೀಠಿಕೆಯನ್ನು ಸ್ಥಾಪಿಸಲಾಗಿದ್ದು, ಗಣಿ ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದರು.

- - -

ಕೋಟ್‌ ದಾವಣಗೆರೆ ಪಾಲಿಕೆಗೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಮಂಜೂರಾದ ₹200 ಕೋಟಿ ಅನುದಾನಕ್ಕೆ ರೂಪಿಸಲಾದ ಕ್ರಿಯಾ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಟೆಂಡರ್ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿವೆ. ತೋಟಗಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಯಲ್ಲಿ ಕೆರೆ ತುಂಬಿಸುವ ಯೋಜನೆ, ನಾಲೆಗಳ ದುರಸ್ತಿ ನಮ್ಮ ಉದ್ದೇಶವಾಗಿದೆ

- ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ

- - - - (ಫೋಟೋ ಬರಲಿವೆ)

Share this article