ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ತುಮಕೂರು ಪಟ್ಟಣದ ಸದಾಶಿವನಗರದ ನಿವಾಸಿ ಉಮೇಶ್ (43) ಮೃತಪಟ್ಟ ವ್ಯಕ್ತಿಯಾಗಿದ್ದು, ಈತ ಬೆಂಗಳೂರಿನ ಸರ್ಕಾರಿ ಡಿಪ್ಲೊಮೋ ಕಾಲೇಜಿನಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ.
ಘಟನಾ ವಿವರ:ಮೃತ ಉಮೇಶ್ ಸ್ನೇಹಿತರ ಬಳಿ ಲಕ್ಷಾಂತರ ರುಪಾಯಿ ಸಾಲ ಪಡೆದಿದ್ದನು ಎನ್ನಲಾಗಿದ್ದು, ಪ್ರತಿನಿತ್ಯ ಸಾಲಕೊಟ್ಟವರು ಹಣ ನೀಡುವಂತೆ ಪೀಡಿಸುತ್ತಿದ್ದರು. ಕಳೆದ ವಾರದ ಹಿಂದೆಯಷ್ಟೇ ಮನೆಯ ಹತ್ತಿರ ಸಹ ಹೋಗಿ ಸಾಲ ವಾಪಾಸ್ ನೀಡುವಂತೆ ಗಲಾಟೆ ಮಾಡಿದ್ದರು. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪಟ್ಟಣದ ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ಗುರು ಲಾಡ್ಜ್ ಗೆ ಸೆ.21ರಂದು ಸಂಜೆ ಬಂದಿದ್ದು ರೂಮ್ ಮಾಡಿದ್ದಾನೆ. ನಂತರ ಮರುದಿನ ಬೆಳಗ್ಗೆ 6.30ರ ಸಮಯದಲ್ಲಿ ಲಾಡ್ಜ್ ನಿಂದ ಹೊರಬಂದು ನೀರು ಹಾಗೂ ಜ್ಯೂಸ್ ತೆಗೆದುಕೊಂಡು ಹೋಗಿದ್ದಾನೆ. ಬೆಳಗ್ಗೆ 11 ಗಂಟೆಗೆ ಲಾಡ್ಜ್ ನವರು ಬಾಗಿಲು ತಟ್ಟಿದ್ದಾರೆ. ಬಾಗಿಲು ತೆಗೆಯದಿದ್ದಾಗ ಕಿಟಕಿ ತೆಗೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಮುನ್ನ ಮೃತ ಉಮೇಶ್ ಡೆತ್ ನೋಟ್ ಬರೆದಿದ್ದು, ಸಾಲಗಾರರ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ತಿಳಿಸಿ, ಕಿರುಕುಳ ಕೊಡುತ್ತಿದ್ದ ಒಂದಿಬ್ಬರ ಹೆಸರನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ಉಮೇಶ್ ಸಾಲಗಾರರ ಕಿರುಕುಳದಿಂದ ನನ್ನ ಹಾಗೂ ನಮ್ಮ ಕುಟುಂಬದ ಮಾನ- ಮಾರ್ಯಾದೆ ಹಾಳಾಗಿದೆ. ನಾನು ಜೀವಂತವಾಗಿರುವುದಿಲ್ಲ, ಮಕ್ಕಳನ್ನು ಚೆನ್ನಾಗಿ ನೋಡಿಕೋ ಎಂದು ಹೆಂಡತಿ ಬಳಿ ಹೇಳಿದ್ದರೆ, ನಾನು ಸಾಯುತ್ತೇನೆ, ಕೊನೆಯದಾಗಿ ಬಾಯ್ ಎಂದು ಹೇಳಿ ಸ್ನೇಹಿತರಿಗೆ ತಿಳಿಸಿದ್ದನು ಎನ್ನಲಾಗಿದೆ.
ಸೆ.21ರಂದು ಮನೆಬಿಟ್ಟು ಬಂದ ನಂತರ ಸಂಜೆ ಮನೆಗೆ ಹೋಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರು ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಘಟನಾ ಸ್ಥಳಕ್ಕೆ ದಾಬಸ್‍ಪೇಟೆ ಪೊಲೀಸರು, ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.