ಗದಗ: ಸರ್ಕಾರಿ ನೌಕರರು ತಮಗೆ ಸಿಕ್ಕಿರುವ ಸರ್ಕಾರಿ ಕೆಲಸದ ಮೂಲಕ ಸಾರ್ವಜನಿಕರ ಸೇವೆಯನ್ನು ಮಾಡಿ ಜನರ ಬದುಕನ್ನು ಹಸನಾಗಿಸುವ ಮಹತ್ವದ ಪಾತ್ರವನ್ನು ನಿಭಾಯಿಸಬೇಕು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು. ಅವರು ಮಂಗಳವಾರ ನಗರದ ಭಾರತ ರತ್ನ ಪಂಡಿತ ಭೀಮಸೇನ ಜೋಶಿ ರಂಗ ಮಂದಿರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಸಂಯುಕ್ತಾಶ್ರಯದಲ್ಲಿ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಪ್ರಯುಕ್ತ 2023-24, 2024-25, 2025-26ನೇ ಸಾಲಿನ ಸರ್ವೊತ್ತಮ ಸೇವಾ ಪ್ರಶಸ್ತಿ ಪ್ರದಾನ, ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮಹತ್ವದ ಸಾಧನೆ ಮಾಡಿರುವವರನ್ನು ಗೌರವಿಸಿ ಸನ್ಮಾನಿಸುವ ಕ್ಷಣ ಇದಾಗಿದೆ. ಈ ಕಾರ್ಯಕ್ರಮ ವೈಯಕ್ತಿಕವಾಗಿ ನನಗೆ ಬಹಳಷ್ಟು ಖುಷಿ ನೀಡಿದೆ. ಇಷ್ಟೊಂದು ಪ್ರಮಾಣದಲ್ಲಿ ಸಾಧನೆ ಮಾಡಿದ ಅಧಿಕಾರಿಗಳು ನಮ್ಮ ಜಿಲ್ಲೆಯಲ್ಲಿದ್ದಾರೆ ಎನ್ನುವುದು ಕೂಡಾ ಹೆಮ್ಮೆಯ ವಿಷಯವೇ ಆಗಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದಲ್ಲಿ ಅಲ್ಲಿ ಅಧಿಕಾರಿ ವರ್ಗದ ಪಾತ್ರವೂ ಪ್ರಮುಖವಾಗಿರುತ್ತದೆ ಎಂದರು.
ಅಧಿಕಾರಿಗಳು ದರ್ಪ, ದೌಲತ್ತು ಬದಿಗಿಟ್ಟು ಸಾರ್ವಜನಿಕರ ಸೇವೆ ಮಾಡುವ ಮನಸ್ಥಿತಿ ಹೊಂದಬೇಕು. ಸಾರ್ವಜನಿಕರ ತೆರಿಗೆ ಹಣದಿಂದ ನಾವೆಲ್ಲರೂ ಜೀವನ ನಡೆಸುತ್ತಿದ್ದೇವೆ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಂಡು. ಸಾರ್ವಜನಿಕರನ್ನು ಗೌರವದಿಂದ ಕಾಣಬೇಕು. ಅವರ ಸಮಸ್ಯೆ ನೀಗಿಸಿಕೊಟ್ಟು ಅದರಲ್ಲಿ ಸಂತೋಷ ಕಾಣಬೇಕು. ಗದಗ ಜಿಲ್ಲೆ ಎಲ್ಲಾ ವಿಭಾಗದಲ್ಲಿಯೂ ರಾಜ್ಯಕ್ಕೆ ನಂಬರ್ 1 ಆಗಬೇಕು ಎನ್ನುವುದು ನನ್ನ ಆಶಯವಾಗಿದೆ. ಅದಕ್ಕೆ ಎಲ್ಲರೂ ಕೈಜೋಡಿಸಬೇಕು, ಅವಿರತವಾಗಿ ಶ್ರಮಿಸಬೇಕು ಎಂದರು.
ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಯಾವುದೇ ಸರ್ಕಾರ ಜನ ಮೆಚ್ಚುಗೆಗೆ ಪಾತ್ರವಾಗಬೇಕಾದರೇ ಅದು ರಾಜ್ಯ ಸರ್ಕಾರಿ ನೌಕರರಿಂದ ಮಾತ್ರ ಸಾಧ್ಯ, ಸರ್ಕಾರಗಳ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಜನರ ಮನೆಗೆ ತಲುಪಿಸುವವರು ಸರ್ಕಾರಿ ನೌಕರರು. ಅವರನ್ನು ಗೌರವಿಸುವ ಸುಸಂದರ್ಭ ನಮಗೆಲ್ಲಾ ಒದಗಿ ಬಂದಿರುವುದು ಸಂತೋಷ ತಂದಿದೆ. ನೌಕರರ ನೆಮ್ಮದಿಯ ಬದುಕಿಗಾಗಿ ಒಪಿಎಸ್ ಯೋಜನೆ ಜಾರಿ ಮಾಡುವಂತೆ ಇದೇ ಸಂದರ್ಭದಲ್ಲಿ ಸಚಿವ ಎಚ್.ಕೆ. ಪಾಟೀಲರ ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಪ್ರಾಸ್ತಾವಿಕ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಜಿಪಂ ಸಿಇಓ ಭರತ್ ಎಸ್., ಎಸ್ಪಿ ಬಿ.ಎಸ್. ನೇಮಗೌಡ, ಎಡಿಸಿ ಅನ್ನಪೂರ್ಣ ಎಂ, ಎಸಿ ಗಂಗಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜೀಕರ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.