ಸರ್ಕಾರಿ ನೌಕರರು ಸಂಘಟಿತರಾಗಬೇಕು: ಷಡಾಕ್ಷರಿ

KannadaprabhaNewsNetwork | Published : Aug 10, 2024 1:35 AM

ಸಾರಾಂಶ

ಸರ್ಕಾರದ ಸೌಲಭ್ಯಗಳನ್ನು ಕಾನೂನು ಬದ್ಧವಾಗಿ ಪಡೆಯಲು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ನೌಕರರು ಸಂಪೂರ್ಣ ತೊಡಗಿಸಿಕೊಳ್ಳುವುದರ ಮೂಲಕ ಸಂಘಟಿತರಾಗುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದರು. ಚಾಮರಾಜನಗರದಲ್ಲಿ ನೂತನ ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸರ್ಕಾರದ ಸೌಲಭ್ಯಗಳನ್ನು ಕಾನೂನು ಬದ್ಧವಾಗಿ ಪಡೆಯಲು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ನೌಕರರು ಸಂಪೂರ್ಣ ತೊಡಗಿಸಿಕೊಳ್ಳುವುದರ ಮೂಲಕ ಸಂಘಟಿತರಾಗುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದರು.ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘ ಹಾಗೂ ಜಿಲ್ಲಾ ಶಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಅಭಿನಂದನೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಪ್ರತಿಭಾವಂತ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಲೆ, ಸಂಸ್ಕೃತಿಯ ನೆಲೆವೀಡಾಗಿರುವ ಚಾಮರಾಜನಗರ ಜಿಲ್ಲೆ ಶೈಕ್ಷಣಿಕವಾಗಿಯೂ ಮುನ್ನೆಡೆಯಬೇಕಾಗಿದೆ. ಇಲ್ಲಿನ ಮಕ್ಕಳು ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಗಳನ್ನು ಪಡೆಯಲು ಉತ್ತಮ ಶೈಕ್ಷಣಿಕ ಸಾಧನೆಗೈದು ಜಿಲ್ಲೆಗೆ ಕೀರ್ತಿ ತರಬೇಕು. ಇದು ಸ್ಪರ್ಧಾತ್ಮಕ ಯುಗವಾಗಿದ್ದು, ಯಾವುದು ಕಠಿಣ ವಿಷಯವಲ್ಲ. ಸತತ ಪ್ರಯತ್ನಕ್ಕೆ ಯಶಸ್ಸು ಸಿಗಲಿದೆ. ಈ ನಿಟ್ಟಿನಲ್ಲಿ ನೌಕರರ ಮಕ್ಕಳನ್ನು ಹುರಿದುಂಬಿಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಪ್ರತಿವರ್ಷ ಪ್ರತಿಭಾವಂತ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದೆ ಎಂದರು.

ಸಾಮಾನ್ಯವಾಗಿ ಸರ್ಕಾರಿ ನೌಕರರು ಮಧ್ಯಮ ವರ್ಗದ ಕುಟುಂಬದವರಾಗಿದ್ದು, ಕುಟುಂಬ, ಮಕ್ಕಳು, ವೃದ್ಧ ತಂದೆ ತಾಯಿಗಳನ್ನು ಸಲಹುವುದು ಸೇರಿದಂತೆ ನೌಕರರ ಬದುಕು ಸಾಕಷ್ಟು ಸಮಸ್ಯೆಗಳಿಂದ ಕೂಡಿದೆ. ಎಲ್ಲವನ್ನು ಬದಿಗಿಟ್ಟು ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದು ನೌಕರರಿಗಿದೆ. ನೌಕರರು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸರ್ಕಾರಿ ಸೇವೆ ಜನಸಾಮಾನ್ಯರಿಗೆ ತಲುಪಿಸುವಲ್ಲಿ ವಿಳಂಬವಾಗಬಾರದು. ಯಾವುದೇ ವ್ಯಕ್ತಿಗೂ ಅನ್ಯಾಯವಾದರೂ ಅವರ ಪರ ಧ್ವನಿ ಎತ್ತಬೇಕು ನೌಕರರಿಗೆ ಎಂದು ಕಿವಿಮಾತು ಹೆಳಿದರು. ನೌಕರರು ಸರ್ಕಾರದ ಸಂಕಷ್ಟದ ಸಮಯದಲ್ಲಿ ಉದಾರ ದೇಣಿಗೆ ನೀಡಿದ್ದಾರೆ. ಪ್ರಸ್ತುತ ಸರ್ಕಾರವು 7ನೇ ವೇತನ ಆಯೋಗ ಜಾರಿ ಮಾಡಿದ್ದು, ಮುಂದಿನ ದಿನಗಳಲ್ಲಿ ಎನ್.ಪಿ.ಎಸ್ ನಿಂದ ಒ.ಪಿ.ಎಸ್ ಹಾಗೂ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಮತ್ತು ಶಿಕ್ಷಕರ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸಲು ಮುಂದಾಗುವುದು. ಈ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಸಂಘಟನೆಯನ್ನು ಬಲಪಡಿಸಲಾಗುತ್ತಿದೆ ಎಂದು ರಾಜ್ಯಾಧ್ಯಕ್ಷ ಷಡಾಕ್ಷರಿ ಹೇಳಿದರು.

ಸರ್ಕಾರಿ ನೌಕರರಲ್ಲಿ ವೃತ್ತಿಪರತೆ ಕುರಿತು ಉಪನ್ಯಾಸ ನೀಡಿದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಜಯಣ್ಣ ಮಾತನಾಡಿ, ಸರ್ಕಾರದ ಎಲ್ಲ ಹಂತದ ಹುದ್ದೆಗಳ ಸಮರ್ಪಕ ಕೆಲಸ ನಿರ್ವಹಣೆಗಾಗಿ ಕೌಶಲ್ಯತೆ ಹಾಗೂ ಪರಿಣತಿಯನ್ನು ನೌಕರರು ಹೊಂದಿರಬೇಕು. ನೈತಿಕತೆ ಹಾಗೂ ಸಂವಹನ ಕೌಶಲ್ಯವಿರಬೇಕು. ಮಾದರಿ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಗೌರವ ನೀಡಬೇಕು ಎಂದರು.

ಕೇಂದ್ರ ಸಂಘದ ಉಪಾಧ್ಯಕ್ಷ ಎಸ್. ಬಸವರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ 103 ವರ್ಷಗಳ ಇತಿಹಾಸವಿದೆ. ನಮ್ಮದು ಪಕ್ಷಾತೀತ, ಧರ್ಮಾತೀತ, ಜಾತ್ಯಾತೀತ ಸಂಘಟನೆಯಾಗಿದ್ದು, ನೌಕರರ ಸಮಸ್ಯೆಗಳಿಗೆ ಸ್ಪಂದಿಸುವುದು ಸಂಘದ ಇಚ್ಛಾಶಕ್ತಿಯಾಗಿದೆ ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಪ್ರತಿಭಾವಂತ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಕ್ಕಳಿಗೆ ನಗದು ಬಹುಮಾನ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕ್ರೀಡೆಗಳಲ್ಲಿ ಉತ್ತಮ ಸಾಧನಗೈದ ಕ್ರೀಡಾಪಟುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಜಿಪಂ ಯೋಜನಾಧಿಕಾರಿ ಕಿರಣ್ ಪಢ್ನೇಕರ್, ಜಿಲ್ಲಾ ಖಜಾನೆಯ ಉಪನಿರ್ದೇಶಕಿ ಸುಲೋಚನ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘದ ಉಪಾಧ್ಯಕ್ಷರಾದ ಶ್ರೀನಿವಾಸ್, ಹರ್ಷ, ಗಿರೀಶ್, ಗಿರಿಗೌಡ, ಸಿದ್ದೇಶ, ಮಲ್ಲಿಕಾರ್ಜುನ, ರುದ್ರಪ್ಪ, ವೇಣುಗೋಪಾಲ್, ಕೃಷ್ಣಮೂರ್ತಿ, ಸೋಮಶೇಖರ್, ಜಿಲ್ಲಾ ಶಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಮಹದೇವಸ್ವಾಮಿ, ಖಜಾಂಚಿ ಎಸ್. ಮಹದೇವಯ್ಯ, ತಾಲೂಕು ಅಧ್ಯಕ್ಷರಾದ ಅಲೆಗ್ಜಾಂಡರ್, ವೈ.ಎಂ. ಮಂಜುನಾಥ, ಎಚ್.ಎಸ್. ಪ್ರಸಾದ್, ಸಂಘಟನಾ ಕಾರ್ಯದರ್ಶಿ ಎಂ. ವೀರಭದ್ರಸ್ವಾಮಿ, ಉಪಾಧ್ಯಕ್ಷರು, ಪದಾಧಿಕಾರಿಗಳು, ಇತರರು ಉಪಸ್ಥಿತರಿದ್ದರು.

Share this article